ಮಡಿಕೇರಿ, ಮಾ. 14: ಸಾಮಾನ್ಯವಾಗಿ ದ್ವಿತೀಯ ಶನಿವಾರ ಬಂದೊಡನೆ ಜನ ಸಂದಣಿಯಿಂದ ಗಿಜಿಗುಡುತ್ತಿದ್ದ ಕೊಡಗು ಜಿಲ್ಲೆಯಲ್ಲಿ; ಜಾಗತಿಕ ಮಟ್ಟದ ಕೊರೊನಾ ಮುನ್ನೆಚ್ಚರಿಕೆ ಕ್ರಮದಿಂದಾಗಿ ಜಲಪಾತಗಳ ಸಹಿತ ಪ್ರವಾಸಿ ತಾಣಗಳು ಪ್ರವಾಸಿಗಳಿಲ್ಲದೆ ಬಿಕೋ ಎನ್ನುವಂತಾಗಿದೆ.ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆ, ರಾಜಾಸೀಟ್, ಗದ್ದುಗೆ ಸಹಿತ ಪ್ರಮುಖ ತಾಣಗಳೊಂದಿಗೆ; ಪ್ರಮುಖ ರೆಸಾರ್ಟ್‍ಗಳು, ಹೋಂಸ್ಟೇಗಳು, ಹೊಟೇಲ್ ಉದ್ಯಮ, ವಸತಿಗೃಹಗಳ ಸಹಿತ ವ್ಯಾಪಾರ ಮಳಿಗೆಗಳು, ಹಣ್ಣು - ಹಂಪಲು ಮತ್ತು ಮಾಂಸ ವ್ಯಾಪಾರಿಗಳು ಕೂಡ ದೈನಂದಿನ ವಹಿವಾಟು ಇಲ್ಲದೆ ಆತಂಕದಡಿ ದಿನಕಳೆಯುತ್ತಿರುವದು ಕಂಡು ಬಂತು.ದ್ವಿತೀಯ ಶನಿವಾರದ ಸರಕಾರಿ ರಜೆಯಿಂದಾಗಿ ಬ್ಯಾಂಕ್ ಇತ್ಯಾದಿ ಉದ್ದಿಮೆಗಳು ಬಾಗಿಲು ಮುಚ್ಚಿಕೊಂಡರೆ; ಸರಕಾರದಿಂದ ರಜೆ ಘೋಷಣೆಯಿಂದಾಗಿ ವಿದ್ಯಾರ್ಥಿ ಸಮೂಹ ಕೂಡ ಕಾಣ ಬರಲಿಲ್ಲ. ಪರಿಣಾಮವೆಂಬಂತೆ ಸರಕಾರಿ ಹಾಗೂ ಖಾಸಗಿ ಬಸ್‍ಗಳ ಓಡಾಟವಿದ್ದರೂ ಪ್ರಯಾಣಿಕರು ಮಾತ್ರ ಬೆರಳೆಣಿಕೆ ಮಂದಿ ಎದುರಾದರು. ಬಹುತೇಕ ಮಳಿಗೆಗಳ ಮಾಲೀಕ - ಸಿಬ್ಬಂದಿ ಹೊರತು ಗ್ರಾಹಕರ ಸುಳಿವು ಎದುರಾಗಿಲ್ಲವೆಂದು ಕಳವಳವನ್ನು ಅನೇಕರು ‘ಶಕ್ತಿ’ಯೊಂದಿಗೆ ತೋಡಿಕೊಂಡರು.

(ಮೊದಲ ಪುಟದಿಂದ)ಯಾತ್ರಾರ್ಥಿಗಳಿಗೂ ಭೀತಿ : ಕೊಡಗಿನ ಪ್ರಮುಖ ತೀರ್ಥ ಕ್ಷೇತ್ರ ತಲಕಾವೇರಿ ಹಾಗೂ ಭಾಗಮಂಡಲ ಸೇರಿದಂತೆ ಇತರ ಧಾರ್ಮಿಕ ಸ್ಥಳಗಳಲ್ಲಿ ಕೂಡ ಕೊರೊನಾ ಭೀತಿಯಿಂದ ಯಾತ್ರಾರ್ಥಿಗಳ ಆಗಮನ ಕ್ಷೀಣ ಗೊಂಡಿತ್ತು.

