ವೀರಾಜಪೇಟೆ, ಮಾ. 15: ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಕುಕ್ಲೂರು ಗ್ರಾಮದ ಶ್ರೀ ಮುತ್ತಪ್ಪನ್ ದೇವಾಲಯದ ವಾರ್ಷಿಕ ತೆರೆ ಮಹೋತ್ಸವ ಶ್ರಧ್ದಾ ಭಕ್ತಿಯಿಂದ ನೆರೆವೇರಿತು.
ತಾ. 11 ರ ಸಂಜೆಯಿಂದ ಶ್ರೀ ಮುತ್ತಪ್ಪನ್ ವೆಳ್ಳಾಟಂದಿಂದ ಆರಂಭವಾದ ತೆರೆ ಮಹೋತ್ಸವವು ಕ್ರಮವಾಗಿ ಶಾಸ್ತಪ್ಪ ವೆಳ್ಳಾಟಂ, ಗುಳಿಗ ವೆಳ್ಳಾಟಂ, ತೆರೆಗಳ ದೈವ ಪ್ರದರ್ಶನ ಕಂಡವು ವಿಶೇಷವಾದ ಬಸುರಿಮಾಲ ತೆರೆಯು ಮೈಕ್ರೋ ಸ್ಟೇಷನ್‍ನಿಂದ ಆರಂಭವಾಗಿ ಮುಖ್ಯ ರಸ್ತೆಯಲ್ಲಿ ಭಕ್ತರೊಂದಿಗೆ ದೇವಾಲಯಕ್ಕೆ ಆಗಮಿಸಿತು. ದೈವ ನೃತ್ಯ ಪ್ರದರ್ಶನದಿಂದ ಭಕ್ತರು ಭಕ್ತಿ ಭಾವ ಮೆರೆದರು. ನಂತರದಲ್ಲಿ ಉತ್ಸವದ ಪ್ರಮುಖ ಆಕರ್ಷಣೆಯಾದ ಕರಿಂಗುಟ್ಟಿ ಶಾಸ್ತಪ್ಪನ್ ವೆಳ್ಳಾಟಂ ನಡೆದವು. ಗುಳಿಗ, ಶ್ರೀ ಮುತ್ತಪ್ಪನ್ ಮತ್ತು ತಿರುವಪ್ಪನ್ ತೆರೆಗಳು ಶ್ರೀ ಶಾಸ್ತಪ್ಪನ್ ತೆರೆ ಬಸುರಿಮಾಲ ತೆರೆ ಕರಿಂಗುಟ್ಟಿ ಶಾಸ್ತಪ್ಪನ್ ತೆರೆಗಳು ಮಧ್ಯಾಹ್ನದ ವೇಳೆÀಗೆ ಮುಕ್ತಾಯ ಕಂಡಿತು.
ದೇವಾಲಯದ ಆಡಳಿತ ಮಂಡಳಿಯಿಂದ ಸಂಜೆ ಮತ್ತು ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಉತ್ಸವಕ್ಕೆ ಸ್ಥಳೀಯ ಗ್ರಾಮವಲ್ಲದೆ, ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಅಗಮಿಸಿ ದೇವರ ಕೃಪೆಗೆ ಪಾತ್ರರಾದರು.