ಸಿದ್ದಾಪುರ, ಮಾ. 18: ನೆಲ್ಲಿಹುದಿಕೇರಿಯ ಬೆಟ್ಟದಕಾಡು ರಸ್ತೆಯಲ್ಲಿರುವ ಹಿಂದೂ ಸ್ಮಶಾನದ ಬಳಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಠಿಸಿತು. ಕೂಡಲೇ ಸ್ಥಳೀಯ ನಿವಾಸಿಗಳು ಶ್ರಮ ವಹಿಸಿ ಬೆಂಕಿಯನ್ನು ನಂದಿಸಿದರು.

ಬುಧವಾರ ಮಧ್ಯಾಹ್ನ ಸುಡು ಬಿಸಿಲಿನ ನಡುವೆ ನೆಲ್ಲಿಹುದಿಕೇರಿಯ ಬೆಟ್ಟದಕಾಡು ನದಿ ತೀರದ ಬಳಿ ಇರುವ ಹಿಂದೂ ಸ್ಮಶಾನದ ಸುತ್ತಮುತ್ತಲಿನಲ್ಲಿ ಒಣಗಿದ್ದ ಬಿದಿರುಗಳಿಗೆ ಬೆಂಕಿ ಹಿಡಿದು ಬೆಂಕಿಯ ಜ್ವಾಲೆ ಸುಮಾರು 20 ಅಡಿಗೂ ಎತ್ತರದಲ್ಲಿ ಕಾಣಿಸಿಕೊಂಡಿತು. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನದಿ ತೀರದಲ್ಲಿದ್ದ ಒಣಗಿದ ಸೊಪ್ಪುಗಳು ಹಾಗೂ ಹಸಿ ಬಿದಿರುಗಳು ಆಹುತಿಯಾದವು.

ನದಿ ತೀರದ ನಿವಾಸಿಗಳ ಮನೆಗಳಿಗೂ ಬೆಂಕಿ ಹಬ್ಬುವ ಭೀತಿ ಉಂಟಾಯಿತು. ನಂತರ ನಿವಾಸಿಗಳು ತಮ್ಮ ಮನೆಗಳಲ್ಲಿ ಶೇಖರಿಸಿಟ್ಟಿದ್ದ ಕುಡಿಯುವ ನೀರನ್ನು ಬಿಂದಿಗೆ ಹಾಗೂ ಇನ್ನಿತರ ಪಾತ್ರೆಗಳಲ್ಲಿ ತಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲೇ ಬೆಂಕಿಯ ಕೆನ್ನಾಲಿಗೆ ರಭಸದಿಂದ ಮುನ್ನುಗ್ಗುತ್ತಾ ಬಹು ಎತ್ತರದವರೆಗೆ ಉರಿಯಲಾರಂಭಿಸಿತು. ಬಿಂದಿಗೆಗಳಲ್ಲಿ ತಂದು ನೀರು ಸುರಿಯುತಿದ್ದರೂ ಕೂಡ ಬೆಂಕಿ ನಂದಿಸಲು ಹರಸಾಹಸಪಡಬೇಕಾಯಿತು.

ನಂತರ ಸ್ಥಳೀಯ ನಿವಾಸಿ ಎ.ಆರ್. ಸುರೇಶ್ ಎಂಬವರಿಗೆ ಸೇರಿದ ತೋಟಕ್ಕೆ ನೀರು ಹಾಯಿಸುವ ಪೈಪುಗಳ ಮುಖಾಂತರ ನೀರನ್ನು ಹಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಸ್ಥಳೀಯರು ಯಶಸ್ವಿಯಾದರು. ಬೆಂಕಿಯನ್ನು ನಂದಿಸಲು ಸ್ಥಳೀಯ ಮಹಿಳೆಯರು ಸೇರಿದಂತೆ ನೂರಾರು ಮಂದಿ ಶ್ರಮಿಸಿದರು.

ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಠಿ ಮಾಡಿದ ಸಂದರ್ಭ ಅಲ್ಲಿನ ನಿವಾಸಿಗಳು ನೆಲ್ಲಿಹುದಿಕೇರಿ ಗ್ರಾ.ಪಂ. ಪಿ.ಡಿ.ಓ. ಅನಿಲ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಪಿ.ಡಿ.ಒ. ಹಾಗೂ ಗ್ರಾ.ಪಂ. ಉಪಾಧ್ಯಕ್ಷೆ ಸೆಫಿಯಾ ಹಾಗೂ ಸದಸ್ಯ ಅನೀಫ ಮೂವರು ಸ್ಥಳಕ್ಕೆ ಬಂದು ತಾವೇ ಬಿಂದಿಗೆಗಳನ್ನು ಹಿಡಿದುಕೊಂಡು ನೀರು ತೆಗೆದುಕೊಂಡು ಬಂದು ಬೆಂಕಿ ನಂದಿಸುವಲ್ಲಿ ಸ್ಥಳೀಯರೊಂದಿಗೆ ಸಹಕರಿಸಿದರು. ಇವರೊಂದಿಗೆ ಸ್ಥಳೀಯ ಸಿದ್ದಾಪುರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಮಲ್ಲಪ್ಪಮಗಶೀರ್ ಹಾಗೂ ಚವಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಕರೆ ಮಾಡಿ ಕೂಡಲೇ ಬರುವಂತೆ ತಿಳಿಸಿದರೂ ಅಗ್ನಿ ಶಾಮಕ ದಳದ ವಾಹನ ಬರುವಷ್ಟರಲ್ಲಿ ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದರು.

-ವಾಸು