ಮಡಿಕೇರಿ, ಮಾ. 11 : ಭಾಗಮಂಡಲ ಸಮೀಪದ ಚೆಟ್ಟಿಮಾನಿಯಲ್ಲಿ ಎಸ್‍ವಿಕೆಎಸ್‍ಜೆಎಸ್ ಟ್ರಸ್ಟ್ ವತಿಯಿಂದ ಆರಂಭಿಸಲಾಗಿರುವ ಶ್ರೀಕೃಷ್ಣ ಗೋಶಾಲೆಯು ತಾ. 12 ರಿಂದ (ಇಂದಿನಿಂದ) ಅಧಿಕೃತವಾಗಿ ಆರಂಭವಾಗಲಿದ್ದು, ಸಾರ್ವಜನಿಕರು, ಪೊಲೀಸ್ ಇಲಾಖೆ ಹಾಗೂ ಸಂಘ ಸಂಸ್ಥೆಗಳವರು ಬೀಡಾಡಿ ದನಗಳನ್ನು ಈ ಗೋಶಾಲೆಗೆ ತಂದು ಬಿಡಬಹುದು ಎಂದು ಟ್ರಸ್ಟ್‍ನ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜ.14ರಿಂದ ಗೋಶಾಲೆಯನ್ನು ಅಧಿಕೃತವಾಗಿ ಆರಂಭಿಸುವ ಚಿಂತನೆ ಇತ್ತಾದರೂ, ಮಳೆಗಾಲದ 6 ತಿಂಗಳ ಕಾಲ ಜಾನುವಾರುಗಳನ್ನು ಕೊಟ್ಟಿಗೆಯಲ್ಲೇ ಕಟ್ಟಿಹಾಕಿ ಸಾಕಬೇಕಾದ ಅನಿವಾರ್ಯತೆ ಇರುವುದರಿಂದ ಅವುಗಳಿಗೆ ಬೇಕಾದ ಕೊಟ್ಟಿಗೆ ನಿರ್ಮಾಣಕ್ಕೆ ಜಾಗ ಸಮತಟ್ಟು ಮಾಡುವ ಕಾರ್ಯ ವಿಳಂಬವಾದ ಹಿನ್ನೆಲೆಯಲ್ಲಿ ಗೋಶಾಲೆ ಆರಂಭವೂ ವಿಳಂಬವಾಯಿತು. ಇದೀಗ ಜಾನುವಾರುಗಳನ್ನು ಸಾಕುವುದಕ್ಕೆ ಬೇಕಾದ ವ್ಯವಸ್ಥೆಗಳಿರುವುದರಿಂದ ಗುರುವಾರದಿಂದಲೇ ಜಾನುವಾರುಗಳನ್ನು ಗೋಶಾಲೆಗೆ ಸೇರಿಸಿಕೊಳ್ಳಲಾಗುವುದು ಎಂದರು.
ಈಗಾಗಲೇ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯವರು 7 ಜಾನುವಾರುಗಳನ್ನು ಗೋಶಾಲೆಯಲ್ಲಿ ಬಿಟ್ಟಿದ್ದು, ಇದರೊಂದಿಗೆ ಸಾರ್ವಜನಿಕರು ಕೂಡ ಕೆಲವು ಜಾನುವಾರುಗಳನ್ನು ಬಿಟ್ಟಿದ್ದಾರೆ ಎಂದು ಹೇಳಿದ ಹರೀಶ್ ಆಚಾರ್ಯ ಅವರು, ತಮಗೆ ಸಾಕಲು ಸಾಧ್ಯವಾಗದೆ ಗೋಶಾಲೆಗೆ ಜಾನುವಾರುಗಳನ್ನು ಬಿಡುವವರು ಆ ಗೋವುಗಳಿಗೆ ಯಾವುದೇ ಖಾಯಿಲೆಗಳು ಇದ್ದಲ್ಲಿ ಅದರ ಮಾಹಿತಿ ನೀಡಬೇಕು. ಇದರಿಂದ ಗೋಶಾಲೆಯಲ್ಲಿ ಅವುಗಳನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲು ಸಹಾಯವಾಗುತ್ತದೆ ಎಂದು ಮನವಿ ಮಾಡಿದರು.
