ಮಡಿಕೇರಿ, ಮಾ. 14: ನಗರದ ಅಧಿವೇವತೆ ಶ್ರೀ ಕರವಲೆ ಭಗವತಿ ಮಹಿಷಮರ್ಧಿನಿ ಸನ್ನಿಧಿಯಲ್ಲಿ ಇಂದು ವಾರ್ಷಿಕ ಜಾತ್ರೆಯ ಪೂರ್ವಭಾವಿಯಾಗಿ; ನಾಡಿಗೆ ಒಳಿತಿಗಾಗಿ ಪ್ರಾರ್ಥನೆ ಮೂಲಕ ವಿಶೇಷವಾಗಿ ಚಂಡಿಕಾ ಹವನ ನಡೆಸಲಾಯಿತು. ದೇವಾಲಯದ ತಕ್ಕಮುಖ್ಯಸ್ಥರು, ಗ್ರಾಮಸ್ಥರು, ಸದ್ಭಕ್ತರು, ದೈವಿಕ ಕೈಂಕರ್ಯಗಳಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ, ಅನ್ನದಾನ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು.
ಬಿಳಿಗೇರಿಯ ಹುಲಿತಾಳ ಉದಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಚಂಡಿಕಾ ಹವನ ನೆರವೇರಿಸಲಾಯಿತು. ಅನಂತರ ಆಶೀರ್ವಚನ, ಲೋಕಕಲ್ಯಾಣ ಪ್ರಾರ್ಥನೆಯೊಂದಿಗೆ ದೇವಿಗೆ ಅಲಂಕಾರ ಸಹಿತ ಮಹಾಪೂಜೆ ನೆರವೇರಿತು. ಗ್ರಾಮದ ಹಿರಿಯರು ಮತ್ತು ತಕ್ಕ ಮುಖ್ಯಸ್ಥರು ಉಪಸ್ಥಿತರಿದ್ದರು; ವಾರ್ಷಿಕ ಉತ್ಸವ ಕುರಿತು ಮಾಹಿತಿ ನೀಡಿದರು.
ತಾ. 14 ರಂದು ಸಂಜೆ ಕೊಡಿಮರ ನಿಲ್ಲಿಸುವದು, ತಾ. 15 ರಂದು ಬೆಳಗಿನ ಜಾವ ಬೊಳಕಾಟ್, ತಾ. 16 ರಂದು ವಾರ್ಷಿಕ ದೊಡ್ಡ ಹಬ್ಬ ನೆರವೇರಲಿದ್ದು; ಎತ್ತುಪೋರಾಟ, ದರ್ಶನ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು, ದೇವರ ನೃತ್ಯ, ಹರಕೆ ಕಾಣಿಕೆ ಸಲ್ಲಿಸುವದು ಸೇರಿದಂತೆ ಇನ್ನಿತರ ಸೇವೆಗಳು ಜರುಗಲಿವೆ ಎಂದು ತಿಳಿಸಿದರು. ತಾ. 17 ರಂದು ಉಪದೇವರುಗಳಿಗೆ ಪೂಜಾದಿ ನೆರವೇರುವದರೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಮಾಹಿತಿ ನೀಡಿದರು.