ಮಡಿಕೇರಿ, ಮಾ. 14: ಬೆಂಗಳೂರು ಕೊಡವ ಸಮಾಜದ ಮೂಲಕ ಬೆಂಗಳೂರಿನ ಅಕ್ಕಿ ತಿಮ್ಮನಹಳ್ಳಿಯಲ್ಲಿರುವ ಫೀ.ಮಾ. ಕೆ.ಎಂ. ಕಾರ್ಯಪ್ಪ ಹಾಕಿ ಕ್ರೀಡಾಂಗಣ ದಲ್ಲಿ ಜರುಗಿದ 16ನೇ ವರ್ಷದ ಅಂತರ ಕೊಡವ ಸಂಘ ಹಾಕಿ ಪಂದ್ಯಾವಳಿ ಇತ್ತೀಚೆಗೆ ಮುಕ್ತಾಯಗೊಂಡಿತು.

ಹೊನಲು ಬೆಳಕಿನಲ್ಲಿ ನಡೆದ ಪಂದ್ಯಾವಳಿಯ ಫೈನಲ್‍ನಲ್ಲಿ ಕೊಡವ ಸ್ನೇಹಕೂಟ ತಿಪ್ಪೆಸಂದ್ರ ತಂಡ ಚಾಂಪಿಯನ್ ಹಾಗೂ ಮಡಿವಾಳದ ಲೋಪಾಮುದ್ರ ಕೊಡವ ಸಂಘ ರನ್ನರ್ಸ್ ಪ್ರಶಸ್ತಿ ಪಡೆಯಿತು. ತಿಪ್ಪೆಸಂದ್ರ ತಂಡ 2-1 ಗೋಲಿನಿಂದ ಜಯಗಳಿಸಿ ರೂ. 30 ಸಾವಿರ ನಗದು ಹಾಗೂ ಟ್ರೋಫಿ ಗಳಿಸಿದರೆ; ಲೋಪಾಮುದ್ರ ತಂಡ ರೂ. 20 ಸಾವಿರ ನಗದು ಹಾಗೂ ಟ್ರೋಫಿ ಗಳಿಸಿತ್ತು. ಸೆಮಿಫೈನಲ್ ತಲುಪಿದ್ದ ಜಯನಗರ ಕೊಡವ ಸಂಘ ಹಾಗೂ ನೆಲ್ಲಕ್ಕಿ ಕೊಡವ ಸಂಘ ರಾಮಮೂರ್ತಿ ನಗರ ತಲಾ ರೂ. 10 ಸಾವಿರ ನಗದು ಹಾಗೂ ಟ್ರೋಫಿ ಪಡೆದರೆ; ಉತ್ತಮ ತಂಡ ಪ್ರಶಸ್ತಿ ಈಸ್ಟ್ ಫೀಲ್ಡ್ ಕೊಡವ ಸಂಘ ಗಳಿಸಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಒಪಿಂಪಿಯನ್ ಚೆಪ್ಪುಡೀರ ಎಸ್. ಪೂಣಚ್ಚ ದಂಪತಿ ಹಾಗೂ ಕೊಡವ ಸಮಾಜ, ಕ್ರೀಡಾ ಸಮಿತಿ ಮತ್ತಿತರ ಸಂಘಗಳ ಪ್ರಮುಖರು ಪಾಲ್ಗೊಂಡಿದ್ದರು. ಪಂದ್ಯಾವಳಿ ನಿರ್ದೇಶಕ ಕೊಕ್ಕಲೆರ ಟಿ. ಕುಟ್ಟಪ್ಪ, ಸಮಾಜದ ಅಧ್ಯಕ್ಷ ಎಂ.ಟಿ. ನಾಣಯ್ಯ, ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ, ಮೇಕೇರಿರ ಕುಶಾಲಪ್ಪ, ಅರೆಯಡ ಪವಿನ್ ಪೊನ್ನಣ್ಣ, ಮೊಣ್ಣಂಡ ಸೀತಾ ಅಯ್ಯಣ್ಣ ಅವರುಗಳು ಪಾಲ್ಗೊಂಡಿದ್ದರು. ಈ ಸಂದರ್ಭ ವಿವಿಧ ಸಾಧಕರಾದ ಅಮ್ಮಂಡ ವಾಸು ಉತ್ತಯ್ಯ, ತೀತಮಾಡ ಅರ್ಜುನ್ ದೇವಯ್ಯ, ವಿ.ಆರ್. ರಘುನಾಥ್, ಬೊಳ್ಳೆಪಂಡ ಜೆ. ಕಾರ್ಯಪ್ಪ, ಕೂತಂಡ ಪೂಣಚ್ಚ, ಬಾಳೆಯಡ ಸಿ. ಪೂಣಚ್ಚ, ಚೆಪ್ಪುಡಿರ ಸವಿತಾ ಪೂಣಚ್ಚ, ಮತ್ತಿತರರನ್ನು ಗೌರವಿಸಲಾಯಿತು.

ಫೀ.ಮಾ. ಕಾರ್ಯಪ್ಪ ಹಾಕಿ

ಬೆಂಗಳೂರು ಸಮಾಜ ಹಾಗೂ ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ಮೂಲಕ ವರ್ಷಂಪ್ರತಿ ಜರುಗುವ ಫೀ.ಮಾ. ಕಾರ್ಯಪ್ಪ ಟ್ರೋಫಿ ಹಾಕಿಯ ಫೈನಲ್ ಪಂದ್ಯವೂ ಈ ಸಂದರ್ಭ ನಡೆಯಿತು. ಇದರಲ್ಲಿ ಬೆಂಗಳೂರು ಸದರನ್ ಕಮಾಂಡ್ ಟೀಂ, ಸಾಯಿ ತಂಡವನ್ನು 2-1 ಗೋಲಿನಿಂದ ಮಣಿಸಿತು.

ಈ ಪಂದ್ಯಾವಳಿಗೆ ಮುಖ್ಯ ಅತಿಥಿಗಳಾಗಿ ಇಂಡಿಯನ್ ಏರ್‍ಫೋರ್ಸ್‍ನ ಗ್ರೂಫ್ ಕ್ಯಾಪ್ಟನ್ ಮಂಡೇಟಿರ ಮಾದಪ್ಪ ತಿಮ್ಮಯ್ಯ ಪಾಲ್ಗೊಂಡಿದ್ದರು.

ಬೊಮ್ಮಂಡ ತಿಮ್ಮಯ್ಯ, ಕರ್ನಂಡ ರಾಹುಲ್ ಕಾರ್ಯಪ್ಪ, ಬಾಳೆಕುಟ್ಟಿರ ನಂಜಪ್ಪ, ಕ್ರೀಡಾ ಕ್ಲಬ್ ಹಾಗೂ ಸಮಾಜದ ಪದಾಧಿಕಾರಿಗಳು, ಕೆಎಸ್‍ಸಿಎ ಪದಾಧಿಕಾರಿಗಳು ಪಾಲ್ಗೊಂಡಿದ್ದರು.