ಮಡಿಕೇರಿ ಮಾ. 12: ಕುಂಜಿಲ ಪಯ್‍ನರಿ ವಲಿಯುಲ್ಲಾಹ್ ಅವರ ಉರೂಸ್ ಮುಬಾರಕ್ ಹಾಗೂ ಸ್ನೇಹ ರಸೂಲ್ ಮಾಸಿಕ ಸ್ವಲಾತ್ ಐದನೇ ವಾರ್ಷಿಕ ಮಹಾಸಮ್ಮೇಳನವು ತಾ. 13 ರಿಂದ (ಇಂದಿನಿಂದ) ತಾ. 17ರ ವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಕುಂಜಿಲದ ಪಯ್‍ನರಿ ಸುನ್ನೀ ಮುಸ್ಲಿಂ ಜಮಾಅತ್ ಮಾಜಿ ಕಾರ್ಯದರ್ಶಿ ಅಜೀಜ್ ಮಾಸ್ಟರ್ ಉರೂಸ್ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ತಾ. 13 ರಂದು ಮಧ್ಯಾಹ್ನ 2 ಗಂಟೆಗೆ ಅಸ್ಸಯ್ಯಿದ್ ಖಾತಿಂ ಸಖಾಫಿ-ಅಲ್‍ಹೈದ್ರೂಸಿ ಅವರ ನೇತೃತ್ವದಲ್ಲಿ ಮಖಾಂ ಅಲಂಕಾರ ಮತ್ತು ಸಾಮೂಹಿಕ ದುಆ ಕಾರ್ಯಕ್ರಮ ನಡೆಯಲಿದ್ದು, ಕುಂಜಿಲ ಪಯ್‍ನರಿ ಸುನ್ನೀ ಮುಸ್ಲಿಂ ಜಮಾಅತ್‍ನ ಅಧ್ಯಕ್ಷ ಎ.ಎ. ಮುಹಮ್ಮದ್ ಹಾಜಿ ಅವರು ಧ್ವಜಾರೋಹಣದ ಮೂಲಕ ಚಾಲನೆ ನೀಡಲಿದ್ದಾರೆಂದರು.

ರಾತ್ರಿ 8 ಗಂಟೆಗೆ ಕಡಲುಂಡಿ ಬದ್ರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹಿಂ ಖಲೀಲ್ ಬುಖಾರಿ ಅವರ ನೇತೃತ್ವದಲ್ಲಿ ಐದನೇ ಸ್ವಲಾತ್ ವಾರ್ಷಿಕ ಮಹಾ ಸಮ್ಮೇಳನ ನಡೆಯಲಿದ್ದು, ಎಮ್ಮೆಮಾಡಿನ ಅಶ್ರಫ್ ಜೌಹರಿ ‘ಸ್ವಲಾತಿನ ಮಹತ್ವ’ ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ವೇದಿಕೆಯಲ್ಲಿ ಎಮ್ಮೆಮಾಡು ಅಸ್ಸಯ್ಯಿದ್ ಅಬ್ದುಲ್ ಅಜೀಜ್ ಅಲ್‍ಹೈದ್ರೂಸಿ, ಕುಂಜಿಲ ರೌಳತುಲ್ ಉಲೂಂ ಮದರಸ ಸದರ್ ಮುಹಲ್ಲಿಂನ ಅಬ್ದುಲ್ಲ ಸಖಾಫಿ, ಅಲ್‍ಹಾಜ್ ಅಬು ಸಹೀದ್ ಹುಸೈನ್ ಮುಸ್ಲಿಯಾರ್, ಅಲ್ ಮುನವ್ವರ ಅಲ್‍ಹಾಜ್ ಶಾದುಲಿ ಫೈಝಿ ಸೇರಿದಂತೆ ಮತ್ತಿತರÀರು ಭಾಗವಹಿಸಲಿದ್ದಾರೆ.