ಹಗಲು ವೇಳೆ ಅಬ್ಬಿಫಾಲ್ಸ್, ರಾಜಾಸೀಟ್‍ನಲ್ಲಿ ಸುಳಿದಾಡುತ್ತಿದ್ದ ಒಂದಿಷ್ಟು ಪ್ರವಾಸಿಗರು ಕೂಡ ದೃಶ್ಯ ಮಾದ್ಯಮ ಕಂಡು ಬೆರಗುಗೊಂಡರಲ್ಲದೆ; ಜಾಗ ಖಾಲಿ ಮಾಡಬೇಕಾಯಿತು. ಈ ತಾಣಗಳಿಂದ ಸಂಬಂಧಪಟ್ಟವರು ಹೊರಕಳುಹಿಸಿ ದ್ವಾರಗಳಿಗೆ ಬೀಗ ಜಡಿದ ಪ್ರಸಂಗವೂ ನಡೆಯಿತು.

ಒಟ್ಟಿನಲ್ಲಿ ಕೊರೊನಾ ಭೀತಿಯಿಂದ ಕೊಡಗಿನ ಪ್ರವಾಸಿ ತಾಣಗಳಲ್ಲದೆ; ತೀರ್ಥ ಕ್ಷೇತ್ರ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಕೂಡ ಇಂದು ಯಾತ್ರಾರ್ಥಿಗಳು ಕಾಣಿಸಿಕೊಳ್ಳಲಿಲ್ಲ; ಬದಲಾಗಿ ಒಂದಿಷ್ಟು ಸ್ಥಳೀಯರು ಪಾಲ್ಗೊಂಡು ನಿತ್ಯ ಪೂಜಾ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು.

ಆದೇಶ ಪಾಲಿಸಲು ಮನವಿ

ಕೊರೊನಾ ವೈರಸ್ ಹರಡಂತೆ ಸೂಕ್ತ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಅವರು ಪತ್ರಿಕಾಗೋಷ್ಠಿಯಲ್ಲಿ ಅಗತ್ಯ ನಿರ್ದೇಶನಗಳನ್ನು ನೀಡಿರುವ ಹಿನ್ನೆಲೆ, ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಗೆ ಆಗಮಿಸುವ ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರನ್ನು ಭಾರತೀಯರು (ಯಾವುದೇ ದೇಶಕ್ಕೆ ಭೇಟಿ ನೀಡಿರಲಿ) ಹಾಗೂ ವಿದೇಶಿಯರು ಕರ್ನಾಟಕಕ್ಕೆ ಆಗಮಿಸುವಾಗ ಅವರಿಗೆ ರೋಗ ಲಕ್ಷಣ ಇಲ್ಲದಿದ್ದರೂ ಸಹ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಿಸುವುದು.

ಜಿಲ್ಲೆಯಾದ್ಯಂತ ತಾ. 14 ರಿಂದ ಮುಂದಿನ ಒಂದು ವಾರದ ಮಟ್ಟಿಗೆ ಸಿನಿಮಾ ಮಂದಿರಗಳು, ಮಾಲ್‍ಗಳು, ನಾಟಕಗಳು, ರಂಗಮಂದಿರಗಳು, ಪಬ್‍ಗಳು, ನೈಟ್‍ಕ್ಲಬ್‍ಗಳು, ವಸ್ತು ಪ್ರದರ್ಶನಗಳು, ಸಂಗೀತ ಹಬ್ಬಗಳು, ಕ್ಲಬ್‍ಗಳು, ಮ್ಯಾರಥಾನ್, ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ವೀಕ್ಷಿಸುವ ಕ್ರೀಡಾ ಕೂಟಗಳಾದ ಕ್ರಿಕೆಟ್, ಫುಟ್‍ಬಾಲ್, ಹಾಕಿ ಮತ್ತು ಇತರೆ ಕ್ರೀಡೆಗಳಿಗೆ ನಿರ್ಬಂಧವನ್ನು ಹೇರಲಾಗಿದೆ.

ಜೊತೆಗೆ ಹೆಚ್ಚಾಗಿ ಜನರು ಸೇರುವಂತಹ ಮದುವೆ ಕಾರ್ಯಕ್ರಮಗಳು ನಡೆಸದಿರುವುದು. ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಜಾತ್ರೆಗಳಿಗೆ ಆದಷ್ಟು ಕಡಿಮೆ ಸಂಖ್ಯೆಯ ಜನರು ಭಾಗವಹಿಸುವುದು. ಹೆಚ್ಚು ಜನರು ಬಳಸುವ ಸ್ವಿಮ್ಮಿಂಗ್ ಪೂಲ್ಸ್, ಜಿಮ್ ಮುಂತಾದವುಗಳನ್ನು ಮುಚ್ಚುವುದು. ಕೊಡಗು ಜಿಲ್ಲೆಯಲ್ಲಿ ಎಲ್ಲಾ ಅಂಗನವಾಡಿ ಮಕ್ಕಳಿಗೆ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾರ್ಚ್ 14 ರಿಂದ ಮುಂದಿನ ಒಂದು ವಾರದ ಮಟ್ಟಿಗೆ (ಪರೀಕ್ಷೆಗಳನ್ನು ಹೊರತುಪಡಿಸಿ) ರಜೆ ನೀಡಲಾಗಿದೆ.

ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕೋಚಿಂಗ್ ಸೆಂಟರ್‍ಗಳನ್ನು ಮುಚ್ಚುವುದು. ನಿಗಧಿಪಡಿಸಿದ ಪರೀಕ್ಷೆಗಳನ್ನು ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ನಡೆಸುವುದು. ಹೆಚ್ಚಾಗಿ ವಿದೇಶಗಳಿಗೆ ಪ್ರಯಾಣಿಸುವ ಐ.ಟಿ. ಬಿ.ಟಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಲು ಸಂಸ್ಥೆಗಳು ಪರಿಗಣಿಸುವುದು. ಖಾಸಗಿ ವೈದ್ಯರುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳು ಫೆಬ್ರವರಿ 21 ರ ನಂತರ ವಿದೇಶದಿಂದ ಬಂದು ರೋಗ ಲಕ್ಷಣಗಳಿರುವ ರೋಗಿಗಳು ಇದ್ದಲ್ಲಿ ತಡ ಮಾಡದೆ ಜಿಲ್ಲಾ ಆರೋಗ್ಯಾಧಿಕಾರಿಗೆ ಫೋನ್, ಫ್ಯಾಕ್ಸ್, ವಾಟ್ಸಪ್, 104 ಸಹಾಯವಾಣಿ ಮೂಲಕ ತಿಳಿಸಬೇಕು.

ಸರ್ಕಾರ, ಜಿಲ್ಲಾಡಳಿತ ಕಾಲಕಾಲಕ್ಕೆ ಹೊರಡಿಸಲಾಗುವ ಆದೇಶ, ನಿರ್ದೇಶನ, ಮುನ್ನಚ್ಚರಿಕಾ ಕ್ರಮಗಳನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದು, ಉಲ್ಲಂಘನೆಯು ಉಲ್ಲೇಖ(4)ರ ಅಧಿಸೂಚನೆಯನ್ವಯ ಭಾರತೀಯ ದಂಡ ಸಂಹಿತೆ 1860ರ ಕಲಂ 188 ರಡಿ ದಂಡನೀಯವಾಗಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಲು ಅವರು ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ನಿಗಾ: ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಯಾವದೇ ಆತಂಕಪಡುವ ಪರಿಸ್ಥಿತಿ ಎದುರಾಗಿಲ್ಲ ಎಂದು ಪ್ರಸ್ತುತ ಸಂದರ್ಭ ತಿಳಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಕೊಡಗು ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಮತ್ತು ಇತರರ ಸಹಕಾರದಿಂದ; ಕೊರೊನಾ ಹರಡದಂತೆ ಸಂಪೂರ್ಣ ನಿಗಾವಹಿಸುತ್ತಿರುವದಾಗಿ; ‘ಶಕ್ತಿ’ಯೊಂದಿಗೆ ಸ್ಪಷ್ಟಪಡಿಸಿದ್ದಾರೆ.

ವರದಿ ಬಂದಿಲ್ಲ : ವಿದೇಶದಿಂದ ಕೊಡಗಿನತ್ತ ಬಂದು ಕೊರೊನಾ ಸೋಂಕಿನ ಶಂಕೆಯಿಂದ ಆಸ್ಪತ್ರೆ ಸೇರಿರುವ ವ್ಯಕ್ತಿಯ ಆರೋಗ್ಯ ಸಂಬಂಧ ವರದಿ ಪ್ರಯೋಗಾಲಯದಿಂದ ಇನ್ನು ಬಂದಿಲ್ಲ ಎಂದು ತಿಳಿಸಿರುವ ಅವರು; ಆ ಬಗ್ಗೆ ಇನ್ನೆರಡು ದಿನಗಳಲ್ಲಿ ವರದಿ ಬರಬಹುದು. ಅನಂತರ ನಿಖರವಾದ ಮಾಹಿತಿ ಲಭಿಸಲಿದ್ದು; ಈಗ ಏನೂ ಹೇಳಲಾಗದು ಎಂದು ಉತ್ತರಿಸಿದ್ದಾರೆ.