ಕಣಿವೆ, ಮಾ. 7: ಕುಶಾಲನಗರದ ಮಾರುಕಟ್ಟೆ ರಸ್ತೆಯ ಬದಿಯಲ್ಲಿ ಕುಶಾಲನಗರ ಹೊರ ವಲಯದಲ್ಲಿರುವ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ರಾತ್ರೋ ರಾತ್ರಿ ತಂದು ಬಿಸಾಕುತ್ತಿದ್ದು ಅಂತಹವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕುಶಾಲನಗರದ ಪೌರ ಕಾರ್ಮಿಕರು ಆಗ್ರಹಿಸಿದ್ದಾರೆ. ಪ್ರತೀ ದಿನ ನಾವು ಮಾರುಕಟ್ಟೆ ರಸ್ತೆಯ ಬದಿಯಲ್ಲಿ ಸ್ವಚ್ಛ ಮಾಡಿ ತೆರಳಿದ ನಂತರ ತಡರಾತ್ರಿ ನೆರೆಯ ಮಾದಾಪಟ್ಟಣ, ಮುಳ್ಳುಸೋಗೆ ಮತ್ತಿತರ ಕಡೆಗಳಲ್ಲಿ ಇರುವ ಮೀನು ಮಾಂಸದ ಅಂಗಡಿಗಳವರು ತ್ಯಾಜ್ಯವನ್ನು ತಂದು ಚೀಲದಲ್ಲಿ ಬಿಸಾಕುತ್ತಿದ್ದಾರೆ. ಇದು ನಮಗೆ ತಲೆನೋವಾಗಿದೆ. ಕೂಡಲೇ ಅಂತಹವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಪೌರಕಾರ್ಮಿಕರಾದ ಬಣ್ಣಾರಿ, ವಸಂತ್, ಗಣೇಶ್ ಮೊದಲಾದವರು ಆಗ್ರಹಿಸಿದ್ದಾರೆ.