ಮಡಿಕೇರಿ ಮಾ.12 : ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರಿಯ ಶ್ರೀಓಂಕಾರೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮ ಕಲಶೋತ್ಸವವು ತಾ. 20 ರಿಂದ 25 ರವರೆಗೆ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪುಲಿಯಂಡ ಕೆ. ಜಗದೀಶ್ ಅವರು, ಓಂಕಾರೇಶ್ವರ ದೇವಾಲಯ ದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸುವ ಸಂಬಂಧ ಕಳೆದ ಡಿಸೆಂಬರ್ ನಲ್ಲಿ ನಡೆಸಲಾದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಸಮಸ್ಯೆಗಳಿಗೆ ಪರಿಹಾರ ಕಾರ್ಯಗಳನ್ನು ಈಗಾಗಲೇ ನೆರವೇರಿಸಲಾಗಿದ್ದು, ಇದೀಗ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ ಸಹಯೋಗದಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ತಾ. 20ರ ಸಂಜೆ 7 ಗಂಟೆಯಿಂದ ಕಾರ್ಯಕ್ರಮಗಳು ಆರಂಭವಾಗಲಿದ್ದು, ಅದರಂತೆ ಅಂದು ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪ್ರಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ, ಅಂಕುರಾರ್ಪಣೆ, ರಾತ್ರಿ ಪೂಜೆ, ತಾ. 21ರ ಪೂರ್ವಾಹ್ನ 7 ಗಂಟೆಯಿಂದ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಬಿಂಬ ಶುದ್ಧಿ ಕಲಶಾಭಿಷೇಕ, ಪ್ರೋಕ್ತ ಹೋಮ, ಪ್ರಾಯಶ್ಚಿತ ಹೋಮ, ಸಾಮೂಹಿಕ ಮೃತ್ಯುಂಜಯ ಹೋಮ, ಹೋಮ ಕಲಶಾಭಿಷೇಕಗಳು, 12.30ಕ್ಕೆ ಮಧ್ಯಾಹ್ನ ಪೂಜೆ, ಸಂಜೆ 7 ಗಂಟೆಯಿಂದ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ ಜರುಗಲಿವೆ ಎಂದರು.
ತಾ. 22ರ ಬೆಳಿಗ್ಗೆ 7 ಗಂಟೆಯಿಂದ ಅಂಕುರ ಪೂಜೆ, ಗಣಪತಿ ಹೋಮ, ಶಾಂತಿ ಹೋಮಗಳು, ಸಾಮೂಹಿಕ ನವಗ್ರಹ ಶಾಂತಿ ಹೋಮ, ಕಲಶಾಭಿಷೇಕಗಳು, 12.30ಕ್ಕೆ ಮಧ್ಯಾಹ್ನ ಪೂಜೆ, ರಾತ್ರಿ ಅಂಕುರ ಫುಜೆ, ದುರ್ಗಾ ನಮಸ್ಕಾರ ಪೂಜೆ, ಬ್ರಹ್ಮಕಲಶ ಮಂಟಪ ನಮಸ್ಕಾರ, ತಾ. 23ರ ಬೆಳಿಗ್ಗೆ 7 ಗಂಟೆಯಿಂದ ಅಂಕುರ ಪೂಜೆ, ತತ್ವ ಕಲಶ ಪೂಜೆ, ಸೃಷ್ಟಿ ತತ್ವ ಹೋಮ, ಸೃಷ್ಠಿ ತತ್ವ ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ರಾತ್ರಿ ಶ್ರೀ ದುರ್ಗಾ ತ್ರಿಕಾಲ ಪೂಜೆ, ಅಂಕುರ ಪೂಜೆ ನಡೆಯಲಿದೆ ಎಂದು ವಿವರಿಸಿದರು.
ತಾ. 24ರ ಬೆಳಿಗ್ಗೆ ಗಣಪತಿ ಹೋಮ, ಅನುಜ್ಞಾ ಕಲಶ ಪೂಜೆ, ಶತರುದ್ರಾಭಿಷೇಕ, ಮಧ್ಯಾಹ್ನ 12.30ಕ್ಕೆ ಅನುಜ್ಞಾ ಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ, ಮಧ್ಯಾಹ್ನ ಪೂಜೆ, ಸಂಜೆ 7 ರಿಂದ ಕುಂಭೇರಿ ಕರ್ಕರಿ, ಕಲಶ ಪೂಜೆ, ಆಧಿವಾಸ ಹೋಮ. ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾಧಿವಾಸ, ತಾ. 25ರ ಬೆಳಿಗ್ಗೆ 7 ರಿಂದ ಗಣಪತಿ ಹೋಮ, 7.39ಕ್ಕೆ ಅಷ್ಟಬಂಧ ಲೇಪನ, ಪರಿಕಲಶಾ ಭಿಷೇಕ, 11.30ಕ್ಕೆ ಬ್ರಹ್ಮಕಲಶಾಭಿಷೇಕ, 13.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ ಕಾರ್ಯಕ್ರಮಗಳ ಜರುಗಲಿವೆ ಎಂದು ತಿಳಿಸಿದರು.
ಕಳೆದ ಮೇ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ತಮ್ಮ ನೇತೃತ್ವದ ಸಮಿತಿಯು ದೇವಾಲಯದ ಅಭಿವೃದ್ಧಿಗೆ ಹಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದು, ಮೂರು ವರ್ಷಗಳ ಅವಧಿಯಲ್ಲಿ ಈ ಕಾರ್ಯಗಳನ್ನು ಪೂರ್ಣ ಗೊಳಿಸಲಾ ಗುವುದು ಎಂದು ಹೇಳಿದರು.
ಸಾಮೂಹಿಕ ವಿವಾಹ: ಮುಂದಿನ ಮೇ 24ರಂದು ದೇವಾಲ ಯದ ಆಶ್ರಯದಲ್ಲಿ ಧಾರ್ಮಿಕ ದತ್ತಿಗಳ ಇಲಾಖೆ ವತಿಯಿಂದ ದೇವಾಲಯದ ಓಂಕಾರ ಸದನದಲ್ಲಿ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಕಾರ್ಯ ಕ್ರಮವನ್ನು ಆಯೋಜಿಸಲಾಗುತ್ತಿದ್ದು, ಆಸಕ್ತರು ತಾ. 26ರಿಂದ ದೇವಾಲ ಯದ ಕಚೇರಿಯಿಂದ ನಿಗದಿತ ಅರ್ಜಿಗಳನ್ನು ಪಡೆದು ಹೆಸರು ನೋಂದಾಯಿಸಿ ಕೊಳ್ಳಬಹುದು ಎಂದು ಜಗದೀಶ್ ಅವರು ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ಸಿ. ದಮಯಂತಿ, ಟಿ.ಹೆಚ್. ಉದಯ ಕುಮಾರ್, ಎ.ಎಸ್.ಪ್ರಕಾಶ್ ಆಚಾರ್ಯ, ಕುರಿಕಂಡ ಎ.ಆನಂದ, ಹಾಗೂ ಪದನಿಮಿತ್ತ ಕಾರ್ಯದರ್ಶಿ ಎಂ. ಜಗದೀಶ್ ಕುಮಾರ್ ಉಪಸ್ಥಿತರಿದ್ದರು.