ತಾ. 14 ರಂದು ರಾತ್ರಿ 8 ಗಂಟೆಗೆ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಪಾತೂರ್‍ನ ಅಬ್ದುಲ್ ಜಬ್ಬಾರ್ ಸಖಾಫಿ ‘ಮಿಹ್‍ರಾಜ್ ರಾತ್ರಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ತಾ. 15 ರಂದು ರಾತ್ರಿ 8.30ಕ್ಕೆ ತಾತೂರಿನ ಇಬ್ರಾಹಿಂ ಸಖಾಫಿ ‘ಕುಡುಂಬ ಜೀವಿದಂ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ತಾ. 16 ರಂದು ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕ ಉರೂಸ್ ಮಹಾ ಸಮ್ಮೇಳನ ನಡೆಯಲಿದ್ದು, ಕಣ್ಣೂರಿನ ಮರ್ಕಝುಲ್ ಹುದಾ ಅಬ್ದುಲ್ ರಶೀದ್ ಧಾರಿಮಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕುಂಜಿಲ ಪೈನರಿ ಸುನ್ನಿ ಮುಸ್ಲಿಂ ಅಧ್ಯಕ್ಷ ಎ.ಎ. ಮಹಮ್ಮದ್ ಹಾಜಿ ವಹಿಸಿದ್ದಾರೆ.

ಕಕ್ಕಿಂಜೆ ಡಾ. ಅಬ್ದುಲ್ ರಶೀದ್ ಝೈನಿ ಮುಖ್ಯ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಜಿ.ಪಂ. ಸದಸ್ಯ ಅಬ್ದುಲ್ ಲತೀಫ್, ಬೆಂಗಳೂರಿನ ಸಿ.ಐ. ಕೆ.ಎ. ಮುಹಮ್ಮದ್, ಕುಂಜಿಲ ಪಯ್‍ನರಿ ಸುನ್ನೀ ಮುಹಮ್ಮದ್, ಕುಂಜಿಲ ಪಯ್‍ನರಿ ಸುನ್ನೀ ಮುಸ್ಲಿಂ ಜಮಾಅತ್‍ನ ಸಲಹಾ ಸಮಿತಿ ಸದಸ್ಯ ಉಮ್ಮರ್ ಹಾಜಿ ಪೆನ್ನತ್ತೋಡ್, ಕೆ.ಎಂ. ಅಡ್ವಕೇಟ್ ಕುಂಞಬ್ದುಲ್ಲ, ಹೊದ್ದೂರು ಗ್ರಾ.ಪಂ. ಸದಸ್ಯ ಹಂಸ ಕೊಟ್ಟಮುಡಿ ಕಕ್ಕಬ್ಬೆ ಗ್ರಾ. ಪಂ. ಉಪಾಧ್ಯಕ್ಷ ವಿ.ಎ. ಉಸ್ಮಾನ್, ಸದಸ್ಯರಾದ ನಾಸಿರ್ ಮಕ್ಕಿ, ಮೂಸ ಪಯ್ಯಡಿ, ಕೆಆರ್‍ಟಿಸಿ ಎಂ.ಎ. ಶಾಕತ್ ಆಲಿ ಹಾಗೂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸಂಜೆ 4 ಗಂಟೆಗೆ ಮೌಲೂದ್ ಪಾರಾಯಣ ನಂತರ ಅನ್ನದಾನ ನಡೆಯಲಿದೆ. ರಾತ್ರಿ 8 ಗಂಟೆಗೆ ದಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಅಲ್ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ‘ಇಸ್ಲಾಮಿನಲ್ಲಿ ಯೌವ್ವನದ ಮಹತ್ವ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ. ಯಾಕೂಬ್ ಭಾಗವಹಿಸಲಿದ್ದಾರೆ.

ಪ್ರತೀ ದಿನ ಮಗರಿಬ್‍ನ ನಂತರ ಬುರ್ದಾ ಮಜ್ಲಿಸ್ ಮತ್ತು ದಫ್ ಪ್ರದರ್ಶನ ನಡೆಯಲಿದ್ದು, ಸ್ತ್ರೀಯರಿಗೆ ಎಲ್‍ಇಡಿ ಸಹಿತ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಪಯ್‍ನರಿ ಸುನ್ನೀ ಮುಸ್ಲಿಂ ಜಮಾಅತ್‍ನ ಅಧ್ಯಕ್ಷ ಕೆ.ಎ. ಮುಹಮ್ಮದ್ ಹಾಜಿ, ಖಾಜಾಂಚಿ ಮಹಮ್ಮದ್ ಹಾಜಿ, ಸಹ ಕಾರ್ಯದರ್ಶಿ ಸಿರಾಜುದ್ದೀನ್ ವಯಕೋಲ್ ಹಾಗೂ ಸದಸ್ಯ ಎ.ಎಂ. ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.