ಪೊನ್ನಂಪೇಟೆ, ಮಾ. 9: ಪೊನ್ನಂಪೇಟೆ ನೂತನ ತಾಲೂಕಿಗಾಗಿ 71 ದಿನಗಳ ಕಾಲ ನಿರಂತರವಾಗಿ ಪೊನ್ನಂಪೇಟೆ ಗಾಂಧಿ ಪ್ರತಿಮೆಯ ಎದುರು ಪೊನ್ನಂಪೇಟೆ ನಾಗರಿಕ ಹೋರಾಟ ಸಮಿತಿ, ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿಯ ಸಹಯೋಗದಲ್ಲಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ವಿವಿದ ಸಂಘ ಸಂಸ್ಥೆಗಳು ಹಾಗೂ ಚುನಾಯಿತ ಪ್ರತಿನಿಧಿಗಳು ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿರುವ ಹಿನ್ನೆಲೆಯಲ್ಲಿ ಇಂದು ಪೊನ್ನಂಪೇಟೆ ನಾಗರಿಕ ಹೋರಾಟ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿಯ ಸದಸ್ಯರುಗಳು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸಲ್ಲಿಸಿ ಸಿಹಿ ಹಂಚಿದರು.

ಈ ಸಂದರ್ಭ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮೂಕಳೇರ ಸುಮಿತ ಗಣೇಶ್, ಪಿಡಿಒ ಆರ್.ಜೆ. ಪುಟ್ಟರಾಜು, ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ, ಚೆಪ್ಪುಡಿರ ಪೊನ್ನಪ್ಪ, ಆಲಿರ ಎರ್ಮು ಹಾಜಿ, ಕಾಳಿಮಡ ನಂಜಪ್ಪ, ಮಾಣಿಪಂಡ ದೇವಯ್ಯ, ಕೊಟ್ಟಂಗಡ ಜೋಯಪ್ಪ, ಹಾಗೂ ಸಮಿತಿಯ ಕಾನೂನು ಸಲಹೆಗಾರ ಮತ್ರಂಡ ಪಿ. ಅಪ್ಪಚ್ಚು ಮತ್ತಿತರರು ಭಾಗವಹಿಸಿದ್ದರು.

ತಾಲೂಕು ಅಸ್ತಿತ್ವದ ಬಗ್ಗೆ ತಾ. 14 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಹೋರಾಟ ಸಮಿತಿಯ ಸರ್ವ ಸದಸ್ಯರುಗಳ ಸಭೆಯು ಪೊನ್ನಂಪೇಟೆ ಕೊಡವ ಸಮಾಜದ ರಿಕ್ರಿಯೇಷನ್ ಕ್ಲಬ್‍ನ ಸಭಾಂಗಣದಲ್ಲಿ ನಡೆಯಲಿದೆ.