ಕುಶಾಲನಗರ, ಮಾ. 16: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೇಂದ್ರ ಕಛೇರಿಯ ಆವರಣದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ನೆಟ್ಟು ಬೆಳೆಸಲಾಗಿದ್ದ ನೂರಾರು ಗಿಡಗಳು ಸುಟ್ಟು ಕರಕಲಾಗಿದೆ.

ಭಾನುವಾರ ಈ ಘಟನೆ ನಡೆದಿದ್ದು ಬೆಳೆದು ನಿಂತಿದ್ದ ವಿವಿಧ ಜಾತಿಗಳ ಗಿಡ ಮರಗಳು ಸಂಪೂರ್ಣ ನಾಶವಾದ ದೃಶ್ಯ ಕಂಡುಬಂದಿದೆ. ಕಳೆದ 4 ವರ್ಷಗಳಿಂದ ಅರಣ್ಯ ಇಲಾಖೆ ಮತ್ತು ಸ್ಥಳೀಯ ಕಾವೇರಿ ಪರಿಸರ ರಕ್ಷಣಾ ಬಳಗ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಗಿಡ ನೆಟ್ಟು ಅದರ ಪೋಷಣೆಯನ್ನು ಅರಣ್ಯ ಇಲಾಖೆ ಮಾಡುತ್ತಿತ್ತು. ಇತ್ತೀಚೆಗಷ್ಟೆ ಆವರಣದ ಸ್ವಚ್ಛ ಮಾಡುವ ಸಂದರ್ಭ ಕೆಲವು ಗಿಡಗಳಿಗೆ ಬೆಂಕಿ ಹಾಕಿ ನಾಶ ಮಾಡಿದ ಘಟನೆಯೂ ಕೂಡ ನಡೆದಿತ್ತು. ಆವರಣದಲ್ಲಿ ಸುಮಾರು 500ಕ್ಕೂ ಅಧಿಕ ಗಿಡಗಳು ಬೆಳೆದು ನಿಂತಿದ್ದು ಇದೀಗ ಬಹುತೇಕ ಗಿಡಗಳು ಬೆಂಕಿಗೆ ಸುಟ್ಟು ಕರಕಲಾಗಿರುವ ದೃಶ್ಯ ಕಂಡುಬಂದಿದೆ. ನೆಡುತೋಪು ಯೋಜನೆಯಡಿಯಲ್ಲಿ ಅರಣ್ಯ ಇಲಾಖೆ ಮೂಲಕ ಗಿಡಗಳ ನಿರ್ವಹಣೆ ನಡೆಯುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಗಿಡಗಳ ರಕ್ಷಣೆಗೆ ಓರ್ವ ನೌಕರನ ನಿಯೋಜನೆ ಮಾಡದಿರುವುದು ಈ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ಕುಶಾಲನಗರ ಅರಣ್ಯ ವಲಯಾಧಿಕಾರಿ ಅನನ್ಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೆಂಕಿಗೆ ಕಾರಣಕರ್ತರಾದವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದು ಉಳಿದ ಗಿಡಗಳ ರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು. ನಾಶಗೊಂಡ ಗಿಡಗಳ ಬದಲಿಗೆ ಬೇರೆ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು ಎಂದು ತಿಳಿಸಿದ್ದಾರೆ.

ಬೆಳೆದು ನಿಂತಿದ್ದ ಗಿಡಗಳಿಗೆ ಬೆಂಕಿ ಹಚ್ಚಿ ನಾಶಕ್ಕೆ ಕಾರಣಕರ್ತರಾದವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಕಾವೇರಿ ಪರಿಸರ ರಕ್ಷಣಾ ಬಳಗದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಒತ್ತಾಯಿಸಿದ್ದಾರೆ.