ಮಡಿಕೇರಿ, ಮಾ. 16: ಕಾರ್ಪೊರೇಶನ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ವಿ. ಭಾರತಿ ಅವರು ಮಡಿಕೇರಿ ಭೇಟಿ ನಿಮಿತ್ತ ಗ್ರಾಹಕ ಹಾಗೂ ಬೆಳೆಗಾರರ ಸಭೆಯನ್ನು ಆಯೋಜಿಸಲಾಗಿತ್ತು. ಕೊಡಗು ಜಿಲ್ಲೆಯ 20 ಶಾಖೆಗಳಿಂದ ಕಳೆದ 86 ವರ್ಷಗಳಿಂದ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳುತ್ತಾ 5ನೇ ತಲೆಮಾರಿಗೂ ಬ್ಯಾಂಕಿಂಗ್ ಮುನ್ನಡೆಸುತ್ತಿದ್ದಾರೆಂದರೆ ನಿಜಕ್ಕೂ ಶ್ಲಾಘನೀಯ ಕೆಲಸವೆಂದು ಪಿ.ವಿ.ಭಾರತಿ ತಿಳಿಸಿದರು.

ಕಾರ್ಪೊರೇಶನ್ ಬ್ಯಾಂಕ್ 1934 ರಷ್ಟು ಹಿಂದೆಯೆ ಕೊಡಗಿನಲ್ಲಿ ತನ್ನ ಶಾಖೆಯನ್ನು ಪ್ರಾರಂಭಿಸಿತು. 1984 ರಲ್ಲಿ ಜಿಲ್ಲಾ ಅಗ್ರಣೀ ಬ್ಯಾಂಕ್ ಆಗಿ ರೂಪುಗೊಂಡು ಲೀಡ್ ಬ್ಯಾಂಕ್ ಅನ್ನು ಪ್ರಾರಂಭಿಸಿತು. 2015ರಲ್ಲಿ ಯುವಜನರ ಆಶೋತ್ತರಗಳನ್ನು ಪೂರೈಸಲು ಕಾಬ್ಸೆಟಿಯನ್ನು ಕೂಡಿಗೆಯಲ್ಲಿ ಪ್ರಾರಂಭಿಸಲಾಯಿತು. ಮಾರ್ಚ್ 12 ರಂದು 114 ವರ್ಷ ಪೂರೈಸಿ 115ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ತನ್ನ ಸುದೀರ್ಘ ಯಾತ್ರೆಯಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿದೆ. ಅವೆಲ್ಲವನ್ನು ಮೆಟ್ಟಿ ನಿಂತು ಜನಸ್ನೇಹಿ ಬ್ಯಾಂಕಾಗಿ ಮನ್ನಣೆ ಗಳಿಸಿದೆ. ಇಂದು ಕೂಡಾ ವಿಲೀನದ ಸಂದರ್ಭದಲ್ಲಿ ನಮ್ಮೆಲ್ಲಾ ಗ್ರಾಹಕರು ಯಾವುದೇ ಕಾರಣಕ್ಕಾಗಿ ಗಾಬರಿಯಾಗುವ ಅಗತ್ಯವಿಲ್ಲ. ಕಾರಣ ಖಾತೆಯ ಸಂಖ್ಯೆ ಬದಲಾಗುವುದಿಲ್ಲ ಹಾಗೂ ಹೊಸ ಗ್ರಾಹಕರ ಅನ್ವೇಷಣೆಗೆ ತಕ್ಕಂತೆ ಹೊಸ ಸೇವೆ ನೀಡಲು ಬದ್ಧವಾಗಿದೆ ಎಂದು ಗ್ರಾಹಕರ, ಬೆಳೆಗಾರರ ಸಭೆ ಉದ್ಘಾಟಿಸುತ್ತಾ ಮಾತನಾಡಿದರು. ಸ್ಥಾಪಕ ಖಾನ್ ಬಹಾದ್ದೂರ್ ಹಾಜಿ, ಅಬ್ದುಲ್ಲಾ ಹಾಜಿ, ಖಾಸೀಮ್ ಸಾಹೇಬ್ ಬಹಾದ್ದೂರರ ಭಾವಚಿತ್ರಕ್ಕೆ ನಮನ ಸಲ್ಲಿಸುವುದರ ಮೂಲಕ ಜ್ಯೋತಿ ಬೆಳಗಿಸಿ ಗ್ರಾಹಕರಿಗೆ ಶುಭ ಹಾರೈಸಿದರು.

ಮೈಸೂರು ವಲಯದ ಡೆಪ್ಯುಟಿ ಜನರಲ್ ಮೆನೇಜರ್, ಶ್ರೀ ಸಿ.ವಿ.ಮಂಜುನಾಥ ಎಲ್ಲರನ್ನು ಸ್ವಾಗತಿಸುತ್ತ ಕಳೆದ 86 ವರ್ಷಗಳಿಂದ ಬ್ಯಾಂಕು ಕೊಡಗಿನ ಜನರಿಗೆ ಸೇವೆ ನೀಡುತ್ತಿದ್ದು 1934ರಲ್ಲಿ ಕಾರ್ಪೊರೇಶನ್ ಬ್ಯಾಂಕಿನ 7 ನೇ ಶಾಖೆಯನ್ನು ಮಡಿಕೇರಿಯಲ್ಲಿ ಪ್ರಾರಂಭಿಸಲಾಯಿತು. ತದನಂತರ 1984ರಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮಡಿಕೇರಿಯಲ್ಲಿ ಹಾಗೂ 2015ರಲ್ಲಿ ಕೂಡಿಗೆಯಲ್ಲಿ ಕಾಬ್ಸೆಟಿಯನ್ನು ಪ್ರಾರಂಭಿಸಲಾಗಿದೆ. ನಮ್ಮದು 20 ಶಾಖೆಗಳು ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಒಟ್ಟು ರೂ. 1409 ಕೋಟಿ ವ್ಯವಹಾರವಿದ್ದು, ಇದರಲ್ಲಿ ರೂ. 811 ಕೋಟಿ ಡೆಪಾಸಿಟ್ ಹಾಗೂ ರೂ. 598 ಕೋಟಿ ಸಾಲ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಎನ್ ಬೋಸ್ ಮಂದಣ್ಣ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಶನ್‍ನ. ಎಂ.ಸಿ. ಕಾರ್ಯಪ್ಪ, ಹಲವಾರು ಗ್ರಾಹಕರು ಹಾಗೂ ಬೆಳೆಗಾರರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಗ್ರಾಹಕರು ನೀಡಿದ ಸಲಹೆಗಳಿಗೆ ಮಂಜುನಾಥ ಉತ್ತರಿಸಿದರು.

ಕೊಡಗು ಜಿಲ್ಲೆಯ ಪ್ರವಾಸವನ್ನು ಅವಿಸ್ಮರಣೀಯವಾಗಿಸಲು ಸಿಬ್ಬಂದಿಗಳೆಲ್ಲ ಸೇರಿ ಸನ್ಮಾನ ಮಾಡಿದರು. ಸನ್ಮಾನ ಕಾರ್ಯಕ್ಕೆ ಎಂ.ಸಿ. ನಾಣಯ್ಯ, ನಿವೃತ್ತ ನಬಾರ್ಡ್ ಅಧಿಕಾರಿಗಳು ಕೊಡವರ ವೇಷ ಭೂಷಣದಲ್ಲಿ ಬಂದು ಸಹಕರಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ನಡೆಸಿಕೊಟ್ಟರು. ಮೈಸೂರು ವಲಯ ಸಹಾಯಕ ಮಹಾ ಪ್ರಬಂಧಕ ಎನ್. ಶ್ರೀನಿವಾಸಮೂರ್ತಿ ವಂದಿಸಿದರು.