ಮಡಿಕೇರಿ, ಮಾ. 16: ಕೊಡಗು ಜಿಲ್ಲೆಯ ಏಕೈಕ ನಗರಸಭೆಯಾಗಿರುವ ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿ ನಗರಸಭೆಯ ಕಳೆದ ಆಡಳಿತ ಮಂಡಳಿ ಪೂರ್ಣಗೊಂಡು ಇದೀಗ ಒಂದು ವರ್ಷ ಪೂರ್ಣಗೊಂಡಿದೆ. ಚುನಾಯಿತ ಸದಸ್ಯರ ಐದು ವರ್ಷಗಳ ಅಧಿಕಾರಾವಧಿ 2019ರ ಮಾರ್ಚ್ 14ಕ್ಕೆ ಪೂರ್ಣಗೊಂಡಿದ್ದು; ಮಾರ್ಚ್ 14ರ ಬಳಿಕ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಪ್ರಕ್ರಿಯೆ ನಡೆದು ಇಂದಿಗೆ ಸಂಪೂರ್ಣ ಒಂದು ವರ್ಷ ಕಳೆಯುತ್ತಿದೆ.ಆದರೆ ಈ ನಗರಸಭೆಗೆ ಮತ್ತೊಂದು ಚುನಾವಣೆ ಇಲ್ಲಿಯವರೆಗೆ ಘೋಷಣೆಯಾಗಿಲ್ಲ. ಇದಕ್ಕೆ ವಾರ್ಡ್ನ ಮತದಾರರ ಪುನರ್ ವಿಂಗಡಣೆ, ಈ ಹಿಂದೆ ನಿಗದಿಪಡಿಸಿದ್ದ ವಾರ್ಡ್ವಾರ್ ಮೀಸಲಾತಿಯ ಕುರಿತಾಗಿ ಕೆಲವರು ರಾಜ್ಯ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿರುವದು ಕಾರಣವೆನ್ನಲಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ರಾಜ್ಯ ಉಚ್ಚನ್ಯಾಯಾಲಯ ಈ ಕುರಿತು ಪ್ರಶ್ನಿಸಿದ್ದ ಅರ್ಜಿಯನ್ನು ‘ಸ್ಕ್ವಾಷ್’ ಮಾಡಿದೆ ಎನ್ನಲಾಗಿದೆ. ಆದರೆ ಇದಾದ ಬಳಿಕ ಕಾನೂನಿನ ಪ್ರಕಾರ ನಡೆಯಬೇಕಿದ್ದ ಕೆಲವು ವಿವರಗಳು ಇನ್ನೂ ಸಲ್ಲಿಕೆಯಾಗಿಲ್ಲ ಎಂದು ಹೇಳಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆಗೆ ಚುನಾವಣೆ ನಡೆಯುತ್ತಿಲ್ಲ ಎಂದು ಹೇಳಲಾಗುತ್ತಿದೆಯಾದರೂ; ಮತ್ತೊಂದು ಮೂಲದ ಪ್ರಕಾರ ನ್ಯಾಯಾಲಯ ‘ಸ್ಕ್ವಾಷ್’ ಮಾಡಿದ್ದ ವಿಚಾರವನ್ನು ಅರ್ಜಿದಾರರು ಮರು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂಬ ಮಾತು ಕೆಲವರಿಂದ ಕೇಳಿಬರುತ್ತಿದೆ. ಆದರೆ ಅಚ್ಚರಿದಾಯಕವಾದ ವಿಚಾರವೆಂದರೆ; ಈ ಬಗ್ಗೆ ಇನ್ನೂ ಯಾವದೇ ಸ್ಪಷ್ಟತೆ ಯಾರಿಗೂ ಇಲ್ಲ ಎನ್ನುವದು. ನ್ಯಾಯಾಲಯ ಈ ಪ್ರಕರಣವನ್ನು ಇತ್ಯರ್ಥಮಾಡಿದೆ ಎಂದು ಹೇಳಲಾಗುತ್ತಿದ್ದರೂ ಮತ್ತೆ ಇದು ಮುಂದುವರಿಯುತ್ತಿದೆಯೇ ಎಂಬದನ್ನು ಸಂಬಂಧಿಸಿದ ಹಲವರಲ್ಲಿ ಪ್ರಶ್ನಿಸಿದರೆ ಅವರಲ್ಲಿ ಈ ಬಗ್ಗೆ ವಿವರ ಇಲ್ಲ.
ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಹಾಗೂ ಇತರ ಕೆಲವು ಅಧಿಕಾರಿಗಳ ಪ್ರಕಾರ ಚುನಾವಣೆ ನಡೆಸುವ ಕುರಿತಾಗಿ ಚುನಾವಣಾ ಆಯೋಗದಿಂದಾಗಲಿ, ಸರಕಾರದಿಂದಾಗಲಿ ಯಾವದೇ ಮಾಹಿತಿ ಅಥವಾ ಸೂಚನೆ ಇನ್ನೂ ತಲುಪಿಲ್ಲವಂತೆ. ಸಂಬಂಧಿಸಿದ ಪ್ರಮುಖರು, ಮಾಜಿ ಸದಸ್ಯರುಗಳಿಗೇ ನಗರಸಭೆಗೆ ಚುನಾವಣೆ ಯಾಕೆ ಘೋಷಣೆಯಾಗುತ್ತಿಲ್ಲ ಎಂಬ ಸ್ಪಷ್ಟತೆ ವರ್ಷ ಕಳೆದರೂ ಇಲ್ಲದಿರುವದು ವಿಶೇಷವಾಗಿದೆ.
ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ಸಬೂಬು ಒಂದೆಡೆಯಾದರೆ ಇದನ್ನು ನ್ಯಾಯಾಲಯ ತಳ್ಳಿ ಹಾಕಿ ಹಲವಾರು ತಿಂಗಲೇ ಕಳೆದಿದೆ ಎಂಬದು ಮತ್ತೆ ಹಲವರ ಮಾತು. ಈ ಎಲ್ಲದರ ನಡುವೆ ರಾಜ್ಯವ್ಯಾಪಿಯಾಗಿ ನಗರಸಭೆ ಸೇರಿದಂತೆ ಸ್ಥಳೀಯ ಇತರ ಸಂಸ್ಥೆಗಳಾದ ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ತಡೆಯಾಗಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಇದೀಗ ಪ್ರಕಟಗೊಂಡಿದೆ. ಇದರಲ್ಲಿ ಚುನಾವಣೆಯೇ ನಡೆಯದಿರುವ ಹಾಗೂ ಇನ್ನೂ ಚುನಾವಣೆ ನಿಗದಿಯಾಗದಿರುವ ಮಡಿಕೇರಿ ನಗರಸಭೆಗೂ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಿಸಲ್ಪಟ್ಟಿದೆ.
ಹಿಂದೆ ಏನಾಗಿತ್ತು..?
‘ಶಕ್ತಿ’ಗೆ ತಿಳಿದು ಬಂದಂತೆ ಈ ಹಿಂದೆ ನಗರಸಭೆಯ ಅಧಿಕಾರಾವಧಿ ಮುಗಿದ ಸಂದರ್ಭ ಮುಂದಿನ ಚುನಾವಣೆ ಬಗ್ಗೆ ಪ್ರಕಟಿಸಿದ್ದ ವಾರ್ಡ್ವಾರು ಮೀಸಲಾತಿಯನ್ನು ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇದನ್ನು ನ್ಯಾಯಾಲಯ ‘ಸ್ಕ್ವಾಷ್’ ಮಾಡಿ ಬಳಿಕ ವಾರ್ಡ್ನ ಮತದಾರರ ಪಟ್ಟಿಯ ಪುನರ್ ವಿಂಗಡಣೆಯ ಗೊಂದಲವೇರ್ಪಟ್ಟಿತ್ತು. ಇದರ ಬೆನ್ನಲ್ಲೇ ಮಳೆಗಾಲ ಎದುರಾದ ಕಾರಣದಿಂದಾಗಿ ಚುನಾವಣೆ ವಿಚಾರ ಪ್ರಕಟವಾಗಲಿಲ್ಲ. ಇದಾದ ಬಳಿಕ ಸರಕಾರದಲ್ಲಿನ ಅಸ್ತಿರತೆ, ಅಧಿಕಾರಕ್ಕಾಗಿ ನಡೆಯುತ್ತಿದ್ದ ಘಟನೆಗಳಿಂದಲೂ ನಗರಸಭೆಯ ಚುನಾವಣೆ ಮಹತ್ವ ಕಂಡಿರಲಿಲ್ಲ. ಇದೀಗ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ತಾ. 14ಕ್ಕೆ ವರ್ಷಪೂರ್ಣ ಗೊಂಡಿದೆ.