ವೀರಾಜಪೇಟೆ, ಮಾ. 11: ಭಾರತ ದೇಶದಲ್ಲಿ ದೀಪವನ್ನು ಹಚ್ಚುವ ಮಹತ್ವದ ಸತ್ಸಂಪ್ರದಾಯವಿದೆ. ದೀಪವನ್ನು ಹಚ್ಚುವುದರಿಂದ ನಮ್ಮ ಜೀವನದಲ್ಲಿಯೂ ಅದು ಬೆಳಕನ್ನು ನೀಡಲಿದೆ ಎಂದು ಜರ್ಮನಿ ದೇಶದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ರಾಜಯೋಗ ಸೇವಾಕೇಂದ್ರಗಳ ನಿರ್ದೇಶಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಸುದೇಶ್‍ಜೀ ಹೇಳಿದರು.
ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಬ್ರಹ್ಮಕುಮಾರಿಸ್ ಜ್ಞಾನ ಗಂಗಾ ಭವನದ ರಾಜಯೋಗ ಧ್ಯಾನ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಸುದೇಶ್‍ಜೀ ಅವರು ದೀಪವನ್ನು ಬೆಳಗುವುದರಿಂದ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಮಾನವನ ಚಿಂತೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡಿ ಇಂದಿನ ಸಮಾಜಕ್ಕೆ ಶಾಂತಿ ನೆಮ್ಮದಿಯ ಬದುಕಿಗೆ ಇದು ಕಾರಣವಾಗಲಿದೆ ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮೈಸೂರು ವಿಭಾಗದ ರಂಗನಾಥ್ ಮಾತನಾಡಿ, ವಿಶ್ವ ವಿದ್ಯಾಲಯ ಅಂದರೆ ಕಲಿಯುವಂತ ಸ್ಥಳ, ಈ ಮುಕ್ತ ವಿದ್ಯಾಲಯವು ವಿಶ್ವದ ಎಲ್ಲಾ ಕಡೆಗಳಲ್ಲಿಯು ತನ್ನದೇ ಆದ ಕೇಂದ್ರಗಳನ್ನು ಹೊಂದಿದೆ. ಆಸಕ್ತರಿಗೆ ಶಿಕ್ಷಣ ಉಚಿತವಾಗಿ ನೀಡಲಿದೆ. ಈ ಕೇಂದ್ರಕ್ಕೆ ಆಸಕ್ತಿಯಿಂದ ಬರುವವರಿಗೆ ಸಾಮಾಜಿಕ ಜೀವನದಲ್ಲಿನ ಅಧ್ಯಾತ್ಮಿಕ ಶಿಕ್ಷಣ ಹಾಗೂ ಮಾನವನಲ್ಲಿ ದುಃಖವನ್ನು ಅಳಿಸಿ ಮನಸ್ಸಿಗೆ ಸುಖವನ್ನು ನೀಡುವಂತಹ ಶಿಕ್ಷಣ ದೊರೆಯಲಿದೆ. ಈಗ ವೀರಾಜ ಪೇಟೆಯಲ್ಲಿ ಉದ್ಘಾಟನೆಗೊಂಡಿರುವ ರಾಜಯೋಗ ಧ್ಯಾನ ಸಭಾಂಗಣದ ಉದ್ದೇಶವೂ ಇದಾಗಿದ್ದು ಜಾತಿ ಧರ್ಮ ಭೇದವಿಲ್ಲದೆ ಎಲ್ಲರಿಗೂ ಮುಕ್ತ ಪ್ರವೇಶಾವಕಾಶವಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕುಮಾರಿ ಮೈಸೂರು ಉಪ ವಲಯದ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಬಿ.ಕೆ.ಲಕ್ಷ್ಮೀಜಿ ಮಾತನಾಡಿ ಜ್ಞಾನದ ಮೂಲಕ ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ 147 ದೇಶಗಳಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಧ್ಯಾನ ಸೇವಾ ಕೇಂದ್ರಗಳಿವೆ ಎಂದು ಹೇಳಿದರು. ವೀರಾಜಪೇಟೆ ಬ್ರಹ್ಮಕುಮಾರಿಸ್ ಜ್ಞಾನ ಗಂಗಾ ಭವನದ ಕೋಮಲಜೀ ಧ್ಯಾನದ ಬಗ್ಗೆ ಮಾಹಿತಿ ನೀಡಿದರು. ಕೇರಳದ ಕಣ್ಣಾನೂರಿನ ರಾಜಯೋಗಿನಿ ಮೀನಾಜೀ ಸ್ವಾಗತಿಸಿದರು. ವೇದಿಕೆಯಲ್ಲಿ ಮಂಡ್ಯ ಜಿಲ್ಲೆಯ ಸೇವಾ ಕೇಂದ್ರದ ಶಾರದಾಜೀ, ಮಡಿಕೇರಿಯ ಧನಲಕ್ಷ್ಮೀಜಿ, ಇಲ್ಲಿನ ಗ್ರಾಮಾಂತರ ಠಾಣಾಧಿಕಾರಿ ವೀಣಾ ನಾಯ್ಕ್, ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಜಿಲ್ಲೆ ಹಾಗೂ ಇತರ ಜಿಲ್ಲೆಗಳಿಂದಲೂ ಸ್ವಯಂ ಸೇವಕ ಕಾರ್ಯಕರ್ತರು ಪಾಲ್ಗೊಂಡಿದ್ದರು.