ಗೋಣಿಕೊಪ್ಪಲು, ಮಾ. 9: ಗೋಣಿಕೊಪ್ಪ ಸಮೀಪದ ಹರಿಶ್ಚಂದ್ರಪುರದ ಕೆ.ಜೆ. ರಾಜಿತ್ ಎಂಬವರ ಬಾಳೆ ತೋಟಕ್ಕೆ ನಸುಕಿನಲ್ಲಿ ಧಾಳಿ ನಡೆಸಿದ ಕಾಡಾನೆ ಹಿಂಡು ಫಸಲಿಗೆ ಬಂದಿದ್ದ ನೂರಾರು ಬಾಳೆ ಗಿಡಗಳನ್ನು ಧ್ವಂಸಗೊಳಿಸಿದೆ. ಬಾಳೆ ಗಿಡಕ್ಕೆ ನೀರು ಹಾಯಿಸಲು ಇಟ್ಟಿದ್ದ ಸಿಲ್ವರ್ ಪೈಪ್‍ಗಳನ್ನು ಜಖಂಗೊಳಿಸಿ ತೋಟದಲ್ಲಿದ್ದ ಕೆಲವು ಕಾಫಿ ಗಿಡಗಳು ಸೇರಿದಂತೆ ಅಡಿಕೆ ಗಿಡಗಳನ್ನು ನಾಶಪಡಿಸಿವೆ.

ರಾತ್ರಿಯಿಡಿ ಕಾವಲುಗಾರರು ತೋಟವನ್ನು ಕಾದರೂ ಕೂಡ ಮುಂಜಾನೆ ವೇಳೆ ಮನೆಗೆ ತೆರಳಿದ ಸಂದರ್ಭ ಕಾಡಾನೆಯ ಹಿಂಡು ತೋಟಕ್ಕೆ ಲಗ್ಗೆ ಇಟ್ಟಿದೆ.ಕೂಡಲೇ ಕಾರ್ಮಿಕರು ಬಾಳೆ ತೋಟಕ್ಕೆ ತೆರಳಿ ಬೊಬ್ಬೆ ಹಾಕಿದಾಗ ಕಾಡಾನೆ ಹಿಂಡು ಸಮೀಪದ ಕಾಡಿನತ್ತ ಹೆಜ್ಜೆ ಹಾಕಿದೆ.

ಕಾಡಾನೆ ದಾಳಿಯಿಂದ ರೈತ ಕೆ.ಜೆ. ರಾಜಿತ್ ಕಂಗಾಲಾಗಿದ್ದು, ಅಪಾರ ನಷ್ಟ ಸಂಭವಿಸಿರುವುದಾಗಿ ತಿಳಿಸಿದ್ದಾರೆ. ತಿತಿಮತಿ ಅರಣ್ಯ ವಿಭಾಗದ ಆರ್‍ಎಫ್‍ಒ ಅಶೋಕ್ ಹುನಗುಂದ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದು ಕೂಡಲೇ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. -ಹೆಚ್.ಕೆ. ಜಗದೀಶ್