ಸಿದ್ದಾಪುರ, ಮಾ.11: ಕೊಡಗು ಜಿಲ್ಲೆಯ ಆದಿವಾಸಿಗಳ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಬೇಕೆಂದು ದಿಡ್ಡಳ್ಳಿ ಆದಿವಾಸಿ ಹೋರಾಟಗಾರ್ತಿ ಜೆ.ಕೆ. ಮುತ್ತಮ್ಮ ಅವರು ರಾಜ್ಯ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆದಿವಾಸಿಗಳ ಮುಖಂಡರ ನಿಯೋಗ ತೆರಳಿ ಮನವಿ ಪತ್ರವನ್ನು ನೀಡಲಾಗಿದ್ದು, ಕೃಷಿ ಮಾಡಿ ಜೀವನ ಸಾಗಿಸಲು ತಲಾ 2 ಎಕ್ರೆ ಜಾಗವನ್ನು ಮಂಜೂರು ಮಾಡಲು ಸರಕಾರದ ಗಮನ ಸೆಳೆಯಬೇಕು.

ಕುಶಾಲನಗರದ ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿಯಲ್ಲಿ ಆದಿವಾಸಿಗಳಿಗೆ ಸರ್ಕಾರ ಸಮುದಾಯ ಭವನವನ್ನು ನಿರ್ಮಾಣ ಮಾಡಿಕೊಡಬೇಕು. ಬಸವನಹಳ್ಳಿಯಲ್ಲಿ ಸ್ಮಶಾನದ ಜಾಗದ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ತಡೆಗೋಡೆ ನಿರ್ಮಾಣ ಮಾಡಬೇಕು. ಜೇನುಕುರುಬರ ಮಕ್ಕಳು ಪದವಿ ಮುಗಿಸಿ ಯಾವುದೇ ಕೆಲಸಗಳಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಅವರುಗಳಿಗೆ ಉದ್ಯೋಗ ನೀಡಬೇಕು.

ಅರಣ್ಯ ಹಕ್ಕು ಪ್ರಕಾರ ಆದಿವಾಸಿಗಳಿಗೆ 10 ಎಕ್ರೆ ಜಾಗವನ್ನು ಕೇಂದ್ರ ಸರಕಾರ ಮಂಜೂರಾತಿ ಮಾಡಿತ್ತು. ಆದರೆ ಅಧಿಕಾರಿಗಳು ಜಾಗಕ್ಕೆ ಸರಿಯಾಗಿ ಹಕ್ಕುಪತ್ರ ನೀಡದೇ ತಾರತಮ್ಯ ಮಾಡಿದ್ದಾರೆ. ಅಲ್ಲದೇ ಈವರೆಗೂ ಕೃಷಿ ಭೂಮಿಯನ್ನು ನೀಡಿರುವುದಿಲ್ಲ. ಹಕ್ಕುಪತ್ರದಲ್ಲಿ ಕೃಷಿ ಭೂಮಿ ಎಂದು ನೋಂದಾಯಿಸಿ ರುವುದಿಲ್ಲ. ಈ ಸಮಸ್ಯೆ ಪರಿಹಾರವಾಗಬೇಕು.

ತಲತಲಾಂತರಗಳಿಂದ ಅರಣ್ಯ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುವ ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸುವುದನ್ನು ತಡೆಗಟ್ಟಬೇಕು. ಸರ್ಕಾರದ ವತಿಯಿಂದ ತೆಗೆದಿರುವ ಗಂಗಾಕಲ್ಯಾಣ ಯೋಜನೆಯ ಕೊಳವೆ ಬಾವಿಗಳು ನಿರ್ವಹಣೆ ಇಲ್ಲದೇ ಹಾಗೂ ಪೈಪುಗಳನ್ನು ಇಳಿಸದೇ ತುಕ್ಕು ಹಿಡಿದು ನಿಷ್ಪ್ರಯೋಜಕವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

ಆದಿವಾಸಿಗಳಿಗೆ ನೀಡುವ ಪೌಷ್ಠಿಕ ಆಹಾರವನ್ನು ಐ.ಟಿ.ಡಿ.ಪಿ. ಇಲಾಖೆಯವರು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ. ಆದಿವಾಸಿ ಕುಟುಂಬಗಳಿಗೆ ಸಮರ್ಪಕವಾದ ಆಧಾರ್ ಕಾರ್ಡ್, ಪಡಿತರ ಚೀಟಿ ಇನ್ನಿತರ ದಾಖಲೆಗಳು ಇಲ್ಲದೇ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ಆದಿವಾಸಿಗಳು ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕು.

2016 ರಲ್ಲಿ ದಿಡ್ಡಳ್ಳಿಯಲ್ಲಿ ಆದಿವಾಸಿಗಳಿಗೆ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಒತ್ತಾಯಿಸಿ ನಡೆಸಿದ ಹೋರಾಟದ ಸಂದರ್ಭದಲ್ಲಿ ಆದಿವಾಸಿಗಳ ವಿರುದ್ಧ ಪೊಲೀಸ್ ಇಲಾಖೆಯು ಹಾಗೂ ಅರಣ್ಯ ಇಲಾಖೆಯು ಹೂಡಿರುವ ಮೊಕದ್ದಮೆಗಳನ್ನು ಹಿಂಪಡೆಯಲು ಮುಖ್ಯಮಂತ್ರಿಗಳ ಹಾಗೂ ಸಂಬಂಧಪಟ್ಟ ಗೃಹ ಸಚಿವರ ಗಮನ ಸೆಳೆಯಬೇಕೆಂದು ಎಂಬಿತ್ಯಾದಿ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭ ಆದಿವಾಸಿ ಮುಖಂಡರುಗಳಾದ ಸ್ವಾಮಿಯಪ್ಪ, ಪ್ರಕಾಶ, ಗಣೇಶ, ಪೇರಾ, ಬಸಪ್ಪ ಹಾಜರಿದ್ದರು.