ಗೋಣಿಕೊಪ್ಪ ವರದಿ, ಮಾ. 15: ಅಂಗನವಾಡಿ ನೌಕರರು ಮೂರು ತಿಂಗಳಿಗೊಮ್ಮೆ ಗೌರವ ಧನ ಪಡೆದುಕೊಳ್ಳುವ ಸ್ಥಿತಿ ಬಂದಿರುವು ದರಿಂದ ನಿರ್ವಹಣೆ ತೊಂದರೆ ಯಾಗುತ್ತಿದೆ ಎಂಬ ಅಭಿಪ್ರಾಯ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ವೀರಾಜಪೇಟೆ ತಾಲೂಕು ನೌಕರರ ಸಮಾಲೋಚನಾ ಸಭೆಯಲ್ಲಿ ವ್ಯಕ್ತವಾಯಿತು.
ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುನಂದಾ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಗೌರವ ಧನ ಬಿಡುಗಡೆ ವಿಳಂಬ, ಹೆಚ್ಚುವರಿ ಗೌರವ ಧನ ವಿತರಣೆಯಲ್ಲಿ ಆಗುತ್ತಿರುವ ಲೋಪದ ಬಗ್ಗೆ ನೌಕರರು ಗಮನ ಸೆಳೆದರು. 3 ತಿಂಗಳಿಗೊಮ್ಮೆ 1 ತಿಂಗಳ ಆಹಾರ ಸಾಮಗ್ರಿ ವಿತರಣೆಯಾಗುತ್ತಿರುವು ದರಿಂದ ಫಲಾನುಭವಿಗಳು ವಂಚಿತ ರಾಗುತ್ತಿದ್ದಾರೆ ಎಂದು ನೌಕರರು ಸಮಸ್ಯೆ ಹಂಚಿಕೊಂಡರು. ಸಮಸ್ಯೆ ಬಗ್ಗೆ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಮ್ಮ ಮೇಲೆ ಅಪವಾದ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಯಿತು.
ಜಿಲ್ಲೆಯಲ್ಲಿ ಸೋಮವಾರಪೇಟೆ, ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚುವರಿ ಗೌರವ ಧನ ಬಿಡುಗಡೆಯಾಗಿ ನವೆಂಬರ್ ತಿಂಗಳಿನಿಂದ ಸರಿಯಾಗಿ ನೌಕರರಿಗೆ ದೊರೆಯುತ್ತಿದೆ. ಆದರೆ, ನಮ್ಮ ತಾಲೂಕಿನಲ್ಲಿ ಗೌರವ ಧನ ಪಡೆಯಲಾಗುತ್ತಿಲ್ಲ ಎಂದು ನೌಕರರು ನೋವು ಹಂಚಿಕೊಂಡರು.
ಕಳೆದ ಜೂನ್ ತಿಂಗಳಿನಿಂದ ಗೌರವ ಧನ ಸರಿಯಾಗಿ ಸಿಗುತ್ತಿಲ್ಲ ಮೂರು ತಿಂಗಳಿಗೊಮ್ಮೆ ದೊರೆಯುತ್ತಿದೆ. ಕುಟುಂಬ ಸಮಸ್ಯೆ ನಡುವೆ ನಿರ್ವಹಣೆ ತೊಂದರೆ ಯಾಗುತ್ತಿದೆ ಎಂದು ನೌಕರರು ಅಳಲು ತೋಡಿಕೊಂಡರು.
