ಮಡಿಕೇರಿ, ಮಾ. 16: ಕೊರೊನಾ ಹರಡುವಿಕೆಯ ಭೀತಿ ಸಂಬಂಧ; ವಿದೇಶಗಳಿಂದ ಕೊಡಗಿಗೆ ವಾಪಸ್ಸಾಗಿರುವ ಒಟ್ಟು 131 ಮಂದಿಯನ್ನು ಜಿಲ್ಲಾಡಳಿತ ಇದುವರೆಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡಿದೆ. ಈ ಪೈಕಿ ಈಗಾಗಲೇ ಮೂವರಿಗೆ ಜಿಲ್ಲಾ ವೈದ್ಯಕೀಯ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ತಪಾಸಣೆ ಕೈಗೊಳ್ಳಲಾಗಿದೆ. ಇನ್ನುಳಿದಂತೆ 128 ಮಂದಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು ಮಾಡಲಾಗಿದೆ.ನೋಟೀಸ್ : ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಜಿಲ್ಲಾಡಳಿತ ಕೈಗೊಂಡಿರುವ ಈ ನಿರ್ಧಾರವನ್ನು ಉಲ್ಲಂಘಿಸಿರುವ ಸಿದ್ದಾಪುರದ ಓರ್ವ ವ್ಯಕ್ತಿಗೆ ಭಾರತೀಯ ದಂಡ ಸಂಹಿತೆ 188ರ ಅಡಿಯಲ್ಲಿ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಾಲೂಕುವಾರು ವಿವರ : ಈ ಹಿಂದೆ ಬೇರೆ ಬೇರೆ ದೇಶಗಳಿಗೆ ಉದ್ಯೋಗ ನಿಮಿತ್ತ ತೆರಳಿದ್ದು, ಪ್ರಸ್ತುತ ಕೊರೊನಾ ಸೋಂಕಿನ ಸಂದರ್ಭದಲ್ಲಿ ಕೊಡಗಿಗೆ ಹಿಂತಿರುಗಿರುವ ವ್ಯಕ್ತಿಗಳನ್ನು ಗುರುತಿಸಿ, ತಪಾಸಣೆಗೆ ಒಳಪಡಿಸುವ ಕಾರ್ಯ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಳಿವು ನೀಡಿದ್ದಾರೆ. ಈ ಪೈಕಿ ಇಂದಿನ ತನಕ ಮಡಿಕೇರಿ ತಾಲೂಕಿನಲ್ಲಿ 56 ಮಂದಿ, ಸೋಮವಾರಪೇಟೆ ತಾಲೂಕಿನಲ್ಲಿ 44 ಮಂದಿ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 31 ಜನರನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.