ಸೋಮವಾರಪೇಟೆ, ಮಾ. 9: ಸೋಮವಾರಪೇಟೆಯಲ್ಲಿ ಅಗ್ನಿ ಶಾಮಕ ದಳದ ಘಟಕ ಸ್ಥಾಪನೆಗೆ ಸರ್ಕಾರದಿಂದ ಬಂದಿದ್ದ 1.54 ಕೋಟಿ ಅನುದಾನವು ಇಚ್ಛಾಶಕ್ತಿಯ ಕೊರತೆಯಿಂದ ವಾಪಸ್ ಆಗಿರುವ ಬಗ್ಗೆ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಹೆಚ್ಚಿನ ಅರಣ್ಯ ಮತ್ತು ಪರಿಸರವನ್ನು ಹೊಂದಿರುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಅಗ್ನಿಶಾಮಕ ದಳದ ಅಗತ್ಯತೆ ಹೆಚ್ಚಿದ್ದು, ಇದೀಗ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಾರ್ಷಿಕ ಲಕ್ಷಾಂತರ ರೂಪಾಯಿ ಬಾಡಿಗೆ ವ್ಯಯಿಸಲಾಗುತ್ತಿದೆ. ಆದರೆ ಕಟ್ಟಡಕ್ಕೆ ಸರ್ಕಾರ ನೀಡಿದ್ದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ವಾಪಸ್ ಹೋಗುವಂತೆ ಮಾಡ ಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಅನುದಾನವನ್ನು ವಾಪಸ್ ತರಿಸಲು ಕ್ರಮ ಕೈಗೊಳ್ಳ ಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಕಳೆದ 2011ರಿಂದ ಬಾಡಿಗೆ ಕಟ್ಟಡದಲ್ಲಿ ಅಗ್ನಿಶಾಮಕ ಠಾಣೆ ಕಾರ್ಯಾಚರಿಸುತ್ತಿದ್ದು, 2015ರಲ್ಲಿ ಸರ್ಕಾರದಿಂದ 1.54 ಕೋಟಿ ಅನುದಾನ ಬಿಡುಗಡೆಯಾಗಿ ಕಟ್ಟಡ ಮತ್ತು ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿತ್ತು. ಆರ್‍ಎಂಸಿ ಮಾರುಕಟ್ಟೆ ಆವರಣದ ಸಮೀಪ ಜಾಗವನ್ನೂ ಗುರುತಿಸಲಾಗಿತ್ತು. ಆದರೆ ಹಣ ಬಂದರೂ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಂಘಟನೆಯ ರಾಜಕೀಯ ವಿಭಾಗದ ರಾಜ್ಯ ಕಾರ್ಯದರ್ಶಿ ಎಂ.ಪಿ. ರಮೇಶ್ ದೂರಿದ್ದಾರೆ.
ಸೋಮವಾರಪೇಟೆಗೆ ಬಂದಿದ್ದ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಯೋಜನೆ ಅನುಷ್ಠಾನ ಗೊಳ್ಳದ ಹಿನ್ನೆಲೆ ವಾರ್ಷಿಕ ಲಕ್ಷಾಂತರ ರೂಪಾಯಿಯನ್ನು ಖಾಸಗಿ ಕಟ್ಟಡದ ಮಾಲೀಕರಿಗೆ ನೀಡಲಾಗುತ್ತಿದೆ. ಈ ಬಗ್ಗೆ ತಾವುಗಳು ಗಮನ ಹರಿಸ ಬೇಕೆಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ಉಲ್ಲೇಖಿಸಲಾಗಿದೆ.