ಕೂಡಿಗೆ, ಮಾ. 18: ಕೂಡಿಗೆಯಲ್ಲಿ ಇರುವ ಏತ ನೀರಾವರಿ ಯೋಜನೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಬಿಡುಗಡೆಯಾದ 2.25 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಾರಂಭವಾಗಿದೆ.

ಕೂಡಿಗೆ ಗ್ರಾಮದಲ್ಲಿ ಕಳೆದ 1976ನೇ ಸಾಲಿನಲ್ಲಿ ಈ ವ್ಯಾಪ್ತಿಯ ರೈತರಿಗೆ ಬೇಸಾಯ ಮಾಡಲು ಅನುಕೂಲವಾಗುವಂತೆ ಆಗಿನ ಸರಕಾರ ಏತ ನೀರಾವರಿ ಯೋಜನೆಯ ಮೂಲಕ ರೈತರ ಜಮೀನಿಗೆ ವ್ಯವಸಾಯ ಮಾಡಲು ನೀರನ್ನು ಒದಗಿಸುವ ಯೋಜನೆಯನ್ನು ಕೈಗೊಂಡಿತ್ತು.

ಅಂದಿನಿಂದ ಇಂದಿನವರೆಗೂ ಈ ವ್ಯಾಪ್ತಿಯ 120 ಹೆಕ್ಟೇರ್ ಪ್ರದೇಶಕ್ಕೆ ಬೇಸಾಯ ಮಾಡಲು ನೀರನ್ನು ಹಾರಂಗಿ ನದಿಯಿಂದ ಮೋಟಾರ್ ಮೂಲಕ ಹೊಳೆಯಿಂದ ಎತ್ತಿ ನಂತರ ಮೇಲ್ಮಟ್ಟದಲ್ಲಿ ಒಂದು ಬೃಹತ್ ಟ್ಯಾಂಕ್ ನಿರ್ಮಾಣ ಮಾಡಿ ಅಲ್ಲಿ ನೀರನ್ನು ಸಂಗ್ರಹಿಸಿ ಅಲ್ಲಿಂದ ಪೈಪ್‍ಗಳ ಮೂಲಕ ಹರಿಸಲಾಗುತ್ತಿತು.

ಆದರೆ ಇದೀಗ ರೂ. 2.25 ಕೋಟಿ ವೆಚ್ಚದಲ್ಲಿ ಹಾರಂಗಿ ನದಿಯ ದಡದಲ್ಲಿದ್ದ ಹಳೆಯ ಕಟ್ಟಡದ ಬದಲು ನೂತನ ಕಟ್ಟಡ, ಹೊಳೆಗೆ ನೀರೆತ್ತುವ ನೂತನ ಯಂತ್ರಗಳ ಅಳವಡಿಕೆ ಮತ್ತು 50 ಹೆಚ್‍ಪಿ ಸಾಮಥ್ರ್ಯದ ವಿದ್ಯುತ್ ಮೋಟಾರು ಅಳವಡಿಕೆ ನೂತನ ಟ್ಯಾಂಕ್ ಅದರ ಉಪ ಕಾಲುವೆಗಳ ನಿರ್ಮಾಣ ಸೇರಿದಂತೆ ರೈತರ ಜಮೀನಿಗೆ ನೀರು ಸರಾಗವಾಗಿ ಹೋಗಲು ಸಣ್ಣ ಪ್ರಮಾಣದ ಕಾಲುವೆಗಳ ದುರಸ್ತಿಯ ಕಾರ್ಯಗಳು ಭರÀದಿಂದ ಸಾಗುತ್ತಿವೆ.

ರೈತರಿಗೆ ನೀರನ್ನು ಸಮರ್ಪಕವಾಗಿ ಒದಗಿಸುವ ಮೂಲಕ ರೈತರು ಬೇಸಾಯ ಮಾಡಲು ಅನುಕೂಲ ಕಲ್ಪಿಸಲಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರಿಂಗ್ ರಫೀಕ್ ತಿಳಿಸಿದ್ದಾರೆ. ಈ ಕಾಮಗಾರಿಗೆ ರಾಜ್ಯಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದೆ.