ಸೋಮವಾರಪೇಟೆ, ಮಾ. 18: ಎಲ್ಲೆಡೆ ಒಣಗಿ ನಿಂತಿರುವ ಅರಣ್ಯ,, ಎಲ್ಲೆಲ್ಲೂ ಬೋಳು ಬೋಳಾದ ಮರಗಳು.., ನೆಲದ ಮೇಲೆಲ್ಲಾ ಒಣಗಿದ ತರಗೆಲೆಗಳು.., ಒಂದು ಕಡ್ಡಿ ಗೀರಿದರೂ ಸಾಕು-ಕ್ಷಣ ಮಾತ್ರದಲ್ಲಿ ಸಾವಿರಾರು ಏಕರೆ ಅರಣ್ಯ ಸುಟ್ಟು ಬೂದಿಯಾಗುವ ಆತಂಕ. ಇಂತಹ ಸನ್ನಿವೇಶದ ನಡುವೆ ಅರಣ್ಯವನ್ನು ಕಾಪಾಡಿಕೊಳ್ಳಲು ಅರಣ್ಯ ಇಲಾಖಾ ಸಿಬ್ಬಂದಿಗಳು ಶಕ್ತಿಮೀರಿ ಶ್ರಮಿಸುತ್ತಿದ್ದು, ಕಾಡ್ಗಿಚ್ಚಿನಿಂದ ಕಾಡನ್ನು ರಕ್ಷಿಸಲು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.

ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳ ಕಾರ್ಯ ವ್ಯಾಪ್ತಿಗೆ ಒಳಪಟ್ಟಂತೆ 5,500 ಹೆಕ್ಟೇರ್ ಅರಣ್ಯವಿದೆ. ಇದರಲ್ಲಿ ಯಡವನಾಡು, ನಿಡ್ತ ಮೀಸಲು ಅರಣ್ಯ, ಜೇನುಕಲ್ಲು ಬೆಟ್ಟ ಮೀಸಲು ಅರಣ್ಯ ಒಳಗೊಂಡಿದೆ.

ಇನ್ನು ಪ್ರವಾಸಿ ತಾಣವಾಗಿಯೂ ಹೆಸರು ಪಡೆದಿರುವ ಪುಷ್ಪಗಿರಿ ಬೆಟ್ಟ ಶ್ರೇಣಿ ಪ್ರದೇಶದಲ್ಲಿರುವ ಅರಣ್ಯದ ರಕ್ಷಣೆಯ ಜವಾಬ್ದಾರಿಯನ್ನು ಪುಷ್ಪಗಿರಿ ವನ್ಯಜೀವಿ ವಿಭಾಗ ನೋಡಿಕೊಳ್ಳುತ್ತಿದೆ. ಆಯ್ದ ಕಡೆಗಳಲ್ಲಿ ಬೆಂಕಿ ರೇಖೆಗಳು, ವಾಚ್ ಟವರ್‍ಗಳನ್ನು ನಿರ್ಮಿಸಿ ಬೆಂಕಿಯಿಂದ ಅರಣ್ಯವನ್ನು ರಕ್ಷಿಸಲು ಪಹರೆ ಕಾಯಲಾಗುತ್ತಿದೆ.

ರಸ್ತೆ ಬದಿಗಳಲ್ಲಿ ಸೇರಿದಂತೆ ಸಂರಕ್ಷಿತ ಅರಣ್ಯ ಪ್ರದೇಶದ ಒಳಭಾಗದಲ್ಲೂ ಬೆಂಕಿ ರೇಖೆಗಳನ್ನು ನಿರ್ಮಿಸಲಾಗಿದೆ. ಒಂದು ವೇಳೆ ಆಕಸ್ಮಿಕವಾಗಿ ಅರಣ್ಯದೊಳಗೆ ಕಾಡ್ಗಿಚ್ಚು ಉಂಟಾದರೂ ಹೆಚ್ಚಿನ ಪ್ರದೇಶಕ್ಕೆ ವಿಸ್ತರಿಸದಂತೆ ನೋಡಿಕೊಳ್ಳಲು ಸಿಬ್ಬಂದಿಗಳನ್ನು ನೇಮಿಸಲಾಗಿದೆ.

