ಕೂಡಿಗೆ, ಮಾ. 8: ಪಕ್ಷದ ಕಾರ್ಯಕರ್ತರು ಪಕ್ಷದ ತತ್ವ ಸಿದ್ದಾಂತಗಳ ಮೂಲಕ ಸಂಘಟಿತರಾಗಿ ಪಕ್ಷದ ಬೆಳವಣಿಗೆಗೆ ಸಹಕರಿಸಬೇಕು ಎಂದು ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ರಾಬಿನ್ ದೇವಯ್ಯ ಹೇಳಿದರು. ಅವರು ಕೂಡಿಗೆ ವಲಯ ಮಟ್ಟದ ಬಿ.ಜೆ.ಪಿ. ಕಾರ್ಯಕರ್ತರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತಾನಾಡಿ ಬೂತ್ ಮಟ್ಟದಿಂದಲೇ ಪಕ್ಷ ಬಲವರ್ಧನೆಗೆ ಒತ್ತು ನೀಡಬೇಕು. ಮುಂದಿನ ಎರಡು ತಿಂಗಳಲ್ಲಿ ಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಬಿ.ಜೆ.ಪಿ. ಪಕ್ಷವನ್ನು ಗ್ರಾಮ ಪಂಚಾಯಿತಿಯ ಮೂಲಕ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಾರ್ಯಕರ್ತರು ಶ್ರಮಿಸಬೇಕು. ಕೇಂದ್ರ, ರಾಜ್ಯ ಸರ್ಕಾರದ ಹೊಸ ಹೊಸ ಯೋಜನೆಯನ್ನು ಗ್ರಾಮಸ್ಥರಿಗೆ ತಿಳಿಸುವಂತಾಗಬೇಕು ಎಂದರು. ಈ ಸಂದರ್ಭ ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುದ್ದಪ್ಪ ಮಾತನಾಡಿ ಬಿ.ಜೆ.ಪಿ. ಪಕ್ಷದ ಎಲ್ಲಾ ಕಾರ್ಯಕರ್ತರು ಪಕ್ಷದ ನೀತಿ ನಿಯಮಗಳನ್ನು ಅರಿತುಕೊಂಡು ಅದರ ಮೂಲಕ ತಮ್ಮ ಕಾರ್ಯ ನಿರ್ವಹಿಸಬೇಕು ಎಂದರು. ಈ ಸಂದರ್ಭ ನೂತನ ಸಾಲಿನ ಜಿಲ್ಲಾಧ್ಯಕ್ಷ ಹಾಗೂ ಕಾರ್ಯದರ್ಶಿ ನಿಕಟ ಪೂರ್ವ ಅಧ್ಯಕ್ಷಗಳನ್ನು ಕೂಡಿಗೆ ಸಮಿತಿಯ ವತಿಯಿಂದ ಸನ್ಮಾನ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೂಡಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೆ.ಟಿ. ಗಿರೀಶ್ ವಹಿಸಿದ್ದರು.
ಸಭೆಯಲ್ಲಿದ್ದ ಕಾರ್ಯಕರ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಮಂಡಿಸಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯರಾದ ಸಬಿತ ಚೆನ್ನಕೇಶವ, ಗಣೇಶ, ತಾಲೂಕು ಬಿ.ಜೆ.ಪಿ. ಉಪಾಧ್ಯಕ್ಷ ಕೆ.ಕೆ. ಭೋಗಪ್ಪ, ಪ್ರಧಾನ ಕಾರ್ಯದರ್ಶಿ ಕೆ.ವರದ, ತಾಲೂಕು ಬಿ.ಜೆ.ಪಿ. ಎಸ್.ಟಿ ಘಟಕದ ಅಧ್ಯಕ್ಷ ಪ್ರಭಾಕರ್, ಎಸ್.ಸಿ ಘಟಕ ಅಧ್ಯಕ್ಷ ಕುಮಾರಸ್ವಾಮಿ, ಕೂಡಿಗೆ ಗ್ರಾಮ ಪಂಚಾಯಿತಿಯ ಬಿ.ಜೆ.ಪಿ. ಬೆಂಬಲಿತ ಸದಸ್ಯರು, ವಿವಿಧ ಘಟಕಗಳ ಪ್ರಮುಖರು, ವಿವಿಧ ಸ್ಥಾನೀಯ ಸಮಿತಿಗಳ ಅಧ್ಯಕ್ಷರು ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.