ಸೋಮವಾರಪೇಟೆ, ಮಾ. 9: ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘಕ್ಕೆ 50 ವರ್ಷಗಳು ತುಂಬಿದ್ದು, ಸುವರ್ಣ ಸಂಭ್ರಮದಲ್ಲಿರುವ ಸಂಘದ ವತಿಯಿಂದ ರೂ. 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುವರ್ಣ ಸೌಧದ ಉದ್ಘಾಟನಾ ಸಮಾರಂಭ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮ ಏ. 13ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1968ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಕೆ.ಎಸ್. ಮಲ್ಲೇಗೌಡ ಅವರು 250 ರೂಪಾಯಿ ದೇಣಿಗೆ ನೀಡಿ ಪ್ರೋತ್ಸಾಹಿಸಿದ ಹಿನ್ನೆಲೆ ಪ್ರಾರಂಭವಾದ ಸಂಘವು ಇಂದು ಸ್ವಂತ ಸಮುದಾಯ ಭವನ, ಶಾಲೆ-ಕಾಲೇಜು ಕಟ್ಟಡವನ್ನು ಹೊಂದಿದೆ ಎಂದರು.
ಏ. 13ರಂದು 10 ಗಂಟೆಗೆ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಸಂಸದ ಪ್ರತಾಪ್ ಸಿಂಹ ಅವರು ಸುವರ್ಣ ದ್ವಾರವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಉದ್ಯಮಿಗಳಾದ ರಾಮಚಂದ್ರ ಅವರು ಸುವರ್ಣ ಸೌಧವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರು ಮತ್ತು ದಾನಿಗಳನ್ನು ಸನ್ಮಾನಿಸಲಾಗುವದು ಎಂದು ಮಾಹಿತಿ ನೀಡಿದರು. ಸ್ಮರಣ ಸಂಚಿಕೆಗೆ ಲೇಖನ ಆಹ್ವಾನ: ಸುವರ್ಣ ಮಹೋತ್ಸವದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರತರಲು ತೀರ್ಮಾನಿಸಲಾಗಿದ್ದು, ಜಿಲ್ಲೆಯ ಲೇಖಕರು, ಕವಿಗಳಿಂದ ಕವನ, ಲೇಖನ, ಕಥೆಗಳನ್ನು ಆಹ್ವಾನಿಸಲಾಗಿದೆ. ಬರಹಗಾರರು ಮಾ. 25ರೊಳಗೆ ಸಂಘದ ಕಚೇರಿಗೆ ಲೇಖನಗಳನ್ನು ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ಮೊ: 9480499671, 9480394232 ಸಂಖ್ಯೆಗಳನ್ನು ಸಂಪಕಿಸಬಹುದು ಎಂದರು.
ಕ್ರೀಡಾಕೂಟ: ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಸಮುದಾಯ ಬಾಂಧವರಿಗೆ ತಾ. 28ರಂದು ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಆವರಣದಲ್ಲಿ ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಗುವದು. ಮಹಿಳೆಯರು ಮತ್ತು ಪುರುಷರ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಿ, ಸುವರ್ಣ ಮಹೋತ್ಸವ ದಿನದಂದು ಬಹುಮಾನ ವಿತರಿಸಲಾಗುವದು ಎಂದು ಮುತ್ತಣ್ಣ ಮಾಹಿತಿ ನೀಡಿದರು.