ಮಡಿಕೇರಿ, ಮಾ. 7: ಅರಣ್ಯ ಇಲಾಖೆಯ ಗ್ರೂಪ್ ಎ, ಬಿ ಮತ್ತು ಸಿ ವೃಂದದ ಹುದ್ದೆಗಳಿಗೆ ಬಿಎಸ್ಸಿ ಅರಣ್ಯ ಶಾಸ್ತ್ರವನ್ನು ಕನಿಷ್ಟ ವಿದ್ಯಾರ್ಹತೆಯನ್ನಾಗಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ಅರಣ್ಯ ಪದವೀಧರರು ಮತ್ತು ವಿದ್ಯಾರ್ಥಿ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಸಂಘದ ಪದಾಧಿಕಾರಿಗಳು ಮತ್ತು ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ನಗರದ ಗಾಂಧಿ ಮೈದಾನದಿಂದ ಘೋಷಣೆ ಗಳ ಸಹಿತ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ಮೂಲಕ ಸಾಗಿ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಎಂ. ಸಂಜಯ್ ಮಾತನಾಡಿ, ಅರಣ್ಯ ಶಾಸ್ತ್ರದಲ್ಲಿ ನಾಲ್ಕು ವರ್ಷಗಳ ಕಾರ್ಯ ನಿರ್ವಹಿಸಲು ಶೇ. 100 ರಷ್ಟು ಮೀಸಲಾತಿ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ, ಕಳೆದ 20ರ ಕರ್ನಾಟಕ ರಾಜ್ಯ ಪತ್ರದ ವರದಿ ಪ್ರಕಾರ ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಅರಣ್ಯ ಪದವೀಧರರಿಗೆ ಮೊದಲು ನೀಡಿದ್ದ ಶೇ. 75 ರಷ್ಟು ಮೀಸಲಾತಿಯನ್ನು ಶೇ. 50ಕ್ಕೆ ಕಡಿತಗೊಳಿಸಲಾಗಿದ್ದು, ಅದನ್ನು ಕೂಡಲೇ ಶೇ. 100ಕ್ಕೆ ಏರಿಸಬೇಕು. ಅರಣ್ಯ ಪದವೀಧರರಿಗೆ ನೀಡಿರುವ ಮೀಸಲಾತಿಯನ್ನು ಹಿಂಪಡೆಯಲು ಮಾಡಿರುವ ನಿರ್ಧಾರವನ್ನು ಕೈಬಿಡಬೇಕು ಮತ್ತು ಅರಣ್ಯ ಇಲಾಖೆಯ ಗ್ರೂಪ್ ಎ, ಬಿ ಮತ್ತು ಸಿ ವೃಂದರ ಹುದ್ದೆಗಳಿಗೆ ಬಿಎಸ್ಸಿ ಅರಣ್ಯ ಶಾಸ್ತ್ರವನ್ನು ಕನಿಷ್ಟ ವಿದ್ಯಾರ್ಹತೆಯನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ಸಂಘದ ಸದಸ್ಯೆ ಆರ್.ವಿ. ಸೌಂದರ್ಯ ಮಾತನಾಡಿ, ಅರಣ್ಯ ಪದವೀಧರರು ತಮ್ಮ ತಾಂತ್ರಿಕ ಜ್ಞಾನವನ್ನು ಉಪಯೋಗಿಸಿಕೊಂಡು ಅರಣ್ಯದ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸಲು ಉತ್ತಮ ಅವಕಾಶವಿದೆ. ಆದರೆ, ಬದಲಾದ ಸನ್ನಿವೇಶದಲ್ಲಿ ಇದನ್ನು ಸಹಿಸದ ಕೆಲವು ಕಾಣದ ಕೈಗಳು ತಮ್ಮ ಪ್ರಭಾವದಿಂದ ನಮ್ಮ ಮೀಸಲಾತಿಯನ್ನು ಕಸಿದುಕೊಂಡಿವೆ. ಅರಣ್ಯ ಇಲಾಖಾ ಹುದ್ದೆಗಳ ನೇಮಕಾತಿಯಲ್ಲಿ ಸರಕಾರದ ಮೂಲಕವೇ ಮೀಸಲಾತಿ ಪಡೆದಿದ್ದೆವು. ಇದೀಗ ಸರಕಾರವೇ ನಮ್ಮ ಮೀಸಲಾತಿಯ ಹಕ್ಕನ್ನು ಕಸಿದುಕೊಂಡಿರುವುದು ವಿಪರ್ಯಾಸ ಎಂದರು.
ಇತರ ರಾಜ್ಯಗಳಾದ ತಮಿಳುನಾಡು ಮತ್ತು ಜಮ್ಮು ಕಾಶ್ಮೀರದಲ್ಲಿ ಅರಣ್ಯ ಇಲಾಖೆಯ ನೇರ ನೇಮಕಾತಿಯಲ್ಲಿ ಅರಣ್ಯ ಪದವಿಯನ್ನೆ ಕನಿಷ್ಟ ವಿದ್ಯಾರ್ಹತೆಯನ್ನಾಗಿ ಕಡ್ಡಾಯಗೊಳಿಸಲಾಗಿದೆ. ಅದರಂತೆ ಕರ್ನಾಟಕದಲ್ಲೂ ಅರಣ್ಯ ಇಲಾಖೆಯ ಗ್ರೂಪ್ ಎ, ಬಿ ಮತ್ತು ಸಿ ವೃಂದದ ಹುದ್ದೆಗಳಿಗೆ ಬಿಎಸ್ಸಿ ಅರಣ್ಯ ಶಾಸ್ತ್ರವನ್ನು ಕನಿಷ್ಟ ವಿದ್ಯಾರ್ಹತೆಯನ್ನಾಗಿ ಮಾಡಿ ಅರಣ್ಯ ಶಾಸ್ತ್ರ ಪದವೀಧರರಿಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಎಂ. ಸಿದ್ದಾರ್ಥ್, ಸಹ ಕಾರ್ಯದರ್ಶಿ ಎಸ್. ಶ್ವೇತಾ, ಸದಸ್ಯರಾದ ಸಿ. ಮನೋಜ್, ಹೆಚ್.ಎನ್. ರಾಕೇಶ್, ಕೆ.ಎಸ್. ಸಚಿನ್ ಕುಮಾರ್, ಎಂ.ಎಸ್. ರೋಹನ್, ಭುವನ, ಸುಪ್ರೀತ ಸೇರಿದಂತೆ ಹಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.