ಗೋಣಿಕೊಪ್ಪ ವರದಿ, ಮಾ. 9: ದೇಶಕ್ಕೆ ಬೇಕಿರುವ ಬಿದಿರು ಸಂಪನ್ಮೂಲ ಕೊರತೆ ನೀಗಿಸಲು ಕೃಷಿಕರು ಹೆಚ್ಚಾಗಿ ಬಿದಿರು ಕೃಷಿಗೆ ಮುಂದಾಗಬೇಕು ಎಂದರು ಅರಣ್ಯ ಇಲಾಖೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಹೇಳಿದರು.
ಇಲ್ಲಿನ ಅರಣ್ಯ ಮಹಾವಿದ್ಯಾಲಯದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ರಾಷ್ಟ್ರೀಯ ಬಿದಿರು ಮಿಷನ್ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬಿದಿರು ಸಂಪನ್ಮೂಲಗಳ ಬೇಸಾಯ ಹಾಗೂ ಬಳಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಬಿದಿರು ಕೃಷಿ 7.79 ಮಿಲಿಯನ್ ಹೆಕ್ಟೆರ್‍ಗೆ ಕುಸಿದಿದೆ. ಇದರಿಂದ ಹೆಚ್ಚಾಗಿ ಪೇಪರ್ ಮುದ್ರಣದಲ್ಲಿ ಕೊರತೆ ಕಾಡುತ್ತಿರುವುದರಿಂದ 3 ಮಿಲಿಯನ್ ಟನ್ ಪೇಪರ್ ಸಂಪನ್ಮೂಲ ಕೊರತೆ ಎದುರಿಸುತ್ತಿದ್ದೇವೆ. ಇದರಲ್ಲಿ ಸಮನ್ವಯ ಸಾಧಿಸಲು ಯತ್ನಿಸಬೇಕಿದೆ. 1.92 ಮಿಲಿಯನ್ ಟನ್ ಮಾತ್ರ ಪೂರೈಕೆಯಾಗುತ್ತಿರುವುದರಿಂದ ಬಿದಿರು ಬೆಳೆಗೆ ಹೆಚ್ಚಿನ ಆಧ್ಯತೆ ನೀಡಬೇಕಿದೆ.
2 ವರ್ಷದಲ್ಲಿ 2.2 ಲಕ್ಷ ಹೆಕ್ಟೇರ್ ಖಾಸಗಿ ಜಾಗದಲ್ಲಿ ಬಿದಿರು ಬೆಳೆಯಲು ಗುರಿ ಇಟ್ಟುಕೊಳ್ಳಲಾಗಿದೆ. ಬಿದಿರು ಬೆಳೆಗೆ ಸಿಗುತ್ತಿರುವ ಪ್ರೋತ್ಸಾಹವನ್ನು ಕೃಷಿಕರು ಸದ್ಭಳಕೆ ಮಾಡಿಕೊಂಡು ದೇಶಕ್ಕೆ ಬೇಕಿರುವ ಬಿದಿರು ಸಂಪನ್ಮೂಲ ಬೇಡಿಕೆ ಪೂರೈಸಲು ಕೈಜೋಡಿಸಬೇಕಿದೆ ಎಂದು ಅವರು ಹೇಳಿದರು.
ಮಡಿಕೇರಿ ಡಿಸಿಎಫ್ ಪ್ರಭಾಕರನ್ ಮಾತನಾಡಿ, ಕೊಡಗಿನ ಹವಾಗುಣಕ್ಕೆ ನೈಸರ್ಗಿಕವಾಗಿ ಬಿದಿರು ಹೆಚ್ಚು ಸೂಕ್ತವಾಗಿರುವುದರಿಂದ ಇದರ ಕೃಷಿಗೆ ಹೆಚ್ಚಿನ ಆಸಕ್ತಿ ತೋರಬೇಕು ಎಂದರು.
ನಿವೃತ್ತ ಕೃಷಿ ಅಧಿಕಾರಿ ಜೆ. ಕೆ. ವಸಂತಕುಮಾರ್ ಮಾತನಾಡಿ, ಕೃಷಿಯಲ್ಲಿನ ನಿರಾಸಕ್ತಿಯಿಂದ ಕೃಷಿಯಲ್ಲಿ ಹೆಚ್ಚು ಸವಾಲುಗಳನ್ನು ನಾವು ಎದುರಿಸುವ ಅನಿವಾರ್ಯತೆ ಬಂದೊದಗಿದೆ. ಹವಾಮಾನ ವೈಪರಿತ್ಯದಿಂದ ಸಸ್ಯ ಪ್ರಬೇಧ, ಪ್ರಾಣಿ ಸಂಕುಲಗಳ ನಾಶವಾಗುತ್ತಿದೆ. ಪರಿಣಾಮ ಬರ ಪರಿಸ್ಥಿತಿ ಎದುರಾಗುತ್ತಿದೆ. ಅರಣ್ಯ ನಾಶದಿಂದ ಬರಡು ಭೂಮಿ ಹೆಚ್ಚಾಗುತ್ತಿದ್ದು, ನಾವು ಎಚ್ಚೆತ್ತುಕೊಳ್ಳಬೇಕಿದೆ; ಜೀವರಾಶಿಗಳು ಉಳಿಯಬೇಕಾದರೆ ಬಿದಿರು ಕೃಷಿ ಹೆಚ್ಚು ಅವಶ್ಯ ಎಂದರು.
ಕಾಲೇಜು ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿ, ಬಿದಿರು ಮಿಷನ್ ವತಿಯಿಂದ ಸ್ಥಳೀಯವಾಗಿ 20 ಸಾವಿರ ಹೆಕ್ಟೆರ್‍ನಲ್ಲಿ ಬಿದಿರು ಬೆಳೆಯಲು ಗುರಿ ನೀಡಲಾಗಿದೆ. 100 ರೈತರಿಂದ ಅನುಷ್ಠಾನಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಪ್ರತಿ ಹೆಕ್ಟೇರ್‍ಗೆ 20 ಸಾವಿರ ಪ್ರೋತ್ಸಾಹ ಧನವನ್ನು ಹಂತ ಹಂತವಾಗಿ ನೀಡಲಾಗುತ್ತಿದೆ. ಮಾನವನ ಜೀವನಕ್ಕೆ ಬಿದಿರು ಹೆಚ್ಚು ಅನಿವಾರ್ಯ. ಇದನ್ನು ಮನಗಂಡು ಎಲ್ಲರೂ ಬಿದಿರು ಕೃಷಿಗೆ ಮುಂದಾಗಬೇಕು ಎಂದರು.
ಈ ಸಂದರ್ಭ ಬಿದಿರು ಕೃಷಿಕ ಸಿ. ಬಿ. ಸುಬ್ಬಯ್ಯ ಅವರಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ಬಿದಿರು ಕೃಷಿಯ ಪ್ರೋತ್ಸಾಹಕ್ಕೆ ಹೊರ ತಂದಿರುವ ‘ಬಿದಿರು ಹಸಿರು ಹೊನ್ನು’ ಎಂಬ ಪುಸ್ತಕವನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.
ವಿದ್ಯಾ ಪ್ರಾರ್ಥಿಸಿದರು. ಅಶೋಕ್ ಸ್ವಾಗತಿಸಿದರು. ಗಣೇಶ್ ವಂದಿಸಿದರು.