ಸೋಮವಾರಪೇಟೆ, ಮಾ. 8: ಕಳೆದ ಕೆಲ ಸಮಯದಿಂದ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದ ವ್ಯಕ್ತಿಯೋರ್ವರಿಗೆ ಇಲ್ಲಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತು ಸದಸ್ಯರೋರ್ವರು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ಲೋಡರ್ಸ್ ಕಾಲೋನಿಯಲ್ಲಿ ವಾಸವಿರುವ ಗಂಗಾ ಎಂಬವರು ಕಳೆದ ಕೆಲ ಸಮಯದಿಂದ ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ 3 ತಿಂಗಳಿನಿಂದ ಮನೆಯೊಳಗೇ ಇದ್ದ ಗಂಗಾ ಅವರಿಗೆ ನಡೆದಾಡಲೂ ಸಹ ಸಾಧ್ಯವಿರಲಿಲ್ಲ. ಇದರೊಂದಿಗೆ ಖಾಯಿಲೆ ಉಲ್ಬಣಗೊಂಡು ಇಡೀ ವಠಾರದಲ್ಲಿ ದುರ್ನಾತ ಬೀರುತಿತ್ತು. ಸ್ಥಳೀಯ ಕೆಲವರು ಪ್ರಾಥಮಿಕವಾಗಿ ಆಸ್ಪತ್ರೆಗೆ ಸಾಗಿಸಿದ್ದರೂ, ಗಂಗಾ ಅವರನ್ನು ನೋಡಿ ಕೊಳ್ಳಲು ಸಂಬಂಧಿಕರಿಲ್ಲದ ಹಿನ್ನೆಲೆ ಆಸ್ಪತ್ರೆಯಿಂದ ಮನೆಗೆ ಕಳುಹಿಸಿದ್ದರು. ಮನೆಯೊಳಗೆ ಇದ್ದ ಗಂಗಾ ಅವರ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸಿದ್ದು, ಮನೆಯ ಸುತ್ತಮುತ್ತಲ ಪ್ರದೇಶದಲ್ಲಿ ಜನರು ಮೂಗುಮುಚ್ಚಿಕೊಂಡು ಓಡಾಡುವಂತಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ವಾರ್ಡ್ ಸದಸ್ಯ ಬಿ.ಆರ್. ಮಹೇಶ್ ಪ.ಪಂ. ಮುಖ್ಯಾಧಿಕಾರಿ ಬಿ.ಈ. ರಮೇಶ್ ಅವರೊಂದಿಗೆ ಚರ್ಚಿಸಿ, ಗಂಗಾ ಅವರ ಮನೆಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು. ಗಾಯಾಳುವನ್ನು ಮುಟ್ಟಲೂ ಸಹ ಹಿಂದೇಟು ಹಾಕುತ್ತಿದ್ದ ಸನ್ನಿವೇಶವನ್ನು ಕಂಡ ಮುಖ್ಯಾಧಿಕಾರಿ ರಮೇಶ್, ಸದಸ್ಯ ಮಹೇಶ್ ಅವರುಗಳು ತಾವೇ ಮುಂದೆ ನಿಂತು, ಪ.ಪಂ. ಸಿಬ್ಬಂದಿ ಆದಿಲ್ ಸೇರಿದಂತೆ ಪೌರಕಾರ್ಮಿಕರ ಸಹಾಯದಿಂದ ಗಾಯಾಳುವಿಗೆ ಸ್ನಾನ ಮಾಡಿಸಿ, ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳು ಗಂಗಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ರಕ್ತ ಪರೀಕ್ಷೆಯ ವರದಿ ಬಂದ ನಂತರ ಶಸ್ತ್ರಚಿಕಿತ್ಸೆ ನಡೆಸಲು ವೈದರು ಸಿದ್ಧತೆ ಕೈಗೊಂಡಿದ್ದಾರೆ.