ನಾಪೋಕ್ಲು, ಮಾ. 15: ಸಮೀಪದ ಬಲಮುರಿಯ ಅಗಸ್ತ್ಯೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ಜರುಗಿತು. ತಾ. 4 ರಿಂದ ಆರಂಭಗೊಂಡ ಉತ್ಸವ ಒಂದು ವಾರಗಳ ಕಾಲ ನಡೆಯಿತು. ಸುತ್ತಮುತ್ತಲಿನ ಊರುಗಳ ಭಕ್ತರು ಪಾಲ್ಗೊಂಡಿದ್ದರು. ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಎತ್ತು ಪೋರಾಟ ನಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸಾಂಪ್ರದಾಯಿಕ ಆಚರಣೆ ನೆರವೇರಿತು.

ಕಾವೇರಿ ಹೊಳೆಯಲ್ಲಿ ದೇವರ ಅವಭೃತ ಸ್ನಾನ ನೆರವೇರಿಸಿ ದೇವಾಲಯದ ಪ್ರಾಂಗಣದಲ್ಲಿ ನಡೆದ ದೇವರ ನೃತ್ಯಬಲಿಯನ್ನು ಅಧಿಕ ಸಂಖ್ಯೆಯ ಭಕ್ತರು ವೀಕ್ಷಿಸಿದರು. ಅರ್ಚಕ ಚಂದ್ರಶೇಖರ ಐತಾಳ್ ಅವರ ನೇತೃತ್ವದಲ್ಲಿ ಪೂಜಾವಿಧಿವಿಧಾನಗಳು ನೆರವೇರಿದವು. ಅಜ್ಜಪ್ಪ ಕೋಲ ಹಾಗೂ ಚಾಮುಂಡಿ ಕೋಲಗಳು ಜರುಗಿದವು. ದೇವಾಲಯದಲ್ಲಿ ಜರುಗಿದ ಶುದ್ಧ ಕಲಶದೊಂದಿಗೆ ಉತ್ಸವ ಸಂಪನ್ನಗೊಂಡಿತು.

ಬಲಮುರಿಯಲ್ಲಿ ಕಣ್ವಮುನಿ ಸ್ಥಾಪನೆ ಮಾಡಿದ ದೇವಾಲಯ ಎನ್ನಲಾದ ಮಹಾವಿóಷ್ಣು ದೇವಾಲಯದ ಜೀರ್ಣೋದ್ಧಾರ ಕಾರ್ಯ ಸುಮಾರು ರೂ. 40 ಲಕ್ಷ ವೆಚ್ಚದಲ್ಲಿ ನಡೆದಿದ್ದು, ದೇವಾಲಯದ ಪುನರ್ ಪ್ರತಿಷ್ಠಾಪನೆ ಏಪ್ರಿಲ್ 1 ರಿಂದ 3 ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾಧು ತಮ್ಮಯ್ಯ ತಿಳಿಸಿದರು. ಏಪ್ರಿಲ್ 3 ರಂದು ಬೆಳಿಗ್ಗೆ 8 ಗಂಟೆಗೆ ಪ್ರತಿಷ್ಠಾಪನೆ ನೆರವೇರಲಿದೆ ಎಂದರು.