ತಮ್ಮ ಆಶ್ರಮಕ್ಕೆ ಸೀತಾ, ಲಕ್ಷ್ಮಣ ಸಹಿತನಾಗಿ ಆಗಮಿಸಿದ ಶ್ರೀರಾಮನನ್ನು ಅಗಸ್ತ್ಯ ಮಹರ್ಷಿಗಳು ಫಲ-ಮೂಲಗಳಿಂದಲೂ, ಪುಷ್ಪಗಳಿಂದಲೂ, ಪೂಜಾಯೋಗ್ಯವಾದ ಇತರ ವಸ್ತುಗಳಿಂದಲೂ ಮನಃ ಪೂರ್ತಿಯಾಗಿ ಆರಾಧಿಸಿದರು. ಶ್ರೀರಾಮನೊಂದಿಗೆ ಮಾತನಾಡುತ್ತಾ
ಇದಂ ದಿವ್ಯಂ ಮಹಚ್ಛಾಪಂ ಹೇಮರತ್ವ ವಿಭೂಷಿತಮ್ |
ವೈಷ್ಣವಂ ಪುರುಷವ್ಯಾಘ್ರ ನಿರ್ಮಿತಂ ವಿಶ್ವಕರ್ಮಣಾ ||32||
ಅಮೋಘಃ ಸೂರ್ಯಸಂಕಾಶೋ ಬ್ರಹ್ಮದತ್ತಃ ಶರೋತ್ತಮಃ |
ದತ್ತೌ ಮಮ ಮಹೇನ್ದ್ರೇಣ ಥೂಣೀ ಚಾಕ್ಷಯಸಾಯಕೌ ||33||
ಸಂಪೂರ್ಣ ನಿಶಿತೈರ್ಬಾಣೈಜ್ರ್ವಲದ್ಭಿರಿನ ಪಾವಕೈಃ|
ಮಹಾರಜತಕೋಶೋಯಮ ಸಿಹೇಮವಿಭೂಷಿತಃ ||34||
ಅನೇನ ಧನುಷಾ ರಾಮ ಹತ್ವಾ ಸಂಖ್ಯೇ ಮಹಾಸುರಾನ್ |
ಅಜಹಾರ ಶ್ರೀಯಂ ದೀಪ್ತಾಂ ಪುರಾ ವಿಷ್ಣು ರ್ದಿವೌಕಸಾಮ್ ||35||
‘‘ಪುರುಷಶ್ರೇಷ್ಠನೇ ಸುವರ್ಣದಿಂದಲೂ ವಜ್ರ, ವೈಢೂರ್ಯಾದಿ ಗಳಿಂದಲೂ ಸಮಲಂಕೃತವಾಗಿರುವ ದಿವ್ಯವಾದ ಈ ವೈಷ್ಣವ ಮಹಾ ಧನುಸ್ಸು ದೇವಶಿಲ್ಪಿಯಾದ ವಿಶ್ವಕರ್ಮನಿಂದಲೇ ನಿರ್ಮಿತವಾದುದು, ಸೂರ್ಯ ಸದೃಶÀವಾದ ಅಮೋಘವಾದ ಮತ್ತು ಶ್ರೇಷ್ಠವಾದ ಈ ಬಾಣ ವನ್ನು ಬ್ರಹ್ಮನೇ ನನಗೆ ಅನುಗ್ರಹಿಸಿಕೊಟ್ಟನು. ಅಕ್ಷಯವಾದ ಬಾಣಗಳಿಂದ ತುಂಬಿರುವ ಈ ಎರಡು ಬತ್ತಳಿಕೆಗಳನ್ನೂ ಇಂದ್ರನು ಕೊಟ್ಟಿರುತ್ತಾನೆ. ಪ್ರಜ್ವಲಿಸುತ್ತಿರುವ ಅಗ್ನಿಗಳಂತೆಯೇ ಇರುವ ನಿಶಿತವಾದ ಬಾಣಗಳಿಂದ ಈ ಬತ್ತಳಿಕೆಗಳು ಪೂರ್ಣವಾಗಿದೆ. ಚಿನ್ನದ ಒರೆಯನ್ನು ಹೊಂದಿರುವ ಈ ಕತ್ತಿಯು ಚಿನ್ನದ ಹಿಡಿಯಿಂದ ಸಮಲಂಕೃತವಾಗಿದೆ. ಈ ವೈಷ್ಣವ ಧನುಸ್ಸಿನಿಂದಲೇ ಹಿಂದೆ ಮಹಾವಿಷ್ಣುವು ಯುದ್ಧದಲ್ಲಿ ಮಹಾಸುರರೆಲ್ಲ ರನ್ನೂ ಸಂಹರಿಸಿ ಪರಮೋಜ್ಞ್ವಲವಾದ ಅಸುರ ಸಂಪತ್ತನ್ನು ತೆಗೆದುಕೊಂಡು ದೇವತೆಗಳಿಗೆ ಕೊಟ್ಟನು.