ಗೋಶಾಲೆಗೆ ಜಾನುವಾರುಗಳನ್ನು ವಾಹನದ ಮೂಲಕ ಕಳುಹಿಸುವವರು ವಾಹನದ ಸಂಖ್ಯೆ, ಅದರಲ್ಲಿರುವ ಜಾನುವಾರುಗಳ ಸಮಗ್ರ ಮಾಹಿತಿ ಹಾಗೂ ಸಾಗಿಸುವ ಮಾರ್ಗದ ಬಗ್ಗೆ ಮುಂಚಿತವಾಗಿ ತಿಳಿಸಿದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಯವರನ್ನು ಸಂಪರ್ಕಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಲು ಕೋರಲಾಗುತ್ತದೆ ಎಂದರು.
ನೆರವಿಗೆ ಮನವಿ : ಗೋಶಾಲೆ ಇರುವ ಪ್ರದೇಶವು ಹೆಚ್ಚು ಮಳೆಯಾಗುವ ಪ್ರದೇಶವಾಗಿರುವುದರಿಂದ ಮೇಲ್ಚಾವಣಿ ಅಳವಡಿಸುವ ಅಗತ್ಯವಿದೆ. ಬೀಡಾಡಿ ಹಸುಗಳ ರಕ್ಷಣೆಗಾಗಿ ಕೊಟ್ಟಿಗೆ ನಿರ್ಮಿಸಲು ಮತ್ತು ಆಹಾರ ಸಂಗ್ರಹಿಸಲು ಸಾಕಷ್ಟು ಹಣದ ಅವಶ್ಯಕತೆಯೂ ಇದೆ. ಸುಮಾರು 200 ಗೋವುಗಳು ಗೋಶಾಲೆಗೆ ಬಂದಲ್ಲಿ ತಿಂಗಳಿಗೆ ಸುಮಾರು 2 ಲಕ್ಷಕ್ಕೂ ಅಧಿಕ ಹಣ ಅವುಗಳ ಪಾಲನೆಗೆ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಡಿನ ದಾನಿಗಳು ತನು, ಮನ ಧನದ ಮೂಲಕ ಸಹಾಯ ಮಾಡಬೇಕೆಂದು ಹರೀಶ್ ಆಚಾರ್ಯ ಮನವಿ ಮಾಡಿದರು.
ಆರ್ಥಿಕ ಸಹಕಾರ ನೀಡಲು ಸಾಧ್ಯವಾಗದವರು ಶೆಡ್ ನಿರ್ಮಾಣಕ್ಕೆ ಅಗತ್ಯವಿರುವ ಕಲ್ಲು, ಮರಳು, ಇಟ್ಟಿಗೆ, ಸಿಮೆಂಟ್, ಮೇಲ್ಚಾವಣಿ ಶೀಟ್‍ಗಳು ಮತ್ತು ಗೋವಿನ ಆಹಾರವನ್ನೂ ದಾನವಾಗಿ ನೀಡಬಹುದಾಗಿದೆ. ದಾನಿಗಳ ಹೆಸರನ್ನು ಗೋಶಾಲೆಯ ದಾನಿಗಳ ಫಲಕದಲ್ಲಿ ಹಾಕಲಾಗುವುದಲ್ಲದೆ, ಹೆಸರು ಬಹಿರಂಗಪಡಿಸಲು ಇಚ್ಛಿಸದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.
ಮಕ್ಕಳ ಹುಟ್ಟು ಹಬ್ಬ ಅಥವಾ ಹಿರಿಯರು ದೈವಾಧೀನರಾದ ಸಂದರ್ಭದಲ್ಲಿ ಅವರ ಹೆಸರಿನಲ್ಲಿ ಗೋಶಾಲೆಗೆ ಸಾಧ್ಯವಾದಷ್ಟು ಹಣವನ್ನು ನೀಡಿದಲ್ಲಿ ಮಕ್ಕಳ ಅಥವಾ ಹಿರಿಯ ಹೆಸರಿನಲ್ಲಿ ಗೋವುಗಳಿಗೆ ದಾನ ನೀಡಿದ ಪುಣ್ಯವೂ ಪ್ರಾಪ್ತಿಯಾಗಲಿದೆ ಎಂದು ಹೇಳಿದ ಅವರು, ಹಣಕಾಸಿನ ನೆರವು ನೀಡುವವರು ಮಡಿಕೇರಿಯ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿರುವ ‘ಎಸ್.ವಿ.ಕೆ.ಎಸ್.ಜೆ.ಎಸ್ ಟ್ರಸ್ಟ್(ರಿ)ನ ಖಾತೆ ಸಂಖ್ಯೆ 897310210000001 (ಐಎಫ್‍ಎಸ್‍ಸಿ ಕೋಡ್: ಃಏIಆ0008973)ಗೆ ಜಮಾ ಮಾಡಬಹುದು ಎಂದು ತಿಳಿಸಿದರು.