ಸಿದ್ದಾಪುರ, ಮಾ. 8: ಕಾಡಾನೆಗಳನ್ನು ಕಾಫಿ ತೋಟದೊಳಗಿ ನಿಂದ ಓಡಿಸಲು ಹೋದ ಅರಣ್ಯಾಧಿ ಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಕಾಡಾನೆಗಳು ಅಟ್ಟಿಸಿಕೊಂಡು ಬಂದ ಘಟನೆ ಭಾನುವಾರ ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ಚೆಟ್ಟಳ್ಳಿ, ವ್ಯಾಪ್ತಿಯ ಮೋದೂರು, ಹೊರೂರು ಹಾಗೂ ಈರಳೆವಳಮುಡಿ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯಾಧಿಕಾರಿ ಸುಬ್ರಾಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.ಕಾರ್ಯಾಚರಣೆಯ ಸಂದರ್ಭ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಕಾಫಿ ತೋಟ ದಿಂದ ಕಾಡಾನೆಗಳನ್ನು ಓಡಿಸಲು ಪಟಾಕಿ ಸಿಡಿಸಿದರು. ಈ ವೇಳೆ ಕಾಡಾನೆಗಳ ಹಿಂಡಿನ ಪೈಕಿ 2 ಹೆಣ್ಣಾನೆಗಳು ಅರಣ್ಯಾಧಿಕಾರಿ ಸುಬ್ರಾಯ ಹಾಗೂ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಬಂದು ದಾಳಿ ನಡೆಸಲು ಮುಂದಾಗಿವೆ. ಸಮಯ ಪ್ರಜ್ಞೆಯಿಂದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ತೋಟದೊಳಗೆ ಓಡಿ ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ.ಭಾನುವಾರದಂದು ಬೆಳಿಗ್ಗೆ 9 ರಿಂದ ಕಾಫಿ ತೋಟದೊಳಗೆ ಅರಣ್ಯಾಧಿಕಾರಿಗಳು ಸೇರಿದಂತೆ 15 ಮಂದಿ ಸಿಬ್ಬಂದಿ ಪಟಾಕಿ ಸಿಡಿಸಿ ಕಾರ್ಯಾಚರಣೆಯನ್ನು ನಡೆಸಿದರು. ಈ ಸಂದರ್ಭ 3 ಬೃಹತ್ ಗಾತ್ರದ ಕಾಡಾನೆಗಳು ಹಾಗೂ ಸಣ್ಣ ಆನೆಗಳು ಕಂಡು ಬಂದಿತ್ತು ಎಂದು ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ತಿಳಿಸಿದರು.ಚೆಟ್ಟಳ್ಳಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ನಡೆಸಲಾಯಿತು. ಆದರೆ ಕಾಡಾನೆಗಳು ತೋಟಗಳನ್ನು ಬಿಟ್ಟು ಕದಲದಿರುವದು ಅರಣ್ಯ ಇಲಾಖಾಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ, ಸಾರ್ವಜನಿಕರಿಗೆ ಮಾಹಿತಿ ನೀಡಿ ಮತ್ತೊಮ್ಮೆ ಕಾರ್ಯಾಚರಣೆ ನಡೆಸಲಾಗುವುದೆಂದು ಅರಣ್ಯಾಧಿ ಕಾರಿ ಸುಬ್ರಾಯ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗಳಾದ ಚರಣ್ ಕುಮಾರ್, ಮಾದೇವ ನಾಯಕ್ ಹಾಗೂ ಇನ್ನಿತರರು ಇದ್ದರು. - ವಾಸು