ತದ್ಧನುಸ್ತೌ ಚ ಥೂಣೀರೌ ಶರಂ ಖಡ್ಗಂ ಚ ಮಾನದ |
ಜಯಾಯ ಪ್ರತಿಗೃಹ್ಣೀಸ್ವ ವಜ್ರಂ ವಜ್ರಧರೋ ಯಥಾ ||36||
ಶ್ರೀರಾಮ, ಈ ವೈಷ್ಣವಧನುಸ್ಸನ್ನೂ, ಅಕ್ಷಯವಾದ ಬತ್ತಳಿಕೆಗಳನ್ನೂ, ಶ್ರೇಷ್ಠವಾದ ಬಾಣವನ್ನೂ, ಖಡ್ಗವನ್ನೂ, ಯುದ್ಧದಲ್ಲಿ ಜಯಗಳಿಸುವ ಸಲುವಾಗಿ ಇಂದ್ರನು ವಜ್ರಾಯುಧವನ್ನು ಸ್ವೀಕರಿಸಿದಂತೆ ಸ್ವೀಕರಿಸು’’
ಮಹಾತೇಜಸ್ವಿಗಳಾದ ಅಗಸ್ತ್ಯರು ಹೀಗೆ ಹೇಳಿ ತಮ್ಮಲ್ಲಿದ್ದ ಶ್ರೇಷ್ಠವಾದ ಆಯುಧಗಳೆಲ್ಲವನ್ನೂ ಶ್ರೀರಾಮನಿಗೆ ಸಮರ್ಪಿಸಿ ಪುನಃ ಹೇಳ ತೊಡಗಿದರು.
ರಾಮಪ್ರೀತೋಸ್ಮಿ ಭದ್ರಂ ತೇ ಪರಿತುಷ್ಟೋಸ್ಮಿ ಲಕ್ಷ್ಮಣ |
ಅಭಿವಾದಯಿತು ಯನ್ಮಾಂ ಪ್ರಾಪ್ತೌ ಸ್ಥಃ ಸಹ ಸೀತಯಾ ||1|||
‘‘ರಾಮ ! ನನಗೆ ಅಭಿವಾದನಮಾಡಿ ನನ್ನ ಆಶೀರ್ವಾದಗಳನ್ನು ಪಡೆಯುವ ಸಲುವಾಗಿ ನೀವು ಸೀತೆಯೊಡನೆ ಇಲ್ಲಿಗೆ ಆಗಮಿಸಿರುವದು ನನಗೆ ತುಂಬಾ ಸಂತೋಷವಾಗಿದೆ. ನಿನಗೆ ಮಂಗಳವಾಗಲಿ, ಲಕ್ಷ್ಮಣ ನಿನ್ನ ಭ್ರಾತೃಸೇವಾಪರಾಯಣತೆಯನ್ನು ಕಂಡು ಸಂತುಷ್ಟನಾಗಿದ್ದೇನೆ.
ರಾಮ-ಲಕ್ಷ್ಮಣರೇ, ಇಷ್ಟು ದೂರ ನಡೆದು ಬಂದ ಅಧಿಕ ಶ್ರಮದಿಂದಾಗಿ ನಿಮಗೆ ಹೆಚ್ಚು ಆಯಾಸವಾಗಿದೆ. ಇದೇ ಕಾರಣದಿಂದಾಗಿ ಜನಕನ ಮಗಳಾದ ಸೀತಾದೇವಿಯೂ ವ್ಯಾಕುಲಗೊಂಡಿದ್ದಾಳೆ. ಸುಕುಮಾರಿಯಾದ ಸೀತಾದೇವಿಯು ಹಿಂದೆ ಯಾವಾಗಲೂ ಇಂತಹ ದುಃಖಗಳಿಂದ ಪೀಡಿತಳಾಗಿರಲಿಲ್ಲ. ಗಂಡನ ಮೇಲಿನ ಪ್ರೀತಿಯಿಂದ ಪ್ರೇರಿತಳಾಗಿ ಇವಳು ಈ ದಟ್ಟಾರಣ್ಯಕ್ಕೆ ಬಂದಿರುವಳು. ರಾಘವ, ಸೀತಾ ದೇವಿಯು ಸಂತೋಷವಾಗಿರುವಂತೆ ಅವಳಿಗೆ ಬೇಕಾದುದನ್ನು ನೀನು ಮಾಡಿಕೊಡು. ಅರಣ್ಯಕ್ಕೂ ನಿನ್ನನ್ನು ಅನುಸರಿಸಿ ಬಂದಿರುವ ಇವಳು ನಿಶ್ಚಯವಾಗಿಯೂ ಬಹುದುಷ್ಕರವಾದ ಕಾರ್ಯವನ್ನೇ ಮಾಡಿರುವಳು, ಸೃಷ್ಟಿಯು ಆರಂಭವಾದಾಗಿ ನಿಂದಲೂ ಸ್ತ್ರೀಯರ ಸ್ವಭಾವವು ಸಾಮಾನ್ಯವಾಗಿ ಹೀಗಿರುತ್ತದೆ.
ಸಮಸ್ತ ಮನುರಜ್ಯನ್ತಿ ವಿಷಮಸ್ಥಂ ತ್ಯಜನ್ತಿ ಚ |
ಶತಹ್ರದಾನಾಂ ಲೋಲತ್ವಂ ಶಸ್ತ್ರಾಣಾಂ ತೀಕ್ಷ್ಣ ತಾಂ ತಥಾ |
ಗರುಡಾನಿಲಯಫಃ ಶೈಘ್ರ್ಯ ಮನುಗಚ್ಛನ್ತಿ ಯೋಷಿತಃ ||6||
ಧನ-ಧಾನ್ಯಗಳ ಸಮೃದ್ಧಿ ಯಿಂದ ಸಮಸ್ಥಿತಿಯಲ್ಲಿರುವವನನ್ನು ಸ್ತ್ರೀಯರು ಸಂತೋಷಪಡಿಸುತ್ತಾರೆ. ಕಷ್ಟದಲ್ಲಿರುವ ದರಿದ್ರನನ್ನು ಪರಿ ತ್ಯಜಿಸುತ್ತಾರೆ. ಸ್ತ್ರೀಯರು ಮಿಂಚಿನ ಚಾಪಲ್ಯವನ್ನೂ, ಶಸ್ತ್ರಗಳ ತೀಕ್ಷ್ಣತೆ ಯನ್ನೂ, ಗರುಡ-ವಾಯುಗಳ ವೇಗವನ್ನೂ ಹೊಂದಿರುತ್ತಾರೆ. ನಿನ್ನ ಭಾರ್ಯೆಯಾದ ಈ ಸೀತಾದೇವಿ ಯಾದರೋ ಈ ಎಲ್ಲಾ ದೋಷ ಗಳಿಂದಲೂ ಮುಕ್ತಳಾಗಿದ್ದಾಳೆ. ನಾನು ಹೇಳಿದ ಯಾವ ದೋಷವೂ ಇವಳಲ್ಲಿ ಇಲ್ಲವಾಗಿದೆ. ಆದುದರಿಂದಲೇ ಶ್ಲಾಘ್ಯಳು, ಮಹಾಪತಿವ್ರತೆಯಾದ ಅರುಂಧತಿ ದೇವಿಯಂತೆ ಇವಳಾದರೂ ಪತಿವ್ರತೆಯರಲ್ಲಿ ಅಗ್ರಗಣ್ಯಳೆಂದು ಪರಿಗಣಿಸಲ್ಪಡತಕ್ಕವಳೂ ಆಗಿದ್ದಾಳೆ. ಶ್ರೀರಾಮನೇ, ವೈದೇಹಿಯೊಡನೆಯೂ, ತಮ್ಮನಾದ ಲಕ್ಷ್ಮಣನೊಡನೆಯೂ ಈ ಆಶ್ರಮದಲ್ಲಿ ವಾಸಮಾಡಲು ಬಂದಿರುವದರಿಂದ ಈ ಆಶ್ರಮಭೂಮಿಯನ್ನೇ ನೀವು ನಿಮ್ಮ ಸಾನ್ನಿಧ್ಯದಿಂದ ಅಲಂಕರಿಸಿದಂತಾಗಿದೆ.
ಅಗಸ್ತ್ಯ ಮಹಾಮುನಿಗಳು ಹೀಗೆ ಹೇಳಲು ರಾಮನು ವಿನೀತನಾಗಿ ಕೈಮುಗಿದುಕೊಂಡು ಅಗ್ನಿಯಂತೆ ಪ್ರದೀಪ್ತನಾದ ತೇಜಸ್ಸಿನಿಂದ ಕೂಡಿದ್ದ ಅಗಸ್ತ್ಯರಿಗೆ ಹೇಳಿದನು.
‘‘ಪೂಜ್ಯರೇ, ಮುನಿಶ್ರೇಷ್ಠರಾದ ಮತ್ತು ನಮ್ಮ ಗುರುಗಳಾದ ನೀವು ಭ್ರಾತೃ-ಭಾರ್ಯಾಸಮೇತನಾಗಿ ಬಂದಿರುವ ನನ್ನ ಗುಣಗಳಿಂದ ಸಂತುಷ್ಟ ರಾಗಿಸುವಿರಾದರೆ ನಿಶ್ಚಯವಾಗಿಯೂ ನಾನೇ ಧನ್ಯನು. ನಿಮ್ಮ ಉತ್ತಮ ನುಡಿಗಳಿದಾಗಿ ಅನುಗೃಹೀತನೂ ಆಗಿದ್ದೇನೆ. ಒಂದು ವಿಷಯವನ್ನು ತಮ್ಮಲ್ಲಿ ಪ್ರಾರ್ಥಿಸುವದಿದೆ. ನೀರಿನಿಂದ ಕೂಡಿಯೂ, ದಟ್ಟವಾದ ಕಾಡಿನಿಂದ ಕೂಡಿಯೂ ಇರುವ ಸ್ಥಳವಾಗಿರಬೇಕು. ಅಂತಹ ಪ್ರದೇಶವು ಎಲ್ಲಿದೆಯೆಂಬದನ್ನು ದಯಮಾಡಿ ಹೇಳಿರಿ, ಅಲ್ಲಿ ನಾನೊಂದು ಆಶ್ರಮವನ್ನು ಕಲ್ಪಿಸಿಕೊಂಡು ಸ್ವಕರ್ಮನಿರತನಾಗಿ ಸುಖವಾಗಿರುತ್ತೇನೆ’’
ಮಹರ್ಷಿಗಳಾದ ಅಗಸ್ತ್ಯರು ಶ್ರೀರಾಮನ ಆ ಮಾತನ್ನು ಕೇಳಿ ಮುಹೂರ್ತಕಾಲ ಯೋಚಿಸುತ್ತಿದ್ದು ಆನಂತರ ಶುಭಯುಕ್ತವಾದ ಈ ಮಾತನ್ನು ಹೇಳಿದರು.
‘ರಾಮ, ಇಲ್ಲಿಗೆ ಎರಡು ಯೋಜನಗಳ ದೂರದಲ್ಲಿ ಸಂಪದ್ಯುಕ್ತವಾದ ‘ಪಂಚವಟಿ’ ಎಂದು ವಿಖ್ಯಾತವಾಗಿರುವ ಕಾಡಿನ ಪ್ರದೇಶವಿದೆ. ಆ ಪ್ರದೇಶವು ಕಂದ ಮೂಲ-ಫಲಗಳಿಂದಲೂ ನೀರಿನಿಂದಲೂ ಸಮೃದ್ಧವಾಗಿದೆ. ಬಹುಸಂಖ್ಯೆಯ ಮೃಗಗಳಿಂದ ಸಮಾಮೃತವಾಗಿದೆ. ಆ ಪ್ರದೇಶಕ್ಕೆ ಸೀತಾ ಲಕ್ಷ್ಮಣ ರೊಡನೆ ಹೋಗಿ ಅಲ್ಲಿ ಆಶ್ರಮ ವೊಂದನ್ನು ಕಲ್ಪಿಸಿ ಕೊಂಡು ತಂದೆಯ ವಾಕ್ಯವನ್ನು ಯಥಾವತ್ತಾಗಿ ಪರಿಪಾಲನೆ ಮಾಡುತ್ತಾ ಸುಖ ವಾಗಿರು. ನಿನ್ನ ತಂದೆ ದಶರಥ ನೊಡನೆ ನೀನು ಯಾವ ಪ್ರತಿಜ್ಞೆ ಯನ್ನು ಮಾಡಿರುವೆಯೋ, ಎಷ್ಟು ಕಾಲ ವನವಾಸ ಮಾಡುವದಾಗಿ ಆ ನಿನ್ನ ತಂದೆಗೆ ಭಾಷೆಯನ್ನಿತ್ತು ಬಂದಿರುವೆಯೋ ಆ ಹದಿನಾಲ್ಕು ವರ್ಷಗಳ ಅವಧಿಯಲ್ಲಿ ಹೆಚ್ಚು ಕಾಲವು ಈಗಾಗಲೇ ಕಳೆದು ಹೋಗಿದೆ. ನೀನು ನಿನ್ನ ಪ್ರತಿಜ್ಞೆ ಯನ್ನು ಪೂರೈಸಿಕೊಂಡು ರಾಜ್ಯ ದಲ್ಲಿ ಸುಸ್ಥಿರವಾಗಿ ನಿಲ್ಲುವೆ. ಸುಖವಾಗಿ ರಾಜ್ಯಭಾರಮಾಡಿಕೊಂಡಿರುವೆ. ಇದರಲ್ಲಿ ಸಂಶಯವೇ ಇಲ್ಲ. ನಿನ್ನ ತಂದೆಯಾದ ದಶರಥರಾಜನು ನಿಶ್ಚಯವಾಗಿಯೂ ಧನ್ಯನು, ಯಯಾತಿಯನ್ನು ಅಷ್ಟಕನೇ ಮೊದಲಾದ ಅವನ ಮೊಮ್ಮಕ್ಕಳು, ಉದ್ಧರಿಸಿದಂತೆ ಜ್ಯೇಷ್ಠ ಪುತ್ರನಾದ ನೀನು ತಂದೆಯನ್ನು ಮಿಥ್ಯಾಪ್ರತಿಜ್ಞೆ ಯಿಂದ ಒದಗಬಹುದಾಗಿದ್ದ ಮಹಾಪಾಪದಿಂದ ಪಾರುಮಾಡಿರುವೆ, ಈ ಎಲ್ಲಾ ವೃತ್ತಾಂತಗಳನ್ನೂ ನಾನು ತಪಸ್ಸಿನ ಪ್ರಭಾವದಿಂದಲೂ ಮತ್ತು ದಶರಥನಲ್ಲಿ ನನಗಿದ್ದ ಸ್ನೇಹದ ಕಾರಣದಿಂದಲೂ ಈ ಹಿಂದೆಯೇ ತಿಳಿದುಕೊಂಡಿದ್ದೆನು, ನಿನ್ನ ಆಂತರಿಕ ಅಭಿಪ್ರಾಯವನ್ನೂ ನಾನು ನನ್ನ ತಪಃಪ್ರಭಾವದಿಂದ ತಿಳಿದುಕೊಂಡೆನು, ನನ್ನೊಡನೆ ಈ ತಪೋವನದಲ್ಲಿ ವಾಸಮಾಡಲು ನಿಶ್ಚಯಿಸಿ ನೀನಿಲ್ಲಿಗೆ ಬಂದಿರುವೆ. ಆದರೆ ನೀನಿಲ್ಲಿದ್ದರೆ ಎಲ್ಲರಿಗೂ ನಿನ್ನ ನಿವಾಸ ಸ್ಥಳವು ತಿಳಿಯುತ್ತದೆ. ಆದುದರಿಂದಲೇ ನಾನು ನಿನಗೆ ಪಂಚವಟಿಗೆ ಹೋಗಲು ಹೇಳುತ್ತಿರುವೆನು, ಪಂಚವಟಿಯ ವನಪ್ರದೇಶವೂ ರಮ್ಯವಾಗಿದ್ದು ಸೀತೆಯೂ ಅಲ್ಲಿ ಸಂತೋಷದಿಂದಿರುತ್ತಾಳೆ, ಆ ವನಪ್ರದೇಶವು ಶ್ಲಾಘನೀಯವಾಗಿದೆ. ಇಲ್ಲಿಗೆ ಹೆಚ್ಚು ದೂರವೂ ಇಲ್ಲ. ಗೋದಾವರಿ ನದಿಯ ತೀರದಲ್ಲಿದೆ, ಅಂತಹ ರಮ್ಯವಾದ ಪರಿಸರದಲ್ಲಿ ಆಕೆ ಆನಂದ ಪಡುತ್ತಾಳೆ. ಅಲ್ಲದೆ, ಪ್ರದೇಶವು ಕಂದ-ಮೂಲ-ಫಲಗಳಿಂದ ಸಮೃದ್ಧವಾಗಿದೆ. ನಾನಾವಿಧವಾದ ಪಕ್ಷಿಗಳ ಸಮೂಹಗಳಿಂದ ಸಮಾಮೃತವಾಗಿದೆ. ಜನಜಂಗುಳಿಯಿಂದ ವೊಹೀನ ವಾಗಿದೆ. ಪುಣ್ಯತಮವೂ ಮತ್ತು ಬಹುರಮ್ಯವೂ ಆಗಿದೆ. ನೀನು ಸಮಾಚಾರನಿರತನಾಗಿರುವೆ, ಪಂಚವಟಿಯಲ್ಲಿ ವಾಸಮಾಡುತ್ತಾ ಇಲ್ಲಿರುವ ತಪಸ್ವಿಗಳನ್ನು ರಾಕ್ಷಸರ ಉಪಟಳದಿಂದ ರಕ್ಷಿಸಬಹುದಾಗಿದೆ.
ರಾಮ, ಅದೋ ಹಿಪ್ಪೆಮರಗಳ ಕಾಡು ಅಲ್ಲಿ ಕಾಣುತ್ತಿದೆಯಲ್ಲವೆ ? ಆ ಕಾಡಿನಿಂದ ಉತ್ತರಕ್ಕೆ ಪ್ರಯಾಣಮಾಡಬೇಕು, ಆ ಮಾರ್ಗವನ್ನು ಹಿಡಿದು ಹೋದರೆ ಮುಂದೆ ಒಂದು ಆಲದ ಮರವು ಸಿಕ್ಕುತ್ತದೆ. ಅದರ ಬಳಿಗೆ ಹೋದರೆ ಮರಗಳಿಲ್ಲದ ದಿಬ್ಬದ ಪ್ರದೇಶವು ಸಿಕ್ಕುತ್ತದೆ. ಆ ದಿಬ್ಬವನ್ನು ಹತ್ತಿ ಹೋದರೆ, ಒಂದು ಪರ್ವತವು ಕಾಣಿಸುತ್ತದೆ ಆ ಪರ್ವತಕ್ಕೆ ಹತ್ತಿರದಲ್ಲಿಯೇ ‘ಪಂಚವಟಿ’ ಎಂದೇ ಪ್ರಸಿದ್ಧವಾಗಿರುವ ವರ್ಷಪೂರ್ತಿಯಾಗಿ ಹೂಗಳಿಂದ ಕಂಗೊಳಿಸುವ ರಮ್ಯವಾದ ಅರಣ್ಯವಿದೆ. ಅಲ್ಲಿಗೆ ಈಗಲೇ ನೀನು ಪ್ರಯಾಣಮಾಡು.’’
ಅಗಸ್ತ್ಯರು ಹೀಗೆ ಹೇಳಲು ಶ್ರೀರಾಮನು ಸೌಮಿತ್ರಿಯೊಡನೆ ಸತ್ಯವಾದಿಗಳಾದ ಅಗಸ್ತ್ಯರನ್ನು ನಮಸ್ಕಾರಾದಿಗಳಿಂದ ಸತ್ಕರಿಸಿ ಪಂಚವಟಿಗೆ ಪ್ರಯಾಣ ಮಾಡಲು ಅನುಮತಿಯನ್ನು ಪ್ರಾರ್ಥಿಸಿದನು. ಕಾಲುಮುಟ್ಟಿ ನಮಸ್ಕರಿಸಿದ ಇಬ್ಬರು ಸೋದರರನ್ನು ಅಗಸ್ತ್ಯರು ಆಶೀರ್ವದಿಸಿ ಪ್ರಯಾಣ ಮಾಡಲು ಅನುಮತಿಯಿತ್ತರು. ಬಳಿಕ ರಾಮ-ಲಕ್ಷ್ಮಣರು ಸೀತಾಸಮೇತರಾಗಿ ಅಗಸ್ತ್ಯರ ಆಶ್ರಮದಿಂದ ಸುವಿಖ್ಯಾತವಾದ ಪಂಚವಟಿಗೆ ಪ್ರಯಾಣ ಮಾಡಿದರು. ಪ್ರಯಾಣ ಮಾಡುವಾಗ ಯುದ್ಧದ ಸಮಯದಲ್ಲಿಯೂ ಭಯವೆಂಬದನ್ನೆ ಕಾಣದ ದಶರಥನ ಮಕ್ಕಳಾದ ರಾಮ-ಲಕ್ಷ್ಮಣರು, ಧನುಷ್ಪಾಣಿಗಳಾಗಿ ಬತ್ತಳಿಕೆಗಳನ್ನು ಬೆನ್ನಿಗೆ ಬಿಗಿದುಕೊಂಡು, ಏಕಾಗ್ರಚಿತ್ತರಾಗಿ ಅಗಸ್ತ್ಯ ಮಹರ್ಷಿಗಳು ಸೂಚಿಸಿದ್ದ ಮಾರ್ಗವನ್ನೇ ಹಿಡಿದು ಪಂಚವಟಿಯ ಕಡೆಗೆ ಪ್ರಯಾಣ ಹೊರಟರು.
ಆಧಾರ : ಮೂಲ ವಾಲ್ಮೀಕಿ ರಾಮಾಯಣದ ಕನ್ನಡಾನುವಾದ : ಭಾರತ ದರ್ಶನ ಪ್ರಕಾಶನದಿಂದ ಪ್ರಕಟಿತ ‘‘ವಾಲ್ಮೀಕಿ ರಾಮಾಯಣ ’’-1987ಲೋಕಕಂಟಕ ರಾವಣ ಹಾಗೂ ದುಷ್ಟ ರಾಕ್ಷಸರ ಹತ್ಯೆಗೆ ತಯಾರಿಯೆಂಬಂತೆ ಅಗಸ್ತ್ಯರು ತಮ್ಮ ದಿವ್ಯ ದೃಷ್ಟಿಯಿಂದ ಭವಿಷ್ಯವನ್ನು ಅರಿತಿರುತ್ತಾರೆ. ಲೋಕ ಕಲ್ಯಾಣದ ದೃಷ್ಟಿಯಿಂದ ಅವತಾರ ಪುರುಷÀ ಮರ್ಯಾದಾ ಪುರುಷೋತ್ತಮನಿಗೆ ತಮ್ಮಲ್ಲಿ ಈ ಸದುದ್ದೇಶಕ್ಕಾಗಿಯೇ ಸಂಗ್ರಹಿಸಿಟ್ಟಿದ ದಿವ್ಯಾಯುಧಗಳನ್ನು ಆಶೀಪೂರ್ವಕವಾಗಿ ಧಾರೆ ಎರೆಯುತ್ತಾರೆ. ಆ ಮೂಲಕ ಅಸುರ ಸಂಹಾರದ ಪ್ರಾರಂಭಿಕ ಪ್ರತಿಕ್ರಿಯೆಯ ಪ್ರಥಮ ಹೆಜ್ಜೆಯಿರಿಸಲು ಶ್ರೀರಾಮನಿಗೆ ಪ್ರೇರಕ ರಾಗುತ್ತಾರೆ. -ಲೇಖಕ.