ಗರ್ಭಿಣಿ, ಬಾಣಂತಿಯರಿಗೆ ನೀಡಬೇಕಾದ ಮಾತೃಪೂರ್ಣ ಯೋಜನೆಗೆ ಬೇಕಾದ ಉಪಹಾರ ತಯಾರಿಸಲು ಬೇಕಾದ ಮೊಟ್ಟೆ, ತರಕಾರಿ, ಬೇಳೆ ದೊರೆಯುತ್ತಿಲ್ಲ. 3 ರಿಂದ 6 ವರ್ಷದ ಮಕ್ಕಳಿಗೆ ನೀಡುವ ಮೊಟ್ಟೆ, ತರಕಾರಿ, ಬಾಳೆಹಣ್ಣು ಸಿಗುತ್ತಿಲ್ಲ. ಗ್ಯಾಸ್ ವಿತರಣೆಗೆ ಬೇಕಾದ ಹಣ ನೀಡುತ್ತಿಲ್ಲ. ಕಳೆದ 8 ತಿಂಗಳು ಗಳಿಂದ ನಾವು ಖರೀದಿ ಮಾಡಿರುವ ಹಣ ಶಿಶು ಅಭಿವೃದ್ಧಿ ಇಲಾಖೆ ಯಿಂದ ಬಂದಿಲ್ಲ. ಆರ್ಥಿಕ ವರ್ಷದ ಕೊನೆ ತಿಂಗಳು ಆಗಿರುವುದರಿಂದ ಒಂದಷ್ಟು ಹಣವನ್ನು ಜಮೆ ಮಾಡಲಾಗುತ್ತಿದ್ದು, ಅದು ಯಾವ ಅನುದಾನ ಎಂದು ಅರಿತುಕೊಳ್ಳಲು ಆಗುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡರು.
ಪೌಷ್ಟಿಕ ಆಹಾರ ನೀಡಲಾಗದೆ ತೊಂದರೆಯಾಗುತ್ತಿದೆ. ಗೌರವ ಧನ ವಿತರಣೆಗೆ ಕ್ರಮಕೈಗೊಳ್ಳಲು ಅಧಿಕಾರಿಗಳನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
ಈ ಸಂದರ್ಭ ಹುದಿಕೇರಿ, ಗೋಣಿಕೊಪ್ಪ, ಕುಟ್ಟಂದಿ, ಕಾಕೋಟುಪರಂಬು, ವೀರಾಜಪೇಟೆ, ಶ್ರೀಮಂಗಲ, ಕುಟ್ಟ, ಕಾನೂರು, ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ, ಸಿದ್ದಾಪುರ, ಬಾಳೆಲೆ ಹಾಗೂ ಬಿರುನಾಣಿ ವರ್ತುಲದ ನೌಕರರು ಭಾಗವಹಿಸಿದ್ದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುನಂದಾ ಉದ್ಘಾಟಿಸಿ ಮಾತನಾಡಿ, ರಾಜ್ಯದ ಯಾವ ಗ್ರಾಮದಲ್ಲಿಯೂ ಇಂತಹ ಸಮಸ್ಯೆಗಳನ್ನು ಅಂಗನ ವಾಡಿ ನೌಕರರು ಎದುರಿಸುತ್ತಿಲ್ಲ. ಗೌರವ ಧನ ಸರಿಯಾಗಿ ತಲುಪುತ್ತಿದೆ.
ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚಿಸಿ ಕ್ರಮಕ್ಕೆ ಒತ್ತಾಯಿಸಲಾಗುವುದು. ಪೌಷ್ಟಿಕ ಅಹಾರ ವಿತರಣೆಯಲ್ಲಿನ ಲೋಪ ಸರಿಪಡಿಸಿಕೊಳ್ಳಲು ಇಲಾಖೆ ಮುಂದಾಗಬೇಕು ಎಂದು ಹೇಳಿದರು. ಈ ಸಂದರ್ಭ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕೆ. ಪಿ. ಕಾವೇರಮ್ಮ, ತಾಲೂಕು ಅಧ್ಯಕ್ಷೆ ಸುಮಿತ್ರಾ, ಕಾರ್ಯದರ್ಶಿ ನಳಿನಾಕ್ಷಿ, ಕ್ಷೇಮನಿಧಿ ಅಧ್ಯಕ್ಷೆ ಸರೋಜ ಉಪಸ್ಥಿತರಿದ್ದರು.