ಮಡಿಕೇರಿ, ಮಾ. 8: ಕೊಡವ ಮಕ್ಕಡ ಕೂಟ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ 5 ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆಯಿತು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಚರಣಿಯಂಡ ಪಿ ಅಪ್ಪಣ್ಣ ಹಾಗೂ ಬಾಚರಣಿಯಂಡ ರಾಣು ಅಪ್ಪಣ್ಣ ಬರೆದಿರುವ ಪಾಂಚಜನ್ಯ ಹಾಗೂ ಆಂಜಮುತ್ತ್, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪರ ವೀರಚಕ್ರ ಹಾಗೂ ಮೋಹ ಪಾಶ, ಮೂಕೋಂಡ ನಿತಿನ್ ಕುಶಾಲಪ್ಪ, ಐತಿಚಂಡ ರಮೇಶ್ ಉತ್ತಪ್ಪ ಬರೆದಿರುವ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ ಎಂಬ ಕನ್ನಡ ಪುಸ್ತಕವನ್ನು ಇಂಗ್ಲೀಷ್‍ಗೆ (ದಿ ಗಾಂಧಿ ಆಫ್ ಕೊಡಗು) ಅನುವಾದ ಮಾಡಿರುವ ಪುಸ್ತಕ ಬಿಡುಗಡೆ ಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಮೇರಿಯಂಡ ಸಿ ನಾಣಯ್ಯ ಪಾಲ್ಗೊಂಡು ಮಾತನಾಡಿ, ಕೊಡವ ಭಾಷೆಯ ಬಗ್ಗೆ ಎಲ್ಲರಿಗೂ ಅಭಿಮಾನವಿದೆ. ಬುದ್ಧಿವಂತಿಗೆ ಯಾರ ಗುತ್ತಿಗೆಯೂ ಅಲ್ಲ. ಎಲ್ಲ ಮಕ್ಕಳಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಅದಕ್ಕೆ ಅವಕಾಶವೂ ಇರುತ್ತದೆ. ಆದರೆ ಕೆಲ ಮಕ್ಕಳು ಮಾತ್ರ ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾ ನಿಲಯದ ಇತಿಹಾಸ ವಿಭಾಗದ ಪ್ರೋ. ಕೋಡಿರ ಲೋಕೇಶ್ ಮೊಣ್ಣಪ್ಪ ಮಾತನಾಡಿ, ಹಿಂದೆ ಕೊಡಗಿನಲ್ಲಿ ಸಾಹಿತ್ಯದ ಚಟುವಟಿಕೆ ಬರಡು ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಇಂದು ಕೊಡಗಿನಲ್ಲಿಯೂ ಸಾಹಿತ್ಯ ಕೃಷಿ ಉತ್ತಮವಾಗಿದೆ. ಇತಿಹಾಸದ ಘಟನೆಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುತ್ತಾ ಹೋದಾಗ ನಮ್ಮ ಚರಿತ್ರೆಯೂ ಉಳಿಯುತ್ತದೆ ಎಂದರು.
ಮಡಿಕೇರಿ ಕೊಡವ ಸಮಾಜದ ಮಾಜಿ ಉಪಾಧ್ಯಕ್ಷ ಹಾಗೂ ಕೂರ್ಗ್ ಎಜುಕೇಷನ್ ಟ್ರಸ್ಟ್ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಲಿಟಿ ಸೈನ್ಸ್‍ನ ಅಧ್ಯಕ್ಷ ಮಂಡೇಪಂಡ ರತನ್ ಕುಟ್ಟಯ್ಯ ಮಾತನಾಡಿದರು. ಸಾಹಿತಿ ಬಾಚರಣಿಯಂಡ ಪಿ ಅಪ್ಪಣ್ಣ ಕೊಡವರು ಮತ್ತು ಕೋವಿ ಎಂಬ ಕವನವನ್ನು ಓದಿ, ಕೊಡವರÀ ಇತಿಹಾಸದ ಬಗ್ಗೆ ಮಾತನಾಡಿದರು. ಬರಹಗಾರ, ನಿರ್ದೇಶಕ, ನಿರ್ಮಾಪಕ, ನಟ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಾವು ಸಾಧನೆಯ ಹಾದಿಯಲ್ಲಿ ಮುನ್ನುಗುತ್ತಿದ್ದರೆ, ಸಮಾಜವೂ ನಮ್ಮ ಜೊತೆಗಿರುತ್ತದೆ ಎಂದರು. ಬರಹಗಾರ ಮೂಕೋಂಡ ನಿತಿನ್ ಕುಶಾಲಪ್ಪ ಮಾತನಾಡಿದರು.
ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದ ವತಿಯಿಂದ ಕಳೆದ ಏಳು ವರ್ಷಗಳಿಂದ ಮಕ್ಕಳಿಗಾಗಿ ಆಟ್‍ಪಾಟ್ ಪಡಿಪು ಕಾರ್ಯಕ್ರಮ, 5 ವರ್ಷದಿಂದ ಮಕ್ಕಳಿಗಾಗಿ ಮಕ್ಕಡ ನಮ್ಮೆ, ಹಲವು ಯುವ ಸಾಧಕರಿಗೆ ಸನ್ಮಾನ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳನ್ನು ಮಾಡುವದರ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಿದೆ. ಈವರೆಗೆ 41 ಪುಸ್ತಕ ಬಿಡುಗಡೆ ಮಾಡಿದ್ದು, ಇದರಲ್ಲಿ 20 ಕೊಡವ ಭಾಷೆಯ ಪುಸ್ತಕ, 15 ಕನ್ನಡ ಭಾಷೆಯ ಪುಸ್ತಕ, 5 ಇಂಗ್ಲೀóಷ್ ಹಾಗೂ ಹಿಂದಿ ಭಾಷೆಯಲ್ಲಿ 1 ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಸಾಹಿತಿ ಹಾಗೂ ವೀರಾಜಪೇಟೆ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಮಕ್ಕಡ ಕೂಟದ ಉಪಾಧ್ಯಕ್ಷ ಬಾಳೆಯಡ ಪ್ರತೀಶ್ ಪೂವಯ್ಯ, ಪೊಮ್ಮಕ್ಕಡ ಕೂಟ ಹಾಗೂ ಮಕ್ಕಡ ಕೂಟದ ಪದಾಧಿಕಾರಿಗಳು ಹಾಜರಿದ್ದರು. ಬೊಟ್ಟೋಳಂಡ ನಿವ್ಯ ದೇವಯ್ಯ ಪ್ರಾರ್ಥಿಸಿದರು. ಬಾಳೆಯಡ ದಿವ್ಯ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು.