ವೀರಾಜಪೇಟೆ: ಮಹಿಳೆ ಕುಟುಂಬದವರ ಸಹಕಾರದಿಂದ ಸ್ವಾವಲಂಭಿಯಾಗಿ ಬದುಕಲು ನಿರ್ಧರಿಸಬೇಕೆಂದು ಎರಡನೇ ಅಪರ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಹೇಳಿದರು.

ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ’ ಪ್ರಯುಕ್ತ ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಮಾ ಅವರು ಮಾತನಾಡಿದ ಅವರು, ಸಮಾಜವು ಮಹಿಳೆಯರು ಯಾವ ರೀತಿಯಲ್ಲಿಯೂ ಶೋಷಣೆಗೊಳಗಾಗದಂತೆ ನಿಗಾ ಇರಿಸಿ ಮಹಿಳೆಯರ ಸೇವೆಯನ್ನು ಗೌರವಿಸುವಂತಾಗಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್. ಜಯಪ್ರಕಾಶ್ ಮಾತನಾಡಿ, ಮಹಿಳೆಯನ್ನು ಎಲ್ಲಿ ಗೌರವಿಸುತ್ತಾರೊ ಅಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ. ಕೋನಪ್ಪ ಮಾತನಾಡಿ; ಮಹಿಳೆ ಮಾತೃ ಸ್ಥಾನದಲ್ಲಿದ್ದು ಸಮಾಜದ ಕಣ್ಣಾಗಿ ಸೇವೆಸಲ್ಲಿಸುತ್ತಿದ್ದಾಳೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಮಾತನಾಡಿ, ಎಲ್ಲರೂ ಮಹಿಳೆಯ ಸೇವೆಗೆ ಉತ್ತೇಜನ ನೀಡುವಂತಾಗಬೇಕು ಎಂದರು. ಇಲ್ಲಿನ ಸಮುಚ್ಚಯ ನ್ಯಾಯಾಲಯಗಳ ಅಪರ ಸಿವಿಲ್ ನ್ಯಾಯಾಧೀಶರಾದ ಸಿ. ಮಹಾಲಕ್ಷ್ಮಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ವಕೀಲರುಗಳು, ನ್ಯಾಯಾಧೀಶರ ಕುಟುಂಬ, ಹಾಗೂ ನ್ಯಾಯಾಲಯದ ಮಹಿಳಾ ಸಿಬ್ಬಂದಿಗೆ ವಿವಿಧ ಆಟೋಟಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಸಂಗೀತ ಕುರ್ಚಿ, ವಿಷದ ಚೆಂಡು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ನ್ಯಾಯಾಲಯದ ಸಿಬ್ಬಂದಿ ಉಷಾರಾಣಿ ಸ್ವಾಗತಿಸಿ, ಅನುರಾದ ನಿರೂಪಿಸಿ, ಬೇಬಿ ವಂದಿಸಿದರು.