ಮಡಿಕೇರಿ, ಮಾ. 16: ಕೊರೊನಾ ವೈರಸ್ ಪರಿಣಾಮ ನ್ಯಾಯಾಲಯಗಳಲ್ಲೂ ಇಂದಿನಿಂದ ಕಲಾಪಗಳು ಮುಂದೂಡಲ್ಪಡುತ್ತಿವೆ. ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಅತ್ಯಂತ ತುರ್ತು ಪ್ರಕರಣಗಳು (ಉದಾಹರಣೆಗೆ: ನಿರೀಕ್ಷಣಾ ಜಾಮೀನು) ಇದ್ದರೆ ಮಾತ್ರ ಪರಿಗಣಿಸಬಹುದು. ಅಗತ್ಯವಿದ್ದಲ್ಲಿ ವಿಡಿಯೋ ಕಾನ್‍ಫರೆನ್ಸಿಂಗ್ ಮೂಲಕವು ನಿರ್ವಹಿಸಬಹುದು. ನ್ಯಾಯಾಲಯದ ಆವರಣಕ್ಕೆ ಬರುವ ಸಿಬ್ಬಂದಿ ಮತ್ತು ಜನರನ್ನು ಆರೋಗ್ಯ ಇಲಾಖೆಯು ಕಡ್ಡಾಯವಾಗಿ ತರ್‍ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಬೇಕು ಎಂದು ಕೂಡ ನ್ಯಾಯಾಲಯ ನಿರ್ದೇಶಿಸಿದೆ. ಹೀಗಾಗಿ ಒಂದು ವಾರದವರೆಗೆ ಈ ಆದೇಶವನ್ನು ಪಾಲಿಸಬೇಕಾಗಿದ್ದು ನ್ಯಾಯಾಲಯ ಕಲಾಪಗಳು ತಾತ್ಕಾಲಿಕವಾಗಿ ಮುಂದೂಡಲ್ಪಡಲಿವೆ.

ಇಂದು ಮಡಿಕೇರಿ ವಕೀಲರ ಸಂಘದಿಂದ ಸಭೆಯೊಂದನ್ನು ನಡೆಸಿ ಬಳಿಕ ವಕೀಲರುಗಳಿಂದ ನ್ಯಾಯಾಧೀಶರಿಗೆ ಮನವಿ ಮಾಡಲಾಯಿತು. ಪ್ರಕರಣಗಳ ಸಂಬಂಧಿತ ಕಕ್ಷಿದಾರರನ್ನು ನ್ಯಾಯಾಲಯದೊಳಕ್ಕೆ ಬಿಡದಿರುವುದರಿಂದ ತಮ್ಮ ಕಕ್ಷಿದಾರರ ಪರವಾಗಿ ವಕೀಲರುಗಳಿಗೆ ನ್ಯಾಯಾಲಯದೊಳಗೆ ಅವರ ಪರ ವಕಾಲತಿನ ಮೂಲಕ ಪ್ರಕರಣದ ವಿಚಾರಣೆಯನ್ನು ಕೈಗೊಳ್ಳಲು ದಿನಾಂಕ ನಿಗದಿ ಪಡಿಸಲು ಅವಕಾಶ ಕಲ್ಪಿಸುವಂತೆ ಕೋರಲಾಗಿದೆ.