ಮಡಿಕೇರಿ, ಮಾ. 15: ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಚಾಚು ತಪ್ಪದೆ ತಲುಪಿಸಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಫಾಯಿ ಕರ್ಮಚಾರಿಗಳ ಸೌಲಭ್ಯ ಸಂಬಂಧÀ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಫಾಯಿ ಕರ್ಮಚಾರಿಗಳು ಅನಾದಿ ಕಾಲದಿಂದಲೂ ಕನಿಷ್ಟ ಸೌಲಭ್ಯವಿಲ್ಲದೆ ಬದುಕು ಸವೆಸುತ್ತಿದ್ದು, ಇಂತಹ ಸಮಾಜಕ್ಕೆ ಕನಿಷ್ಟ ಮೂಲ ಸೌಲಭ್ಯವನ್ನಾದರು ಒದಗಿಸಬೇಕು.
ಸಫಾಯಿ ಕರ್ಮಚಾರಿ ಮಕ್ಕಳು ವೈದ್ಯಕೀಯ, ಎಂಜಿನಿಯರಿಂಗ್, ಡೆಂಟಲ್ ಮತ್ತಿತರ ಉನ್ನತ ವ್ಯಾಸಂಗ ಮಾಡುವವರಿಗೆ ವಿದೇಶಗಳಲ್ಲಿ ವ್ಯಾಸಂಗ ಮಾಡಲು ಕೇಂದ್ರ ಸರ್ಕಾರಿಂದ 25 ಲಕ್ಷ ರೂ, ಗಳ ನೆರವು ನೀಡಲಾಗುತ್ತಿದ್ದು, ಈ ಸೌಲಭ್ಯ ವನ್ನು ಬಳಸಿಕೊಳ್ಳುವಂತಾಗಬೇಕು. ಜೊತೆಗೆ ಮಾಹಿತಿ ನೀಡುವಂತಾಗ ಬೇಕು ಎಂದು ಸೂಚಿಸಿದರು.
ಭೂದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್ ಮಾತನಾಡಿ, ನಗರಸಭೆಯಲ್ಲಿ ಒಟ್ಟು 49 ಪೌರಕಾರ್ಮಿಕ ಹುದ್ದೆಗಳಿದ್ದು ಹಾಲಿ 45 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ 24 ಪೌರಕಾರ್ಮಿಕರಿದ್ದು, ಯಾವುದೇ ಹುದ್ದೆ ಖಾಲಿ ಇಲ್ಲ. ಸೋಮವಾರ ಪೇಟೆ ಪ.ಪಂ. ವ್ಯಾಪ್ತಿಯಲ್ಲಿ 10 ಹುದ್ದೆಗಳಿದ್ದು ಯಾವುದೇ ಹುದ್ದೆ ಖಾಲಿ ಇರುವುದಿಲ್ಲ ಮತ್ತು ವೀರಾಜಪೇಟೆ ಪ.ಪಂ. ವ್ಯಾಪ್ತಿಯಲ್ಲಿ ಒಟ್ಟು 25 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು 2 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಅವರು, ಸದ್ಯ 6 ಹುದ್ದೆಗಳು ಖಾಲಿ ಇದ್ದು ನಿಯಮಾನುಸಾರ ಅವುಗಳನ್ನು ಭರ್ತಿಮಾಡಿ. ಸದ್ಯ ಪ್ರತಿ 700 ಜನರಿಗೆ ಒಬ್ಬ ಪೌರಕಾರ್ಮಿಕರನ್ನು ನೇಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಿ ಪ್ರವಾಸಿ ಸ್ಥಳಗಳನ್ನು ಒಳಗೊಂಡ ಪ್ರದೇಶಗಳಲ್ಲಿ 500 ಜನರಿಗೆ ಒಬ್ಬ ಪೌರ ಕಾರ್ಮಿಕರನ್ನು ನೇಮಿಸುವ ನಿಟ್ಟಿನಲ್ಲಿ ಪ್ರಯತ್ನಿಸ ಲಾಗುವುದು ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಎಂ.ಎಲ್. ರಮೇಶ್ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 49 ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ಶೇ. 4.76 ರಂತೆ ನಗರ ಸ್ಥಳೀಯ ಸಂಸ್ಥೆ ವತಿಯಿಂದ ಇಎಸ್‍ಐ ಹಾಗೂ ಶೇ. 1.75 ರಂತೆ ವೇತನದಲ್ಲಿ ಕಟಾಯಿಸಿ ಸಂಬಂಧಪಟ್ಟ ಕಾರ್ಮಿಕರ ರಾಜ್ಯ ವಿಮಾ ನಿಗಮಕ್ಕೆ ಪಾವತಿಸಲಾಗುತ್ತಿದೆ. ಶೇ.12 ರಂತೆ ಪಿಎಫ್ ನ್ನು ಸಿಬ್ಬಂದಿಗಳ ವೇತನದಿಂದ ಕಟಾಯಿಸಿ ಸಂಬಂಧಪಟ್ಟ ಕಾರ್ಮಿಕರ ಭವಿಷ್ಯ ನಿಧಿಗೆ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಮುಖರಾದ ಪಳನಿ ಪ್ರಕಾಶ್ ಮಾತನಾಡಿ ಸಂಬಂಧಪಟ್ಟ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾ.ಪಂ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಜೊತೆಗೆ ವೀರಾಜಪೇಟೆ ತಾಲೂಕಿನ ಬಾಳಗೋಡುವಿನಲ್ಲಿ ವಸತಿ ರಹಿತರಿದ್ದು ಅವರಿಗೂ ನಿವೇಶನ ಮಂಜೂರು ಮಾಡುವಂತೆ ಕೋರಿದರು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಬಾಳಗೋಡುವಿನಲ್ಲಿ ಈಗಾಗಲೆ ಸರ್ವೆ ಕಾರ್ಯ ಪೂರ್ಣಗೊಂಡಿದ್ದು. ಜಾಗವನ್ನು ತಾಲೂಕು ಪಂಚಾಯಿತಿಗೆ ನೀಡಲಾಗಿದೆ. ನಿಯಮಾನುಸಾರ ಸರ್ಕಾರದ ವಸತಿ ಯೋಜನೆಗಳಿಂದ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಸುಂಟಿಕೊಪ್ಪ ಭಾಗದ ಪೌರಕಾರ್ಮಿಕರು ಮಾತನಾಡಿ, ತಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಮರ್ಪಕವಾಗಿ ಮಂಜೂರಾಗುತ್ತಿಲ್ಲ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಅವರು, ವಿದ್ಯಾರ್ಥಿಗಳ ವಿವರವನ್ನು ಕಚೇರಿಗೆ ತಲುಪಿಸಿ, ವಿದ್ಯಾರ್ಥಿ ವೇತನ ಪಾವತಿಯಲ್ಲಿ ಯಾವುದೇ ಗೊಂದಲಗಳಿದ್ದರೆ ಅದನ್ನು ಪರಿಹಸಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರು ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿಯೂ ಪೌರಕಾರ್ಮಿಕರ ಮಕ್ಕಳಿಗೆ ಓದಲು ಅನುವು ಮಾಡಿಕೊಡುವಂತೆ ಸೂಚಿಸಿದರು.
ಈ ವಿಚಾರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್ ಮಚ್ಚಾಡೋ, ಜಿಲ್ಲೆಯಲ್ಲಿ 6 ಶಾಲೆಗಳು ಮಾತ್ರವೇ ಆರ್‍ಟಿಇ ಅಡಿಯಲ್ಲಿ ಬರುತ್ತವೆ ಎಂದರು.
ಸಭೆಯಲ್ಲಿ ಜಿ.ಪಂ ಸಿಇಒ ಲಕ್ಷ್ಮೀಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಡಿ. ಪನ್ನೇಕರ್, ಜಿ.ಪಂ ಯೋಜನಾ ನಿರ್ದೇಶಕರಾದ ಶ್ರೀಕಂಠ ಮೂರ್ತಿ, ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯಸ್ಥರಾದ ಆರ್.ಕೆ. ಬಾಲಚಂದ್ರ, ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ, ಕಾರ್ಮಿಕ ಇಲಾಖೆ ತಾಲೂಕು ಅಧಿಕಾರಿ ಯತ್ನಟ್ಟಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ದಯಾನಂದ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್, ತಹಶೀಲ್ದಾರರಾದ ಮಹೇಶ್, ಗೋವಿಂದರಾಜು, ತಾ.ಪಂ. ಇಒಗಳಾದ ಸುನೀಲ್ ಕುಮಾರ್, ಷಣ್ಮುಗಮ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಶ್ರೀಧರ, ಸುಜಯ್ ಕುಮಾರ್, ನಗರಸಭೆಯ ಸ್ವಚ್ಛತಾ ವಿಭಾಗದ ಅಧಿಕಾರಿ ನಾಚಪ್ಪ, ವೈದ್ಯಕೀಯ ಕಾಲೇಜಿನ ಮಂಜುನಾಥ್, ಪ್ರಮುಖರಾದ ಮತ್ತಪ್ಪ, ಓಬ್ಳಿ, ಲೋಕೇಶ್, ಪುಟ್ಟಮ್ಮ, ಲಕ್ಷ್ಮೀ ಇತರರು ಇದ್ದರು.