ಮಡಿಕೇರಿ, ಮಾ. 17: ಕೊಡಗು ಜಿಲ್ಲೆಯಲ್ಲಿ ನಾಲ್ಕನೇ ತಾಲ್ಲೂಕಾಗಿ ಪೊನ್ನಂಪೇಟೆಯನ್ನು ಅಧಿಕೃತವಾಗಿ ಉದ್ಘಾಟಿಸುವ ದಿನದಂದೇ 5ನೇ ತಾಲ್ಲೂಕಾಗಿರುವ ‘ಕುಶಾಲನಗರ’ವನ್ನು ಕೂಡ ಉದ್ಘಾಟಿಸಬೇಕೆಂದು ಕುಶಾಲನಗರ ವಕೀಲರ ಸಂಘÀ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು, ಪೊನ್ನಂಪೇಟೆ ಮತ್ತು ಕುಶಾಲನಗರ ಕೊಡಗು ಜಿಲ್ಲೆಯ ಅವಳಿ ತಾಲೂಕುಗಳಾಗಿದ್ದು, ಎರಡು ತಾಲೂಕುಗಳ ರಚನೆಗೆ ಸಾಕಷ್ಟು ಹೋರಾಟಗಳು ನಡೆದು ಯಶಸ್ಸು ದೊರೆತಿದೆ. ಇದೀಗ ಪೊನ್ನಂಪೇಟೆ ತಾಲೂಕಿನ ಉದ್ಘಾಟನೆಯ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಅದೇ ದಿನಾಂಕದಂದು ಮುಖ್ಯಮಂತ್ರಿಗಳ ಮೂಲಕ ನೂತನ ಕುಶಾಲನಗರ ತಾಲೂಕನ್ನು ಕೂಡ ಉದ್ಘಾಟನೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರಇದೇ ಸಂದರ್ಭ ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರದ ಬಗ್ಗೆ ವಿಷಯ ಪ್ರಸ್ತಾಪಿಸಿದ ನಾಗೇಂದ್ರ ಬಾಬು, ಹಾಲಿ ಇರುವ ಮೈಸೂರು ಕ್ಷೇತ್ರದಿಂದ ವಿಂಗಡಣೆÉ ಮಾಡಿ, ಕೊಡಗು ಜಿಲ್ಲೆಯಿಂದಲೇ ಸ್ವತಂತ್ರ ಸಂಸದರ ಆಯ್ಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.ಭೌಗೋಳಿಕವಾಗಿ ಕೊಡಗು ಕರ್ನಾಟಕ ದಲ್ಲಿಯೇ ಅತೀ ಚಿಕ್ಕ ಜಿಲ್ಲೆಯಾಗಿದೆ. ರಾಷ್ಟ್ರಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿರುವುದಲ್ಲದೆ ಕಾಫಿ ಕಣಜದ ರೂಪದಲ್ಲಿ ಕೇಂದ್ರದ ಬೊಕ್ಕಸ ತುಂಬಿಸುತ್ತಿದೆ. ರಾಷ್ಟ್ರದ ಮೂರು ರಕ್ಷಣಾ ದಳಗಳಲ್ಲಿ ಕೊಡಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುತ್ತಿದ್ದಾರೆ. 1956 ರ ಆಸುಪಾಸಿನಲ್ಲಿ ಕೊಡಗು ಜಿಲ್ಲೆಯು ‘ಸಿ’ ರಾಜ್ಯದ ಸ್ಥಾನಮಾನದೊಂದಿಗೆ ಪ್ರತ್ಯೇಕ ಶಾಸನಸಭೆಯನ್ನು ಸಹ ಹೊಂದಿತ್ತು. ಆ ಸಂದರ್ಭ ಕೇಂದ್ರದ ರೈಲ್ವೆ ಸಚಿವರಾಗಿ ಸಿ.ಎಂ. ಪೂಣಚ್ಚ ಸೇವೆ ಸಲ್ಲಿಸಿದ್ದು ಈಗ ಇತಿಹಾಸ.
ಆ ನಂತರದ ದಿನಗಳಲ್ಲಿ ಕೇಂದ್ರದಲ್ಲಿ ಕೊಡಗನ್ನು ಪ್ರತಿನಿಧಿಸಿದ ಸ್ಥಳೀಯರ ಸಂಖ್ಯೆ ವಿರಳ. ಈ ಹಿಂದೆ ಕೊಡಗು, ಮಂಗಳೂರು ಲೋಕಸಭಾ ಕ್ಷೇತ್ರವಿತ್ತು. ನಂತರ ಮೈಸೂರಿನೊಂದಿಗೆ ಕೊಡಗು ಸೇರಿಕೊಂಡಿತು. ದೇಶದ ಎಲ್ಲಾ ಜಿಲ್ಲೆಗಳಿಗೂ ಬಹುತೇಕ ಪ್ರತ್ಯೇಕ ಸಂಸದರ ಸ್ಥಾನವಿದ್ದರು ಭೌಗೋಳಿಕ ವಿಸ್ತೀರ್ಣ ಮತ್ತು ಜನಸಂಖ್ಯೆಯ ಆಧಾರದಲ್ಲಿ ಸಂಸದೀಯ ಕ್ಷೇತ್ರದಿಂದ ಕೊಡಗು ವಂಚಿತಗೊಂಡಿದೆ.
(ಮೊದಲ ಪುಟದಿಂದ) ಅಸ್ಸಾಂ ರಾಜ್ಯದಲ್ಲಿ 5 ಲಕ್ಷ ಜನಸಂಖ್ಯೆಗೆ ಒಬ್ಬ ಸಂಸದನನ್ನು ಆಯ್ಕೆ ಮಾಡಲು ಅವಕಾಶವಿದೆ. ಅದೇ ರೀತಿಯಾಗಿ ಸಿಕ್ಕಿಂ ರಾಜ್ಯದಲ್ಲಿ 3.16 ಲಕ್ಷ ಮತದಾರರು ಸಂಸದನನ್ನು ಆಯ್ಕೆ ಮಾಡುವ ಅವಕಾಶವನ್ನು ಹೊಂದಿದ್ದಾರೆ.
ಕೊಡಗು ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 5.06 ಲಕ್ಷ ಜನರಿದ್ದಾರೆ. ಈ ಸಂಖ್ಯೆ 2021ರ ವೇಳೆಗೆ 6 ಲಕ್ಷ ತಲುಪುವ ನಿರೀಕ್ಷೆ ಇದೆ. ಆದ್ದರಿಂದ ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನು ಹೊಂದುವ ಎಲ್ಲಾ ಅರ್ಹತೆಯನ್ನು ಹೊಂದಿದೆ ಎಂದು ನಾಗೇಂದ್ರಬಾಬು ಅಭಿಪ್ರಾಯಪಟ್ಟರು.
ಮುಂಬರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಲಭಿಸುವಂತಾಗಲು ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ಅಲ್ಲದೆ, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರದ ಪರ ನಿರ್ಣಯ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಅವರು ಮನವಿ ಮಾಡಿದರು.
ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಮುಂಬರುವ ದಿನಗಳಲ್ಲಿ ಈಗ ಇರುವ ಎರಡು ವಿಧಾನಸಭಾ ಕ್ಷೇತ್ರಗಳನ್ನು ಕೂಡ ಕಳೆದುಕೊಳ್ಳುವ ಆತಂಕ ಎದುರಾಗಬಹುದೆಂದು ನಾಗೇಂದ್ರ ಬಾಬು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಬಿ. ಮೋಹನ್ ಉಪಸ್ಥಿತರಿದ್ದರು.