ಶನಿವಾರಸಂತೆ, ಮಾ. 16: ಕೊರೊನಾ ಹಾವಳಿ ಜೊತೆಗೆ ಇನ್ನೂ ಬಾರದ ಮಳೆ ರೈತರ ಬದುಕಲ್ಲಿ ತೀವ್ರ ಆತಂಕ ಮೂಡಿಸಿದೆ. ಹೋಬಳಿಯಾದ್ಯಂತ ರೈತರು ಉತ್ತಮ ದರದ ನಿರೀಕ್ಷೆಯಲ್ಲಿ ಈ ವರ್ಷ ಹಸಿಮೆಣಸಿನಕಾಯಿ, ಶುಂಠಿ, ತರಕಾರಿ ಸಮೃದ್ಧಿಯಾಗಿ ಬೆಳೆದಿದ್ದಾರೆ. ಇಳುವರಿ ಚೆನ್ನಾಗಿದೆ. ಆದರೆ, ನಿರೀಕ್ಷಿಸಿದಂತೆ ಉತ್ತಮ ದರ ದೊರೆಯದೆ ರೈತರು ಆರಂಭದಲ್ಲೇ ಹತಾಶರಾಗಿದ್ದಾರೆ.

ಮಾರುಕಟ್ಟೆಯಲ್ಲಿ ಕಳೆದ ವರ್ಷ ಹಸಿಮೆಣಸಿನಕಾಯಿ 20 ಕೆಜಿ ಚೀಲಕ್ಕೆ ರೂ. 800 ರಿಂದ 1200 ರವರೆಗೆ ಇತ್ತು. ಈ ವರ್ಷ ರೂ. 60 ರಿಂದ 120 ಇದೆ. ಬೀನ್ಸ್ ಕಳೆದ ಬಾರಿ ರೂ. 40 ರಿಂದ 50 ಇದ್ದದ್ದು, ಈ ಬಾರಿ ರೂ. 5 ರಿಂದ 10ಕ್ಕೆ ಇಳಿದಿದೆ. ಅದೇ ಸಂತೆಯಲ್ಲಿ ಗ್ರಾಹಕರು ಖರೀದಿಸಿದರೆ ಮೆಣಸಿನಕಾಯಿ ರೂ. 30-40, ಬೀನ್ಸ್ 40-50 ಕೊಟ್ಟು ಖರೀದಿಸಬೇಕಿದೆ.

ಒಮ್ಮೆ ಸುರಿದು ಹೋದ ಮಳೆ ಮತ್ತೆ ಬರುವ ಲಕ್ಷಣವೇ ಇಲ್ಲ. ಬಿಸಿಲಿಗೆ ಹೊಳೆಯಲ್ಲಿ ನೀರು ಬತ್ತಿ ಹೋಗಿದೆ. ಬಂದ ಮಳೆ ಸಾಲದ ಕಾರಣ ಬೆಳೆಗಾರರು ತೋಟದಲ್ಲಿ ಕಾಫಿ ಹೂ ಅರಳಿಸಲು ಸ್ಪಿಂಕ್ಲರ್ ನೀರು ಹಾಯಿಸಿ ಅರಳಿಸುತ್ತಿದ್ದಾರೆ.

ರೋಬಸ್ಟ ಕಾಫಿ 50 ಕೆಜಿಗೆ ರೂ. 3,150 ಮಾತ್ರ ದೊರೆಯುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಜಿಲ್ಲಾಡಳಿತ ರೈತರ ದೀರ್ಘಾವಧಿ ಸಾಲದ ಕಂತುಗಳನ್ನು ಮುಂದೂಡಬೇಕು. ಈ ವಿಭಾಗದ ಬಹಳಷ್ಟು ನಿಜವಾದ ರೈತರಿಗೆ ಇನ್ನೂ ಸಾಲಮನ್ನಾ ಆದೇಶ ಬಂದಿರುವುದಿಲ್ಲ. ಸರಕಾರ ಶೀಘ್ರ ಆದೇಶ ಜಾರಿ ಮಾಡಬೇಕು. ರೈತರ ಹಿತ ಕಾಪಾಡಬೇಕು ಎಂದು ದುಂಡಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಟಿ. ಹರೀಶ್ ಆಗ್ರಹಿಸಿದ್ದಾರೆ.