ಸೋಮವಾರಪೇಟೆ, ಮಾ.8: ಕಾಲೇಜಿನ ಅವಧಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಟ್ಟು, ಮುಂದಿನ ಗುರಿಯೊಂದಿಗೆ ಮುನ್ನಡೆದಲ್ಲಿ ಮಾತ್ರ ಸಾಧನೆ ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಹೇಳಿದರು.

ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಖಾತ್ರಿ ಕೋಶ ಮತ್ತು ಇತಿಹಾಸ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಪಿರಿಯಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ದೇವರಾಜ್ ಮಾತನಾಡಿ, ಇತಿಹಾಸ ಒಂದು ದಾಖಲೆಯಾಗಿದ್ದು, ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಇತಿಹಾಸದ ಕಲಿಕೆ ಅವಶ್ಯಕತೆಯಿದೆ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಜು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ದಯಾನಂದ, ಇತಿಹಾಸ ಸಂಘದ ಅಧ್ಯಕ್ಷ ಉಪನ್ಯಾಸಕ ಎಂ.ಎಸ್ ಸುನಿಲ್, ಸಂಚಾಲಕಿ ರಚನ ಉಪಸ್ಥಿತರಿದ್ದರು.

ಮೊದಲ ಅಧಿವೇಶನದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಪಾತ್ರ ವಿಷಯದ ಕುರಿತು ಮಡಿಕೇರಿ ಎಫ್‍ಎಂಸಿ ಇತಿಹಾಸ ವಿಭಾಗದ ಮೇಜರ್ ಡಾ|| ರಾಘವ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಕೊಣನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಕಾಶ್ ಪಾಲ್ಗೊಂಡಿದ್ದರು.

ನಂತರ ನಡೆದ ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ಕಾಲೇಜಿನ ಇಂಗ್ಲೀಷ್ ವಿಭಾಗದ ಸಂಚಾಲಕರಾದ ಎಂ.ಎಸ್. ಶಿವಮೂರ್ತಿ ವಹಿಸಿದ್ದರು. ಸಾಮಾಜಿಕ ಮೌಲ್ಯಗಳು, ಸರ್ವಕಾಲಿಕತೆ ವಿಷಯದ ಬಗ್ಗೆ ಚಿಕ್ಕ ಅಳುವಾರ ಸ್ನಾತಕೋತ್ತರ ವಿಭಾಗದ ಕನ್ನಡ ಉಪನ್ಯಾಸಕರಾದ ಜಮೀರ್ ಅಹಮದ್ ಉಪನ್ಯಾಸ ನೀಡಿದರು. ‘ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೇ?’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ನಡೆಯಿತು.