ಮಡಿಕೇರಿ, ಮಾ. 18: ಇಡೀ ರಾಷ್ಟ್ರದಲ್ಲಿ ಆಕಾಶವಾಣಿಯ ಮೂಲಕ ನಿಧನ ವಾರ್ತೆಯನ್ನು ಅಧಿಕೃತವಾಗಿ ಪ್ರಸಾರ ಮಾಡುವ ವಿಶೇಷ ಅವಕಾಶವೊಂದು ಮಡಿಕೇರಿ ಆಕಾಶವಾಣಿಗೆ ಮಾತ್ರ ಇದೆ. ಕಳೆದ ಹಲವು ವರ್ಷಗಳಿಂದ ಪ್ರಸಾರ ಭಾರತೀಯ ಅನುಮತಿಯೊಂದಿಗೆ ಈ ಪ್ರಸಾರ ನಡೆಯುತ್ತಿದ್ದು, ಇದೀಗ ಯಾರೋ ಒಬ್ಬರು ಮಾಡಿದ ಕುಚೇಷ್ಟೆಯ ಪರಿಣಾಮವಾಗಿ ನಿಧನ ಸುದ್ದಿ ಬಿತ್ತರಕ್ಕೆ ಅಡಚಣೆ ಎದುರಾಗಿದೆ.
ನಿಧನ ಸುದ್ದಿಯೊಂದನ್ನು ಮಾರ್ಚ್ 10 ರಂದು ಪ್ರಸಾರ ಮಾಡಲಾಗಿದ್ದು, ಈ ವ್ಯಕ್ತಿಯನ್ನು ಆಗದ ಕೆಲವರು ತಪ್ಪು ಮಾಹಿತಿ ನೀಡಿದ್ದರ ಕಿಡಿಗೇಡಿತನದ ಪರಿಣಾಮದಿಂದಾಗಿ ಇದೀಗ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದರ ಕಾರಣದಿಂದಾಗಿ ಜನತೆಗೆ ಸಮಸ್ಯೆ ಎದುರಾಗಿದೆ.
ನಡೆದಿದ್ದೇನು...?
ಮಾರ್ಚ್ 10 ರಂದು ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಸುಬ್ರಾಯ ಸಂಪಾಜೆ ಅವರು ಕರ್ತವ್ಯದಲ್ಲಿದ್ದರು. ಈ ದಿನ ಬೆಳಿಗ್ಗೆ 7ರ ಸಮಯಕ್ಕೆ ಅವರಿಗೆ ಕೋಪಟ್ಟಿಯ ದಾಯನ ಕುಟುಂಬಕ್ಕೆ ಸೇರಿದವರೊಬ್ಬರು ಮೃತಪಟ್ಟಿದ್ದಾರೆ ಎಂಬ ಸಂದೇಶ ಬಂದಿದ್ದು, ಎಂದಿನ ರೀತಿಯಲ್ಲಿ ಅವರು ಅದನ್ನು ಪ್ರಸರಿಸಿದ್ದರು. ಆದರೆ ಈ ವ್ಯಕ್ತಿ ಮೃತಪಟ್ಟಿಲ್ಲ ಎಂಬ ವಿಚಾರವನ್ನು ತಿಳಿಸಿ ತಕ್ಷಣ ಬೇರೊಬ್ಬರು ಕರೆ ಮಾಡಿ ತಿಳಿಸಿದ್ದರಿಂದ ಮುಖ್ಯ ಸಮಯವಾದ 7.45ಕ್ಕೆ ಇದನ್ನು ತಡೆ ಹಿಡಿಯಲಾಗಿದೆ.
ಆಗಿ ಹೋದ ಅಚಾತುರ್ಯಕ್ಕೆ ಉದ್ಘೋಷಕರು ಸಂಬಂಧಿಕರೊಂದಿಗೆ ಮಾತನಾಡಿ ತಪ್ಪು ಸಂದೇಶದ ಕುರಿತು ವಿವರ ನೀಡಿದ ಪ್ರಮಾದಕ್ಕೆ ವಿಷಾದಿಸಿದ್ದರು. ಆದರೂ ಆ ವ್ಯಕ್ತಿಯ ಕಡೆಯವರು ಇದನ್ನು ಅಲ್ಲಿಗೆ ಬಿಡದೆ ತಪ್ಪು ಸಂದೇಶವನ್ನು ಆಕಾಶವಾಣಿ ನೀಡಿದವರ ಬದಲಾಗಿ ಉದ್ಘೋಷಕರ ವಿರುದ್ಧವೇ ಮಡಿಕೇರಿ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರಂತೆ ಉದ್ಘೋಷಕರು ತಮಗೆ ಮಾಹಿತಿ ನೀಡಿದವರೊಂದಿಗೆ ಠಾಣೆಗೆ ತೆರಳಿ ಹೇಳಿಕೆ ನೀಡಬೇಕಾಯಿತು.
