ಮಡಿಕೇರಿ, ಮಾ. 18: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಬೇಸಿಗೆಯ ಸನ್ನಿವೇಶ ಒಂದು ರೀತಿಯಲ್ಲಿ ಜನತೆ ಯಲ್ಲಿ ಆತಂಕಮಿಶ್ರಿತ ಪರಿಸ್ಥಿತಿಯನ್ನು ತಂದೊಡ್ಡುತ್ತಿದೆ. ದಿನೇ ದಿನೇ ಬೇಸಿಗೆಯ ತಾಪ ಅಧಿಕಗೊಳ್ಳುತ್ತಿ ರುವುದು ಒಂದೆಡೆಯಾಗಿದ್ದರೆ, ಮತ್ತೊಂದೆಡೆ ಕೃಷಿ ಪ್ರಧಾನ ಜಿಲ್ಲೆಗೆ ಅದರಲ್ಲೂ ಆರ್ಥಿಕತೆಯ ಜೀವನಾಡಿಯಾದ ಕಾಫಿ ಬೆಳೆಗೆ ಈ ಸಂದರ್ಭದಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಕಾಫಿ ಹೂಗೂ ಮಳೆಯಾಗುತ್ತಿಲ್ಲ. ಜಿಲ್ಲೆಯ ಕೆಲವೆಡೆಗಳಲ್ಲಿ ಮಾತ್ರ ಅಲ್ಪಸ್ವಲ್ಪ ಮಳೆಯಾಗಿರುವುದು ಹೊರತುಪಡಿಸಿ ದರೆ ಇನ್ನೆಲ್ಲೂ ಸದ್ಯದ ಮಟ್ಟಿಗೆ ಮಳೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದರೊಂದಿಗೆ ಪ್ರತಿ ಗ್ರಾಮ ಗ್ರಾಮಗಳಲ್ಲಿ ಪ್ರಸ್ತುತ ಅಲ್ಲಲ್ಲಿನ ರೀತಿ-ನೀತಿಗೆ ಒಳಪಟ್ಟಂತೆ ವಿವಿಧ ದೇವಾಲಯಗಳಲ್ಲಿ ವಾರ್ಷಿಕ ಹಬ್ಬಗಳು ಜರುಗುವ ಸಂದರ್ಭವಿದು.

ಜಿಲ್ಲೆಯಲ್ಲಿ ನಡೆಯುವ ಈ ಹಬ್ಬಗಳಿಗೆ ತನ್ನದೇ ಆದ ಐತಿಹ್ಯಗಳು ಸಂಪ್ರದಾಯಗಳು ಇವೆ. ಬಹುತೇಕ ಆಚರಣೆಗಳು ದಿನ, ನಕ್ಷತ್ರಗಳಂತಹ ಕಟ್ಟುಪಾಡು, ಊರುಕಟ್ಟು-ನಾಡು ಕಟ್ಟು... ಈ ರೀತಿಯಾಗಿ ಹಬ್ಬದ ವಿವಿಧ ರೀತಿಯ ಕಟ್ಟುಪಾಡಿಗೆ ಒಳಪಟ್ಟೇ ನಡೆಯುವುದು ಕೊಡಗಿನ ವಿಶಿಷ್ಟತೆಗಳಲ್ಲಿ ಒಂದು...

ಆದರೆ ಈ ಬಾರಿ ಕೊರೊನಾ ಹೆಮ್ಮಾರಿಯ ಆತಂಕ ಇವೆಲ್ಲವಕ್ಕೂ ಅಡ್ಡಿಯಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಇಂತಹ ನಿರ್ದಿಷ್ಟವಾದ ಕಟ್ಟುಪಾಡುಗಳಿರದಂತಹ ಉತ್ಸವ-ಆಚರಣೆಗಳನ್ನು, ಸಂತೆಗಳನ್ನು, ಜಾತ್ರೆಗಳನ್ನು ಮುಂದೂಡ ಬಹುದಾದರೂ, ಇನ್ನಿತರ ಸಂಪ್ರದಾಯಗಳನ್ನು ಯಾವ ರೀತಿ ಮುರಿಯುವುದು ಎಂಬಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ಜನತೆ ಅಲ್ಲಲ್ಲಿ ಎದುರಿಸುವಂತಾಗಿದೆ.

ಕೊರೊನಾ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಸರಕಾರದಿಂದ ರಜೆ ಘೋಷಿಸಲ್ಪಟ್ಟಿವೆ. ಈ ರೋಗವನ್ನು ತಡೆಗಟ್ಟಲು ಸರಕಾರ ಹಲವು ಕ್ರಮಗಳನ್ನು ಜಾರಿಗೊಳಿಸಿವೆ. ಸಿನಿಮಾ ಮಂದಿರ, ಮಾಲ್‍ಗಳನ್ನು ಮುಚ್ಚಲಾಗಿದೆ. ಮದುವೆ ಮತ್ತಿತರ ಶುಭಕಾರ್ಯಗಳನ್ನು ಆದಷ್ಟು ಕಡಿಮೆ ಸಂಖ್ಯೆಯ ಜನತೆಯ ಪಾಲ್ಗೊಳ್ಳುವಿಕೆಯೊಂದಿಗೆ ಮುಗಿಸಲು ಸೂಚನೆ ನೀಡಲಾಗಿದೆ. ಆದರೆ ಧಾರ್ಮಿಕವಾದ ಆಚರಣೆಗಳನ್ನು ಯಾವ ರೀತಿಯಲ್ಲಿ ನಿರ್ಬಂಧಿಸುವುದು ಎಂಬದು ಜಿಲ್ಲೆಯಲ್ಲಿ ಪ್ರಸ್ತುತ ಎದುರಾಗುತ್ತಿರುವ ಡೋಲಾಯಮಾನ ವಾದ ಪರಿಸ್ಥಿತಿಯಾಗಿದೆ.

ಒಂದು ಊರು-ನಾಡು ಎಂದರೆ ಅಲ್ಲಿನ ಧಾರ್ಮಿಕ ಕೇಂದ್ರಗಳಿಗೆ ಒಳಪಟ್ಟಂತೆ ಸಾಕಷ್ಟು ಜನತೆ ಸೇರ್ಪಡೆಗೊಂಡಿರುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಭಕ್ತಿ ಪ್ರದಾನವಾದ ಹಕ್ಕು ಇಲ್ಲಿದೆ. ಇಲ್ಲಿ ನಿಯಂತ್ರಣ ಹೇಗೆ ಎಂಬದು ಪ್ರಶ್ನೆಯಾಗಿದೆ.

ಈ ಕಾರಣದಿಂದಲೋ ಏನೋ ಸಂತೆ... ಜಾತ್ರೆಗಳು ಮುಂದೂಡಲ್ಪಡು ತ್ತಿದ್ದರೂ, ಕೆಲವಾರು ದೇವಾಲಯಗಳ ಆಚರಣೆಗಳು ಎಂದಿನಂತೆಯೇ ಮುಂದುವರಿಯುತ್ತಿದೆ.

ಈ ಸ್ಥಿತಿಯ ನಡುವೆ ಮುಂದಿನ ದಿನಗಳ ಬದುಕೂ ಆತಂಕಕಾರಿ ಯಾಗುತ್ತಿವೆ.. ಕಾಫಿಗೆ ಹೂಮಳೆ ಬರುತ್ತಿಲ್ಲ. ಏರುತ್ತಿರುವ ತಾಪಮಾನದಿಂದಾಗಿ ನದಿ-ತೋಡು, ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ದಿನೇ ದಿನೇ ಇಳಿಕೆಯಾಗುತ್ತಿದೆ. ಎಲ್ಲಾ ರೀತಿಯ ವಾಣಿಜ್ಯೋದ್ಯಮ ಚಟುವಟಿಕೆಗಳು, ಕುಸಿದು ಬಿದ್ದಿವೆ... ಕಾರ್ಮಿಕರಿಗೂ ಕೆಲಸ ಇಲ್ಲವಾಗುತ್ತಿವೆ. ಎಲ್ಲೆಲ್ಲೂ ಒಂದು ರೀತಿಯ ಅಘೋಷಿತ ಬಂದ್‍ನಂತಹ ಚಿತ್ರಣ ಜಿಲ್ಲೆಯಲ್ಲಿ ಗೋಚರಿಸುತ್ತಿದ್ದು, ಈ ಪರಿಸ್ಥಿತಿ ಇನ್ನೆಷ್ಟು ದಿನಗಳನ್ನು ಕಾಣಬಹುದು ಎಂಬ ದುಗುಡು ಭರಿತ ಭಾವನೆ ಪ್ರತಿಯೊಬ್ಬರಲ್ಲೂ ಮೂಡು ವಂತಾಗಿರುವುದು ವಿಷಾದಕರ ವೆನಿಸುತ್ತಿದೆ...