ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ

ಮಡಿಕೇರಿ, ಮಾ. 11: ದುಬಾರೆ ಮತ್ತು ನಿಸರ್ಗಧಾಮ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅರಣ್ಯ ಸಚಿವ ಆನಂದ್‍ಸಿಂಗ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಕಾಸ ಸೌಧದ 2ನೇ ಮಹಡಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಕೊಡಗು ಮಾನವ ವನ್ಯಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನದ ಮೊದಲನೇ ಆಡಳಿತ ಮಂಡಳಿ ಸಭೆ ಸರ್ಕಾರದ ಆದೇಶದಂತೆ ನಡೆದಿದ್ದು, ಈ ಸಭೆಯಲ್ಲಿ ದುಬಾರೆ ಹಾಗೂ ನಿಸರ್ಗಧಾಮ ಈ ಎರಡೂ ಪ್ರವಾಸಿ ತಾಣಗಳಿಂದ ಒಟ್ಟು ರೂ. 10 ಕೋಟಿ ವಾರ್ಷಿಕ ಆದಾಯ ಸಂಗ್ರಹವಾಗಿದ್ದು, ಅದನ್ನು ಅಲ್ಲಿಯ ಮೂಲಭೂತ ಸೌಕರ್ಯ, ಪ್ರವಾಸಿ ಆಕರ್ಷಣೆಯನ್ನು ಹೆಚ್ಚು ಮಾಡುವ ಹಾಗೂ ಆನೆಗಳ ಮಾವುತರು ಮತ್ತು ಕಾವಾಡಿಗರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ತಾನು ಆಗ್ರಹಿಸಿದ್ದು, ಸಭೆಯಲ್ಲಿ ಅದರಂತೆ ತೀರ್ಮಾನವಾಗಿದೆ ಎಂದು ಶಾಸಕ ಅಪ್ಪಚ್ಚುರಂಜನ್ ತಿಳಿಸಿದ್ದಾರೆ.

ದುಬಾರೆಯಲ್ಲಿ ಆನೆ ಸಫಾರಿ ನಿಲ್ಲಿಸಲಾಗಿದ್ದು, ಅದನ್ನು ಪುನರಾರಂಭಿಸಬೇಕು ಜೊತೆಗೆ ದುಬಾರೆ ಮತ್ತು ನಿಸರ್ಗಧಾಮದಲ್ಲಿ ಪಕ್ಷಿಗಳನ್ನು ಸಾಕುವ ಮೂಲಕ ಪ್ರವಾಸಿ ಆಕರ್ಷಣೆಯನ್ನು ಹೆಚ್ಚು ಮಾಡಬೇಕು. ಆನೆ ಮಾವುತರು ಮತ್ತು ಕಾವಾಡಿಗರಿಗೆ ಸಮವಸ್ತ್ರ, ಆನೆಗಳಿಂದ ಮಾವುತರು ಮತ್ತು ಕಾವಾಡಿಗರ ಸಾವುನೋವು ಸಂಭವಿಸಿದರೆ ಕುಟುಂಬಸ್ಥರಿಗೆ ಪರಿಹಾರದೊಂದಿಗೆ ಪ್ರತಿ ತಿಂಗಳು ರೂ. 2000 ಮಾಸಾಶನ ನೀಡುವಂತೆ ತೀರ್ಮಾನಿಸಲಾಯಿತು. ಮಾವುತರು ಮತ್ತು ಕಾವಾಡಿಗರ ಮಕ್ಕಳಿಗೆ ಉದ್ಯೋಗವಕಾಶ ಕಲಿಸುವ ನಿಟ್ಟಿನಲ್ಲಿ ಪೂರಕವಾದ ವೃತ್ತಿಪರ ತರಬೇತಿಯನ್ನು ನೀಡಲು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಪಾಲ್ಗೊಂಡಿದ್ದ ನಾಪೋಕ್ಲು ಕ್ಷೇತ್ರದ ಜಿ.ಪಂ. ಸದಸ್ಯ ಮತ್ತು ಪ್ರತಿಷ್ಠಾನದ ನಾಮ ನಿರ್ದೇಶಿತ ಸದಸ್ಯ ಪಿ.ಕೆ. ಮುರಳಿ ಕರುಂಬಮ್ಮಯ್ಯ ಪತ್ರಿಕೆಯೊಂದಿಗೆ ಮಾತನಾಡಿ ಆನೆ ಮಾನವ ಸಂಘರ್ಷದ ಕುರಿತು ಮತ್ತು ಅದು ಕೊಡಗಿನಲ್ಲಿ ಉಂಟು ಮಾಡಿರುವ ಕಷ್ಟನಷ್ಟಗಳ ತೀವ್ರತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಸಭೆಯ ಗಮನಕ್ಕೆ ತಂದಿದ್ದಾರೆ. ಆನೆ ಹಾವಳಿ ನಿಯಂತ್ರಣಕ್ಕಾಗಿ ಸೌರಬೇಲಿ ನಿರ್ಮಾಣ, ಕಂದಕ ತೆಗೆಯುವಲ್ಲಿ ಇಲಾಖೆ ಮಾಡುತ್ತಿರುವ ಲೋಪದೋಷಗಳ ಕುರಿತು ಸಭೆಯಲ್ಲಿ ಸಚಿವರ ಗಮನಕ್ಕೆ ತಂದಿದ್ದಾರೆ. ಬೋಪಯ್ಯ ಅವರೊಂದಿಗೆ ಶಾಸಕ ಅಪ್ಪಚ್ಚುರಂಜನ್ ಕೂಡ ಪೂರಕವಾಗಿ ಧ್ವನಿಗೂಡಿಸಿ ಕೊಡಗಿನಲ್ಲಿ ಮಾನವ ವನ್ಯಪ್ರಾಣಿ ಸಂಘರ್ಷದ ಗಂಭೀರತೆಯನ್ನು ಸಚಿವರ ಸಮ್ಮುಖದಲ್ಲಿ ಅನಾವರಣಗೊಳಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಪ್ರಭಾಕರನ್ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪ್ರತಿಷ್ಠಾನದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.