ಮಡಿಕೇರಿ, ಮಾ. 7: ನಗರದ ಅಗ್ನಿಶಾಮಕ ಠಾಣೆಗೆ ತೆರಳುವ ಮಾರ್ಗ ಬದಿ ನಿಸರ್ಗ ಬಡಾವಣೆಯಲ್ಲಿ ತೆರೆದ ಬಾವಿಯೊಂದು ಅಪಾಯವನ್ನು ಆಹ್ವಾನಿಸುತ್ತಿದ್ದು; ನಗರಸಭೆ ಇತ್ತ ಗಮನ ಹರಿಸಿ ಸೂಕ್ತ ಕಾಯಕಲ್ಪ ನೀಡುವಂತೆ ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಈ ಅಪಾಯಕಾರಿ ಬಾವಿಯಲ್ಲಿ ಕರುವೊಂದು ಬಿದ್ದು; ಸಕಾಲದಲ್ಲಿ ಅಕ್ಕ ಪಕ್ಕ ನಿವಾಸಿಗಳು ಅಗ್ನಿ ಶಾಮಕ ಠಾಣೆ ಹಾಗೂ ಕಟ್ಟಡ ಕಾರ್ಮಿಕರ ನೆರವಿನಿಂದ ರಕ್ಷಿಸಿದ್ದಾರೆ. ಇಂತಹ ಪ್ರಸಂಗಗಳು ಪದೇ ಪದೇ ಸಂಭವಿಸುತ್ತಿದ್ದು; ಸುಮಾರು 20 ಅಡಿ ನೀರಿರುವ ಈ ಬಾವಿಗೆ ತಡೆಗಟ್ಟೆ ಇಲ್ಲದಿರುವದು ಅಪಾಯಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸಿ ದ್ದಾರೆ. ಅಲ್ಲದೆ ನಗರಸಭೆ ತುರ್ತು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.