ಇದೀಗ ಈ ಕಿಡಿಗೇಡಿತನದ ಮಾಹಿತಿಯ ಪರಿಣಾಮ ಇತರ ಜನರಿಗೆ ಸಮಸ್ಯೆ ಪ್ರಾರಂಭವಾಗಿದೆ. ನಿಧನ ಸುದ್ದಿ ಬಂದರೂ ಇದರ ಸತ್ಯಾಸತ್ಯತೆ ಅರಿಯದೆ ಪ್ರಸಾರ ಮಾಡದಿರಲು ಹಿರಿಯ ಅಧಿಕಾರಿಗಳಿಂದ ಸೂಚನೆ ಹೋಗಿರುವುದಲ್ಲದೆ, ಕರ್ತವ್ಯದಲ್ಲಿರುವವರು ತಮಗೇಕೆ ಬೇಕು ಎಂಬ ಹತಾಶ ಭಾವನೆಯಿಂದ ಸುದ್ದಿಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ನೇರವಾಗಿ ಆಕಾಶವಾಣಿಗೆ ಬಂದು ಸೂಕ್ತ ವಿವರ ನೀಡಿದರೆ ಮಾತ್ರ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಿಬ್ಬಂದಿಗಳು ಬಂದಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳು ಇದನ್ನು ಖಚಿತಪಡಿಸಿದಲ್ಲಿ ಮಾತ್ರ ಪ್ರಸಾರಕ್ಕೆ ಅನುಮತಿ ನೀಡಲಾಗಿದೆ.
ಕೊಡಗಿನಲ್ಲಿ ಸಾವಿನ ವಿಚಾರಕ್ಕೆ ಇರುವ ಮಹತ್ವ ನೀಡುವ ಪ್ರಾಧಾನ್ಯತೆಯ ಕಾರಣದಿಂದಾಗಿ ಗುಡ್ಡ-ಗಾಡು ಜಿಲ್ಲೆಯಾಗಿರುವ ಇಲ್ಲಿಗೆ ಈ ವಿಶೇಷ ಅವಕಾಶವನ್ನು ನೀಡಲಾಗಿದ್ದು, ಇದರ ಹಿಂದೆ ಪ್ರಸಾರ ಭಾರತೀಯ ಸದಸ್ಯರಾಗಿದ್ದ ಪ್ರೇಮಾ ಕಾರ್ಯಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಕೆಲವು ಮಂದಿಯ ಶ್ರಮವಿರುವುದು ಉಲ್ಲೇಖನೀಯ. ಆದರೆ ಪ್ರಸ್ತುತ ಯಾರೋ ಒಬ್ಬರು ಅವರ ನಡುವಿನ ವೈಷಮ್ಯದ ಕಾರಣದಿಂದಾಗಿ ತಪ್ಪು ಸಂದೇಶ ನೀಡುವ ಮೂಲಕ ಇದಕ್ಕೆ ಸಮಸ್ಯೆ ಸೃಷ್ಟಿಸಿರುವ ಬಗ್ಗೆ ಅನುಮತಿಗಾಗಿ ಶ್ರಮಿಸಿರುವವರಲ್ಲಿ ಒಬ್ಬರಾದ ಡಾ. ಸಣ್ಣುವಂಡ ಕಾವೇರಪ್ಪ ಸೇರಿ ಹಲವರು ವಿಷಾದ ವ್ಯಕ್ತಪಡಿಸಿದ್ದಾರೆ. ಈತನಕ ಇಂತಹ ಕಿಡಿಗೇಡಿತನವನ್ನು ಜಿಲ್ಲೆಯಲ್ಲಿ ಸಾವಿಗೆ ನೀಡುವ ಮಹತ್ವವನ್ನು ಅರಿತಿರುವ ಯಾರೊಬ್ಬರೂ ಮಾಡಿರಲಿಲ್ಲ ಎಂಬ ಅಭಿಪ್ರಾಯ ಇವರದ್ದಾಗಿದೆ. ಈ ಬಗ್ಗೆ ಏನೆನ್ನಬೇಕೆಂಬದನ್ನು ಜಿಲ್ಲೆಯ ಜನತೆಯೇ ನಿರ್ಧರಿಸಬೇಕಾಗಿದೆ ಎಂದು ಹಲವರು ‘ಶಕ್ತಿ’ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ.