ಮಡಿಕೇರಿ. ಮಾ.11 : ಶನಿವಾರಸಂತೆ ಸಮೀಪದ ಗುಡುಗಳಲೆಯ ಇತಿಹಾಸ ಪ್ರಸಿದ್ಧ ಹಝ್ರತ್ ಫಖೀರ್ ಷಾಹ್ ವಲಿಯುಲ್ಲಾಹಿ ಉರೂಸ್ ಸಮಾರಂಭ ತಾ. 12 ರಿಂದ 15ರ ವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಗುಡುಗಳಲೆ ಬದ್ರಿಯಾ ಜುಮಾ ಮಸೀದಿ ಖತೀಬರಾದ ಕೆ.ಎಂ. ಹಸೈನಾರ್ ಫೈಝಿ, ಮಾ. 12 ರಂದು ರಾತ್ರಿ 8 ಗಂಟೆಗೆ ಖತ್‍ಮುಲ್ ಖುರ್‍ಆನ್ ದುಆ ಹಾಗೂ ಸ್ವಲಾತ್ ಮಜ್‍ಲಿಸ್ ನಡೆಯಲಿದ್ದು, ಇದರ ನೇತೃತ್ವವನ್ನು ಕೇರಳದ ಪಟ್ಟಾಂಬಿಯ ಅಸ್ಸಯ್ಯಿದ್ ಹುಸೈನ್ ತಂಙಳ್ ಅಝ್‍ಹರಿ ಅಲ್ ಹೈದರೂಸಿ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಗುಡುಗಳಲೆ ಬದ್ರಿಯಾ ಮಸೀದಿ ಖತೀಬರಾದ ಹಸೈನಾರ್ ಫೈಝಿ ಚಾಲನೆ ನೀಡಲಿದ್ದು, ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಎಸ್.ಎ. ಅಬ್ದುಲ್ ಖಾದರ್ ವಹಿಸಲಿದ್ದಾರೆಂದರು.
ತಾ. 13 ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ಸಅದಾಫ್ ಅಲ್ ಅಸ್‍ಅದಿ ಹಾಗೂ ಮಿಹ್‍ರಾಜುದ್ದೀನ್ ರಝಾಖಾದ್ರಿ ಅಲ್ ಅಸ್‍ಅದಿ ಅವರ ನೇತೃತ್ವದಲ್ಲಿ ‘ಇಶಲ್ ನೈಟ್’ ಎನ್ನುವ ಕಾರ್ಯಕ್ರಮ ನಡೆಯಲಿದೆ. ಅಂದು ರಾತ್ರಿ 8 ಗಂಟೆಗೆ ಕಿಲ್ಲೂರಿನ ಅಬ್ದುಲ್ ಹಮೀದ್ ಫೈಝಿ ಅವರು ‘ಆಧುನಿಕತೆ ಮತ್ತು ಮುಸ್ಲಿಂ ಸಮೂಹ’ ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ನೀಡಲಿದ್ದಾರೆಂದರು.
ತಾ. 14 ರಂದು ರಾತ್ರಿ 8 ಗಂಟೆಗೆ ಕಾಸರಗೋಡಿನ ಯು.ಕೆ. ಮುಹಮ್ಮದ್ ಹನೀಫ್ ನಿಝಾಮಿ ಅವರು ‘ಸಂತುಷ್ಟ ಕುಟುಂಬ’ ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ನೀಡಲಿದ್ದಾರೆಂದು ತಿಳಿಸಿದರು.
ತಾ. 15 ರಂದು ಬೆಳಿಗ್ಗೆ 8 ಗಂಟೆಯಿಂದ ಉರೂಸ್ ಸಮಾರಂಭ ನಡೆಯಲಿದ್ದು, ಅಪರಾಹ್ನ 11.30ಕ್ಕೆ ‘ಮೌಲಿದ್ ಪಾರಾಯಣ’ದ ನಂತರ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಹಾಗೂ ಕಾರ್ಯಕ್ರವನ್ನು ನೇರವಾಗಿ ವೀಕ್ಷಿಸಲು ಎಲ್.ಸಿ.ಡಿ. ಸೌಲಭ್ಯವನ್ನು ಏರ್ಪಡಿಸಲಾಗಿದೆ ಹಾಗೂ ಉರೂಸ್‍ನ ಎಲ್ಲಾ ದಿನಗಳಂದು ಬದ್‍ರಿಯಾ ದಫ್ ಸಂಘದಿಂದ ದಫ್ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿಯನ್ನಿತ್ತರು.
ಸುದ್ದಿಗೋಷ್ಠಿಯಲ್ಲಿ ಗೋಪಾಲಪುರ ಮದ್ರಸದ ಪ್ರಧಾನ ಅಧ್ಯಾಪಕ ಕೆ.ಎಸ್.ಹಸೈನಾರ್ ಮುಸ್ಲಿಯಾರ್, ಚಿಕ್ಕಕೊಳತ್ತೂರು ಮದ್ರಸದ ಅಧ್ಯಾಪಕ ಈ.ಪಿ.ಮುಸ್ತಫ ಮುಸ್ಲಿಯಾರ್, ಗುಡುಗಳಲೆ ಬದ್ರಿಯಾ ಮಸೀದಿ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಶೇಖಬ್ಬ ಹಾಜಿ ಹಾಗೂ ಆಡಳಿತ ಮಂಡಳಿ ಸದಸ್ಯ ಶೇಖಬ್ಬ ಹಾಜಿ (ಚೆರಿಯಾಕ) ಉಪಸ್ಥಿತರಿದ್ದರು.