ಮಡಿಕೇರಿ, ಮಾ.17:ಕೊಡಗು ಜಿಲ್ಲೆಯಲ್ಲಿ ಕಾಡಾನೆ-ಮಾನವ ಸಂಘ ರ್ಷದಿಂದಾಗಿ ಹಲವಾರು ಸಾವು-ನೋವುಗಳು ಸಂಭವಿಸುತ್ತಿದ್ದು, ಕಾಡಾನೆ ಹಾವಳಿ ನಿಯಂತ್ರಣಕ್ಕೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಸಚಿವರಾದ ಆನಂದ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿಸ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಈ ಬಗ್ಗೆ ಮಾಹಿತಿ ಇದ್ದು, ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಕಾಡಾನೆ - ಮಾನವ ಸಂಘರ್ಷದ ಪ್ರಕರಣಗಳನ್ನು ತಪ್ಪಿಸಲು ಇಲಾಖೆಯು ಪ್ರಸಕ್ತ ಸಾಲಿನಲ್ಲಿ 51.37 ಕಿ.ಮೀ ಸೋಲಾರ್ ತಂತಿ ಬೇಲಿ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ.

ಅರಣ್ಯ ಅಂಚಿನ ಗ್ರಾಮಗಳಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ 45.41 ಕಿಮೀ ಆನೆ ತಡೆ ಕಂದಕ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು ಕಾಮಗಾರಿಯು ಪ್ರಗತಿಯಲ್ಲಿದೆ. ಅರಣ್ಯ ಅಂಚಿನ ಗ್ರಾಮಗಳಲ್ಲಿ ರೈತರಿಗೆ ಶೇ.50:50 ರ ರಿಯಾಯಿತಿಯನ್ನು ಸೋಲಾರ್ ಬೇಲಿ ನಿರ್ಮಾಣವನ್ನು ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಶೇ.50 ರಷ್ಟು ಧನ ಸಹಾಯ ನೀಡಲಾಗುತ್ತಿದ್ದು, 2019-20ನೇ ಸಾಲಿನಲ್ಲಿ 4.754 ಕಿಮೀ ಕಾಮಗಾರಿ ಪ್ರಗತಿಯಲ್ಲಿದೆ. ಕಾಡಾನೆ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು, 2019-20ನೇ ಸಾಲಿನಲ್ಲಿ 13.42 ಕಿ.ಮೀ ರೈಲ್ವೇ ಹಳಿಗಳ ಬ್ಯಾರಿಕೇಡ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಕಾಮಗಾರಿ ಪ್ರಗತಿಯಲ್ಲಿದೆ.

ಕೊಡಗು ಜಿಲ್ಲೆಯ ಅರಣ್ಯ ವೃತ್ತದ ವ್ಯಾಪ್ತಿಯ ವಲಯಗಳಲ್ಲಿ ಕಾಡಾನೆ ಹಾವಳಿಯನ್ನು ತುರ್ತಾಗಿ ನಿರ್ವಹಣೆ ಮಾಡಲು, 22 ರ್ಯಾಪಿಡ್ ರೆಸ್ಪಾನ್ಸ್ ತಂಡ (ಆರ್‍ಆರ್‍ಟಿ) ಗಳನ್ನು ರಚಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಆಯ್ದ ವಲಯಗಳಲ್ಲಿ 21 ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸುವ ತಂಡ ರಚನೆ ಮಾಡಲಾಗಿದೆ. ಕಾಡಾನೆ ಇರುವಿಕೆ ಅವುಗಳ ಚಲನವಲನಗಳ ಬಗ್ಗೆ ಸಾರ್ವಜನಿಕರಿಗೆ, ರೈತರಿಗೆ ಮಾಹಿತಿ ನೀಡುವ ಎಸ್‍ಎಂಎಸ್ ಅಲರ್ಟ್ ಸಿಸ್ಟಮ್ ಕಾರ್ಯ ನಿರ್ವಹಿ ಸುತ್ತಿದೆ. ವನ್ಯಪ್ರಾಣಿಗಳ ದಾಳಿಯಿಂದ ಬಾಧಿತ ಗ್ರಾಮಗಳ ಜನರೊಂದಿಗೆ ಸಂಪರ್ಕ ಸಭೆಯನ್ನು ನಡೆಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ 2014 ರಿಂದ ಸಾರ್ವಜನಿಕರಿಗೆ ಉಪಟಳ ನೀಡುತ್ತಿ ರುವ 11 ಕಾಡಾನೆಗ ಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ 9 ಆನೆಗಳಿದ್ದು ರೇಡಿಯೋ ಕಾಲರ್ ಗಳನ್ನು ಅಳವಡಿಸಿ, ಅವುಗಳ ಚಲನ ವಲನಗಳ ಬಗ್ಗೆ ನಿಗಾವಹಿಸಲಾಗುತ್ತಿದೆ. ಕೊಡಗು ಜಿಲ್ಲೆಯ ನಾಗರಹೊಳೆ ವ್ಯಾಪ್ತಿಯಲ್ಲಿ ರಕ್ಷಣಾ ಕೆಲಸಗಳಿಗಾಗಿ ಎಸ್‍ಟಿಪಿಎಫ್ ತಂಡ ನೇಮಕ ಮಾಡಿ ರಕ್ಷಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಸರ್ಕಾರದ ಆದೇಶ ಸಂಖ್ಯೆ 31 ಎಫ್‍ಪಿಸಿ 2016, ಬೆಂಗಳೂರು ಆಗಸ್ಟ್ 7,2017 ರನ್ವಯ ಕೊಡಗು ಜಿಲ್ಲೆಯಲ್ಲಿ ಮಾನವ-ವನ್ಯ ಜೀವಿ ಸಂಘರ್ಷ ದಿಂದ ಬಾಧಿತರಾದ ವ್ಯಕ್ತಿಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ನೀಡುವುದರ ಜೊತೆಗೆ, ಸದರಿ ಉದ್ದೇಶವನ್ನು ಈಡೇರಿಸಲು ಅಗತ್ಯವಿರುವ ಮೂಲ ಸೌಕರ್ಯ ಗಳನ್ನು ಒದಗಿಸುವ ಉದ್ದೇಶದಿಂದ ‘ಕೊಡಗು ಮಾನವ-ವನ್ಯಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನವನ್ನು ವೃತ್ತ ಮಟ್ಟದಲ್ಲಿ ಸ್ಥಾಪಿಸಲಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಕಾಡಾನೆ- ಮಾನವ ಸಂಘರ್ಷದ ಪ್ರಕರಣಗಳು ಹೆಚ್ಚಾಗಲು ನೈಜ ಕಾರಣಗಳೇನು ಎಂದು ಶಾಸಕರಾದ ವೀಣಾ ಅಚ್ಚಯ್ಯ ಅವರು ಸಚಿವರಾದ ಆನಂದ್ ಸಿಂಗ್ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಅರಣ್ಯಗಳ ಮೇಲೆ ಮಾನವ ಒತ್ತಡ ಹಾಗೂ ಜೈವಿಕ ಅಡೆತಡೆಗಳಿಂದ ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿದ್ದು ಕಾಡಾನೆಗಳ ಆವಾಸ ಸ್ಥಾನಗಳ ಮೇಲೆ ಒತ್ತಡ ಉಂಟಾಗುತ್ತಿರುವುದು ವಾಸ್ತವ ಸಂಗತಿಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಳ, ನಗರೀಕರಣ ಹಾಗೂ ಅನೇಕ ಅಭಿವೃದ್ಧಿ ಕಾರ್ಯ ಗಳಿಗೆ ಅರಣ್ಯ ಬಿಡುಗಡೆಯಿಂದಾಗಿ, ಕಾಡಾನೆಗಳು ವಾಸಿಸುವ ನೈಸರ್ಗಿಕ ಆವಾಸ ಸ್ಥಾನದ ಪ್ರದೇಶವು ಕಡಿಮೆಯಾಗಿರುತ್ತದೆ. ಅರಣ್ಯ ಪ್ರದೇಶಗಳ ಅಂಚಿನಲ್ಲಿರುವ ಖಾಸಗಿ ಜಮೀನುಗಳಲ್ಲಿರುವ ವಾಣಿಜ್ಯ ಬೆಳೆಗಳಾದ ಭತ್ತ, ತೆಂಗು, ಬಾಳೆ, ಹಲಸು ಮತ್ತು ಇತರೆ ಬೆಳೆಗಳ ಆಕರ್ಷಣೆಗೊಳಗಾಗಿ, ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳ ಮೇಲೆ ಕಾಡಾನೆಗಳು ದಾಳಿ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು, ಇದರಿಂದ ಅನೇಕ ರೈತರ ಬೆಳೆ ಹಾನಿಯಾಗು ವುದಲ್ಲದೇ, ಕೆಲವೊಮ್ಮೆ ಪ್ರಾಣಹಾನಿ, ಆಸ್ತಿ ನಷ್ಟ ಮುಂತಾದ ಪ್ರಕರಣಗಳು ನಡೆಯುತ್ತಿರುತ್ತದೆ ಎಂದರು.