ಗೋಣಿಕೊಪ್ಪ ವರದಿ, ಮಾ. 7: ವಿವಿಧ ಇಲಾಖೆಗಳ ಸಹಯೋಗದಲ್ಲಿ ತಾ. 11 ಮತ್ತು 12 ರಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಪ್ರಾತ್ಯಕ್ಷಿಕೆ ಕೇಂದ್ರದಲ್ಲಿ ಎರಡು ದಿನಗಳ ಕಿಸಾನ್ ಮೇಳ ಆಯೋಜಿಸಲಾಗಿದೆ.

ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದೆ.

ಮೇಳದಲ್ಲಿ ಕಾಫಿ, ಕಾಳುಮೆಣಸು, ಶುಂಠಿಬೆಳೆಯ ನೂತನ ತಾಂತ್ರಿಕತೆಗಳು ಮತ್ತು ಸಮಗ್ರ ಕೃಷಿ ಪದ್ಧತಿಗಳ ಕುರಿತು ನುರಿತ ವಿಜ್ಞಾನಿಗಳಿಂದ ವಿಚಾರ ಸಂಕಿರಣದ ಮೂಲಕ ಸಲಹೆ, ಮಾಹಿತಿ ಕಾರ್ಯಕ್ರಮ ಇದೆ. ಸುಮಾರು 20 ವಸ್ತುಗಳ ಪ್ರದರ್ಶನವಿದೆ.

ವಸ್ತುಪ್ರದರ್ಶನ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ನೆರವೇರಿಸಲಿದ್ದಾರೆ. ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸಿಇಒ ಕೆ. ಲಕ್ಷ್ಮೀಪ್ರಿಯಾ ಪಾಲ್ಗೊಳ್ಳಲಿದ್ದಾರೆ ಎಂದು ಕೆವಿಕೆ ಪ್ರಕಟಣೆ ತಿಳಿಸಿದೆ.