ಹಳೆಯ ಬೆಂಕಿ ರೇಖೆಗಳ ನಿರ್ವಹಣೆಯೊಂದಿಗೆ ಹೊಸ ಬೆಂಕಿ ರೇಖೆಗಳ ನಿರ್ಮಾಣವೂ ನಡೆದಿದೆ. ಪ್ರತಿ ವರ್ಷ ನೂತನ ‘ಫೈರ್ ಲೊಕೇಷನ್’ಗಳನ್ನು ಪತ್ತೆಹಚ್ಚಿ ಹೊಸದಾಗಿ ಬೆಂಕಿ ರೇಖೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜನವರಿಯಿಂದ ಮಳೆ ಪ್ರಾರಂಭವಾಗುವ ಜೂನ್‍ವರೆಗೆ ಹೊರಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿ ಫೈರ್ ವಾಚರ್ಸ್ ಸಿಬ್ಬಂದಿಗಳ ನೇಮಕವನ್ನು ಮಾಡಿಕೊಳ್ಳಲಾಗಿದೆ.

ಇದರೊಂದಿಗೆ ತಾಲೂಕಿನ ಯಡವನಾಡು ಮೀಸಲು ಅರಣ್ಯದ ಬವಸಣ್ಣ ಕಲ್ಲು ಬಳಿ ಹಾಗೂ ಜೇನುಕಲ್ಲು ಬೆಟ್ಟದಲ್ಲಿ ವಾಚ್ ಟವರ್‍ಗಳನ್ನು ಸ್ಥಾಪಿಸಲಾಗಿದ್ದು, ದಿನದ 24 ಗಂಟೆಯೂ ಸಿಬ್ಬಂದಿಗಳು ಪಹರೆ ಕಾಯುತ್ತಿದ್ದಾರೆ.

ಪ್ರಸಕ್ತ ವರ್ಷ 6 ಮಂದಿಯನ್ನು ಹೆಚ್ಚುವರಿಯಾಗಿ ‘ಫೈರ್ ವಾಚರ್ಸ್’ಗಳನ್ನಾಗಿ ನೇಮಿಸಿಕೊಳ್ಳಲಾಗಿದೆ. ಕಾಡ್ಗಿಚ್ಚಿನಿಂದ ಅರಣ್ಯವನ್ನು ರಕ್ಷಿಸಲು ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶತಾಯಗತಾಯ ಪ್ರಯತ್ನ ನಡೆಸುತ್ತಿರುವದರಿಂದ ಹೆಚ್ಚಿನ ಪ್ರಮಾಣದಲ್ಲಿ ಯಾವದೇ ಕಾಡ್ಗಿಚ್ಚು ಪ್ರಕರಣ ನಡೆದಿಲ್ಲ.

ಆದರೆ ಯಡವನಾಡು ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಂಡುಬಂದಿದ್ದು, ಪ್ರಾರಂಭದ ಹಂತದಲ್ಲಿಯೇ ಶಮನಗೊಳಿಸಲಾಗಿದೆ. ಸ್ಥಳೀಯ ಗ್ರಾಮಸ್ಥರೂ ಸಹ ಬೆಂಕಿಯಿಂದ ಅರಣ್ಯವನ್ನು ರಕ್ಷಿಸಲು ಸಹಕರಿಸುತ್ತಿದ್ದಾರೆ.

ಇನ್ನು ಸೋಮವಾರಪೇಟೆಯಿಂದ ಕುಶಾಲನಗರ ಹಾಗೂ ಮಡಿಕೇರಿಗೆ ತೆರಳುವ ಮಾರ್ಗದಲ್ಲಿ ಅರಣ್ಯ ಪ್ರದೇಶಗಳಿದ್ದು, ಮಡಿಕೇರಿ ರಸ್ತೆಯಲ್ಲಿ ಕಾಜೂರು ಅರಣ್ಯ ಹಾಗೂ ಕುಶಾಲನಗರ ರಸ್ತೆಯಲ್ಲಿ ಯಡವನಾಡು ಮೀಸಲು ಅರಣ್ಯಗಳಿವೆ. ರಸ್ತೆಯಲ್ಲಿ ಸಂಚರಿಸುವ ಮಂದಿ ಧೂಮಪಾನ ಮಾಡಿ ಬೀಡಿ, ಸಿಗರೇಟ್ ಎಸೆಯುವದು, ಕಡ್ಡಿಗೀರಿ ಬಿಸಾಕುವದು ಮಾಡಿದರೆ ಕ್ಷಣಮಾತ್ರದಲ್ಲಿ ಅರಣ್ಯ ಹೊತ್ತಿ ಉರಿಯಲಿದೆ. ಇಂತಹ ಕೆಲಸಕ್ಕೆ ಯಾರೂ ಮುಂದಾಗಬಾರದು ಎಂದು ಅರಣ್ಯ ಇಲಾಖಾ ಸಿಬ್ಬಂದಿಗಳು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.

ಇನ್ನು ಅರಣ್ಯದಲ್ಲಿರುವ ವನ್ಯಪ್ರಾಣಿಗಳ ಹಾವಳಿಯಿಂದ ಬಚಾವಾಗಲೆಂದು ಕೆಲ ಕಿಡಿಗೇಡಿಗಳು ಅರಣ್ಯಕ್ಕೆ ತಾವೇ ಬೆಂಕಿ ಇಡುತ್ತಿದ್ದಾರೆ. ಅರಣ್ಯದಲ್ಲಿ ಲಂಟಾನಗಳು ಯಥೇಚ್ಛವಾಗಿ ಬೆಳೆದಿದ್ದು, ಕಾಡಾನೆಗಳು ಇಂತಹ ಸ್ಥಳಗಳಲ್ಲಿ ಠಿಕಾಣಿ ಹೂಡಿರುತ್ತವೆ. ಕಾಡಿನಿಂದಾವೃತ್ತವಾಗಿದ್ದರೆ ಕಾಡಾನೆಗಳು ಇಲ್ಲೇ ಉಳಿದುಬಿಡುತ್ತವೆ ಎಂಬ ‘ದೂ/ದುರಾಲೋಚನೆಯಿಂದ!’ ಕಿಡಿಗೇಡಿಗಳೇ ಅರಣ್ಯಕ್ಕೆ ಬೆಂಕಿ ಹಾಕುತ್ತಿರುವ ಬಗ್ಗೆಯೂ ಅರಣ್ಯ ಇಲಾಖೆ ಸಂಶಯ ವ್ಯಕ್ತಪಡಿಸಿದ್ದು, ಅಂತಹ ಮಂದಿಯ ಬಗ್ಗೆ ಕಠಿಣ ಕ್ರಮ ಜರುಗಿಸಲು ಸಿದ್ಧವಾಗಿದೆ.

ಆನೆ ಸೇರಿದಂತೆ ವನ್ಯಪ್ರಾಣಿಗಳ ಕಾಟದಿಂದ ರಕ್ಷಣೆ ಪಡೆಯಲು ಅರಣ್ಯಕ್ಕೇ ಬೆಂಕಿ ಹಾಕುವ ಕೆಲಸ ಅಕ್ಷಮ್ಯ ಅಪರಾಧವಾಗಿದ್ದರೂ ಇಲಾಖೆಯ ಕಣ್ಣುತಪ್ಪಿಸಿ ಇಂತಹ ಕೃತ್ಯ ನಡೆಯುತ್ತಿದೆ ಎನ್ನಲಾಗಿದೆ. ಇನ್ನು ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ಕಾಟಕೊಡಲೆಂದೇ ಕೆಲ ಮರಗಳ್ಳರು ಅರಣ್ಯಕ್ಕೆ ಬೆಂಕಿ ಹಾಕುತ್ತಾರೆ. ಅರಣ್ಯ ಅಕ್ರಮಗಳಿಗೆ ಅವಕಾಶ ನೀಡದ/ಅಕ್ರಮಗಳನ್ನು ಬಯಲಿಗೆಳೆದ ಸಿಬ್ಬಂದಿಗಳ ವಿರುದ್ದ ಸೇಡು ತೀರಿಸಿಕೊಳ್ಳಲೆಂದು ಕೆಲ ಮರಗಳ್ಳರು ಅರಣ್ಯಕ್ಕೆ ಬೆಂಕಿ ಹಾಕುವ ಯತ್ನ ನಡೆಸುತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು, ಬೆಂಕಿ ಹಾಕಿದ ನಂತರ ಮರಗಳ್ಳರೇ ಇಲಾಖೆಗೆ ಮಾಹಿತಿಯನ್ನೂ ನೀಡುತ್ತಾರೆ ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿಯೋರ್ವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.

ನೈಸರ್ಗಿಕವಾಗಿ ಕಾಡ್ಗಿಚ್ಚು ಹಬ್ಬುವ ಸಾಧ್ಯತೆ ಕೇವಲ ಶೇ.1 ರಷ್ಟು ಮಾತ್ರ. ಉಳಿದ ಶೇ.99 ರಷ್ಟು ಕಾಡ್ಗಿಚ್ಚು ಪ್ರಕರಣಗಳು ಮಾನವ ನಿರ್ಮಿತವೇ ಆಗಿದೆ. ಅರಣ್ಯದ ಸುತ್ತಮುತ್ತಲ ಪ್ರದೇಶದಲ್ಲಿ ಜಮೀನು ಹೊಂದಿರುವವರು ತಮ್ಮ ಜಮೀನಿನಲ್ಲಿ ಕಳೆಗಳಿಗೆ ಬೆಂಕಿ ಹಾಕುವದು, ಹೊಸ ಹುಲ್ಲು ಬರಲಿ ಎಂದು ಹೊಲಗಳಿಗೆ ಬೆಂಕಿ ಹಚ್ಚುವ ಪ್ರಕರಣ ಸೇರಿದಂತೆ, ಕಾಡಾನೆಗಳನ್ನು ದೂರ ಓಡಿಸಲು ಕಿಡಿಗೇಡಿಗಳು ಹಾಕುವ ಬೆಂಕಿ, ಅರಣ್ಯ ಸಿಬ್ಬಂದಿಗಳ ಮೇಲಿನ ಕೋಪಕ್ಕೆ ಮರಗಳ್ಳರು ಹಾಕುವ ಬೆಂಕಿಯಿಂದಲೇ ಕಾಡ್ಗಿಚ್ಚು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಸಿಬ್ಬಂದಿಗಳು ವಾಸ್ತವತೆ ಬಿಚ್ಚಿಡುತ್ತಾರೆ.

ಬಿಸಿಲ ತಾಪಕ್ಕೆ ಅರಣ್ಯದಲ್ಲಿರುವ ತೇಗದ ಮರಗಳು ಒಣಗಿಹೋಗಿದ್ದು, ಎಲೆಗಳನ್ನೆಲ್ಲಾ ಉದುರಿಸಿಕೊಂಡು ಬಟಾಬಯಲಾಗಿದೆ. ಒಣಗಿದ ಎಲೆಗಳು ಅರಣ್ಯದಲ್ಲಿ ಹಾಸಿದಂತೆ ಕಂಡುಬರುತ್ತಿದ್ದು, ಆಗಾಗ್ಗೆ ಕಾಡ್ಗಿಚ್ಚಿಗೆ ಒಳಗಾಗುತ್ತಿವೆ. ಒಂದೊಮ್ಮೆ ಬೆಂಕಿ ತಗುಲಿದರೆ ಅಮೂಲ್ಯ ವನ ಸಂಪತ್ತಿನೊಂದಿಗೆ ವನ್ಯಪ್ರಾಣಿ ಸಂಕುಲವೂ ಹೇಳಹೆಸರಿಲ್ಲದಂತೆ ಸುಟ್ಟು ಕರಕಲಾಗುತ್ತವೆ.

ಪರಿಸರ, ಅರಣ್ಯ ಉಳಿದರೆ ಮಾತ್ರ ಮಾನವನ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂಬದನ್ನು ಮನಗಾಣಬೇಕಿದೆ. ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ‘ನಮ್ಮಿಂದ ಕಾಡ್ಗಿಚ್ಚು ಉಂಟಾಗುವದಿಲ’್ಲ ಎಂಬ ಪ್ರತಿಜ್ಞೆಯನ್ನೂ ಕೈಗೊಂಡು ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಸಹ ಕೈಜೋಡಿಸಬೇಕಿದೆ. - ವಿಜಯ್ ಹಾನಗಲ್