ಸಿದ್ದಾಪುರ, ಮಾ. 13 : ಸಹೋದರಿಯ ಮಗಳ ನಿಶ್ಚಿತಾರ್ಥಕ್ಕೆಂದು ಬೆಂಗಳೂರಿನಿಂದ ಕೊಡಗಿಗೆ ಆಗಮಿಸುತ್ತಿದ್ದ ವ್ಯಕ್ತಿಗೆ ಆಘಾತ ಕಾದಿತ್ತು. ಮಾರ್ಗ ಮಧ್ಯೆ ನಡೆದ ಅಪಘಾತದಲ್ಲಿ ತಾಯಿ ಹಾಗೂ ಪತ್ನಿಯನ್ನು ಕಳೆದುಕೊಂಡದಲ್ಲದೆ ತನ್ನ ಎರಡೂ ಕಾಲುಗಳು ತುಂಡರಿಸಲ್ಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಎಲ್ಲವೂ ನಿಶ್ಚಯಿಸಿದಂತೆ ಆಗಿದ್ದರೆ ನಿವೃತ್ತ ಎಎಸ್‍ಐ ಮೂರ್ನಾಡಿನ ಬೈದೋಳಿ ಲಕ್ಷ್ಮಣ ಹಾಗೂ ಕುಸುಮ ದಂಪತಿಗಳ ಪುತ್ರಿಯ ನಿಶ್ಚಿತಾರ್ಥ ತಾ.15 ರಂದು ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್‍ನಲ್ಲಿ ಸಂಭ್ರಮದಿಂದ ನಡೆಯುವುದರಲ್ಲಿತ್ತು. ಆದರೆ ಶುಭ ಕಾರ್ಯದ ಉತ್ಸಾಹದಲ್ಲಿ ಮುಳುಗಿದ್ದ ಕುಟುಂಬಕ್ಕೆ ಇಂದು ಬಂದ ಅಶುಭ ವಾರ್ತೆ ಆಘಾತವನ್ನುಂಟು ಮಾಡಿತ್ತು. ಸಹೋದರಿ ಕುಸುಮಾ ಅವರ ಪುತ್ರಿಯ ನಿಶ್ಚಿತಾರ್ಥಕ್ಕೆಂದು ಇಂದು ಬೆಳಿಗ್ಗೆ ಎಂಟು ಗಂಟೆಗೆ ಬೆಂಗಳೂರಿನಿಂದ ಕೊಡಗಿಗೆ ಆಗಮಿಸುತ್ತಿದ್ದ ಇಟ್ಟ್ಟಣಿಕೆ (ಪೂಂಡನ) ರಾಮಕೃಷ್ಣ (ಕುಮಾರ) ಅವರು ಕುಟುಂಬ ಸಹಿತ ಪ್ರಯಾಣಿಸುತ್ತಿದ್ದ ಇಕೊ ವಾಹನ ಅಪಘಾತಕ್ಕೀಡಾಯಿತು. ನೆಲಮಂಗಲದ ಸಮೀಪ ಸ್ವಿಫ್ಟ್ ಡಿಸೈರ್ ಕಾರೊಂದು ಡಿವೈಡರ್‍ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದು ಇಕೊ ವಾಹನಕ್ಕೆ ಅಪ್ಪಳಿಸಿದೆ. ಅಪಘಾತ ನಡೆದ ತೀವ್ರತೆಗೆ ಇಕೊ ವಾಹನ ನಜ್ಜುಗುಜ್ಜಾಗಿ ವಾಹನದಲ್ಲಿದ್ದ ರಾಮಕೃಷ್ಣ ಅವರ ತಾಯಿ ದಿ. ಇಟ್ಟಣಿಕೆ ಚಂಗಪ್ಪ ಅವರ ಪತ್ನಿ ಕಾವೇರಮ್ಮ ಚಂಗಪ್ಪ (89) (ಮೊದಲ ಪುಟದಿಂದ) ಹಾಗೂ ಪತ್ನಿ ರಶ್ಮಿ (ಮಂಜು-57) ಸ್ಥಳದಲ್ಲೇ ಮೃತಪಟ್ಟರು. ಅದೃಷ್ಟವಶಾತ್ ಪುತ್ರಿ ನಿಶ್ಚಿತಾ (20) ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾಳೆ. ರಾಮಕೃಷ್ಣ ಅವರ ಎರಡು ಕಾಲುಗಳು ಮುರಿದಿದ್ದು, ಇಕೊ ಚಾಲಕ ನಾಗರಾಜನ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನು ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮರಗೋಡು ನಿವಾಸಿ, ಬೆಂಗಳೂರು ಹೆಚ್‍ಎಂಟಿ ಸಂಸ್ಥೆಯ ನಿವೃತ್ತ ಸಿಬ್ಬಂದಿ ರಾಮಕೃಷ್ಣ ಅವರು ಬೆಂಗಳೂರಿನಲ್ಲೇ ವ್ಯಾಪಾರ ವೃತ್ತಿ ನಿರ್ವಹಿಸುತ್ತಿದ್ದರು. ಅಲ್ಲೇ ವಾಸವಿದ್ದ ಅವರೊಂದಿಗೆ ತಾಯಿ ಕೂಡ ಇದ್ದರು. ಭಾನುವಾರ ನಿಶ್ಚಾರ್ಥ ಇದೆ ಎನ್ನುವ ಕಾರಣಕ್ಕಾಗಿ ತಮ್ಮ ಸ್ವಂತ ವಾಹನಕ್ಕೆ ಚಾಲಕನನ್ನು ಗೊತ್ತು ಮಾಡಿ ಪ್ರಯಾಣ ಬೆಳೆಸಿದ್ದರು. ಆದರೆ ವಿಧಯಾಟ ಬೇರೆಯೇ ಆಗಿತ್ತು. ಇದೀಗ ಮರಗೋಡು ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. - ಅಂಚೆಮನೆ ಸುಧಿ