ಸಿದ್ದಾಪುರ, ಮಾ. 9: ಕೊಡಗು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸಿದ್ದಾಪುರದಲ್ಲಿ ಮಹಿಳಾ ಉದ್ಯೋಗಿಗಳ ಮಹಿಳಾ ಅಂಚೆ ಕಚೇರಿಗೆ ಸೋಮವಾರದಂದು ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಅಂಚೆ ಕಚೇರಿಯ ಉಪ ಅಂಚೆ ಅಧೀಕ್ಷಕರಾದ ದಯಾನಂದ ದೇವಾಡಿಗ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಉದ್ಯೋಗಿಗಳ ಅಂಚೆ ಕಚೇರಿಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಮಡಿಕೇರಿಯ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕರಾದ ಎಂ.ಕೆ. ಮೋಹನ್ ಮಾತನಾಡಿ ಮಹಿಳಾ ಪೊಲೀಸ್ ಠಾಣೆಗಳು ಇರುವ ರೀತಿಯಲ್ಲಿ ಮಹಿಳಾ ಅಂಚೆ ಕಚೇರಿಯನ್ನು ಪ್ರಾರಂಭಿಸಲಾಗಿದೆ ಎಂದರು.

ಸಿದ್ದಾಪುರದ ಅಂಚೆ ಪಾಲಕರಾದ ಗೀತಾ ಪ್ರಭಾ ಇನ್ನು ಮುಂದೆ ಮಹಿಳೆಯರಿಗೆ ಯಾವುದೇ ಸಂಕೋಚವಿಲ್ಲದೇ ಕಚೇರಿಗೆ ಆಗಮಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಸಿಬ್ಬಂದಿಗಳಾದ ಚೈತ್ರ, ಪವಿತ್ರ, ರವೀಂದ್ರ, ಮಂಜುನಾಥ್ ಇನ್ನಿತರರು ಹಾಜರಿದ್ದರು. ಚೈತ್ರ ಸ್ವಾಗತಿಸಿ, ಪವಿತ್ರಾ ಪ್ರಾರ್ಥಿಸಿ ವಂದಿಸಿದರು.