ಸೋಮವಾರಪೇಟೆ, ಮಾ. 11: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಖಾತ್ರಿ ಕೋಶ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಜಿಲ್ಲಾಮಟ್ಟದ ವಿಚಾರಗೋಷ್ಠಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಂಟಿಕೊಪ್ಪದ ಲೆಕ್ಕ ಪರಿಶೋಧಕ ಎ.ಎಸ್. ಅಂಶುಮಾನ್, ವಾಣಿಜ್ಯ ಶಾಸ್ತ್ರದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದರು.
ವಿದ್ಯಾವಂತರಿಗೆ ಉದ್ಯೋಗದಲ್ಲಿ ಹಲವು ಅವಕಾಶವಿದೆ. ಶಿಕ್ಷಣದ ಜತೆಗೆ ತಂತ್ರಜ್ಞಾನದ ಅರಿವನ್ನು ರೂಢಿಸಿಕೊಳ್ಳಬೇಕು. ಹೆಚ್ಚಿನ ಜ್ಞಾನ ಇರುವವರಿಗೆ ಭವಿಷ್ಯದಲ್ಲಿ ಒಂದಲ್ಲ ಒಂದು ಸೇವೆಯಲ್ಲಿ ಮುಂದುವರೆಯಲು ಸಾಧ್ಯವಿದೆ ಎಂದು ಹೇಳಿದರು.
ನಂತರ ನಡೆದ ಮೊದಲ ಅಧಿವೇಶನದಲ್ಲಿ ಮೈಸೂರಿನ ಜಿ.ಎಸ್.ಟಿ ಪರಿಣತರು, ಲೆಕ್ಕ ಪರಿಶೋಧಕ ವಾಗೀಸ್ ಗಣಪತಿ ಹೆಗಡೆ ವಿಚಾರ ಮಂಡಿಸಿ, ಈ ಹಿಂದೆ ಇದ್ದ ತೆರಿಗೆಯ ಮಾದರಿಯನ್ನು ಜಿ.ಎಸ್.ಟಿ.ಯೊಂದಿಗೆ ತುಲನಾತ್ಮಕವಾಗಿ ವಿವರಿಸಿದರಲ್ಲದೇ, ಜಿ.ಎಸ್.ಟಿ. ಅನುಕೂಲಗಳನ್ನು ಮತ್ತು ಅವುಗಳಲ್ಲಿರುವ ಅಡೆತಡೆಗಳು, ಹೊಸ ತೆರಿಗೆ ವಿಧಾನವು ದೇಶದ ಪ್ರಗತಿಗೆ ಯಾವ ರೀತಿಯಲ್ಲಿ ಕೊಡುಗೆ ನೀಡುತ್ತಿದೆ ಎಂಬದರ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಎರಡನೇ ಅಧಿವೇಶನದಲ್ಲಿ ಸೋಮವಾರಪೇಟೆ ಬ್ಯಾಂಕ್ ಆಫ್ ಬರೋಡಾ ಶಾಖೆಯ ವ್ಯವಸ್ಥಾಪಕ ಅಶೋಕ್ ವಿಮನ್ ಮಾತನಾಡಿ, ಇಂದು ವಾಣಿಜ್ಯ ಬ್ಯಾಂಕುಗಳು ಕೇವಲ ಉಳಿತಾಯ ಖಾತೆಗಳನ್ನು ನಿರ್ವಹಿಸಲು ಮಾತ್ರ ಸೀಮಿತವಾಗಿಲ್ಲ. ವ್ಯಾಪಾರ, ವಹಿವಾಟು, ಆನ್ ಲೈನ್ ವ್ಯವಹಾರ, ಅಂತರ್ರಾಷ್ಟ್ರೀಯ ಮಾರುಕಟ್ಟೆ ಮತ್ತು ಷೇರು ಬಂಡವಾಳ ವಹಿವಾಟು ಸೇರಿದಂತೆ ಬಹಳ ವ್ಯಾಪಕವಾದ ಕರ್ತವ್ಯವನ್ನು ನಿರ್ವಹಿಸುತ್ತಿವೆ ಎಂದರು.
ಹಾಸನ ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ನಿರ್ದೇಶಕ ಅಂಬುಶಿವನ್ ಮಾತನಾಡಿ, ಬ್ಯಾಂಕ್ ಕ್ಷೇತ್ರವು ಪದವೀಧರರ ಆದ್ಯತಾ ಕ್ಷೇತ್ರವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಶೇಷವಾಗಿ ಆಸಕ್ತಿ ವಹಿಸಿ ವಾಣಿಜ್ಯ ಶಾಸ್ತ್ರವನ್ನು ವ್ಯಾಸಂಗ ಮಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಭಾರ ಪ್ರಾಚಾರ್ಯ ಪ್ರೊ. ಹೆಚ್.ಎನ್. ರಾಜು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರವೀಣ್ ಕುಮಾರ್, ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಂಚಾಲಕ, ಉಪನ್ಯಾಸಕ ಎಂ.ಎಸ್. ಶಿವಮೂರ್ತಿ, ರಾಜ್ಯಶಾಸ್ತ್ರದ ಉಪನ್ಯಾಸಕಿ ಶೈಲಾ ಉಪಸ್ಥಿತರಿದ್ದರು.