ಮಡಿಕೇರಿ, ಮಾ. 8: ಸದಾ ನಿರ್ಲಕ್ಷ್ಯಕ್ಕೆ ಒಳಗಾಗುವದರೊಂದಿಗೆ; ಒಂದೊಮ್ಮೆ ನಿರ್ವಹಣೆಯಿಲ್ಲದೆ ಕಾಡು ಪಾಲಾಗಿದ್ದ; ನಗರದ ಐತಿಹಾಸಿಕ ರಾಜರ ಗದ್ದುಗೆ ಪ್ರಸಕ್ತ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಕಾಳಜಿಯಿಂದ ನಿರ್ವಹಣೆಗೊಂಡು ಪ್ರವಾಸಿಗರು ಸೇರಿದಂತೆ ಸ್ಥಳೀಯರ ವಾಯು ವಿಹಾರ ಕೇಂದ್ರವಾಗಿ ಮಾರ್ಪಾಡುಗೊಂಡಿದೆ. ಕೆಲವು ವರ್ಷದ ಹಿಂದೆ 2013ರಲ್ಲಿ ಅಂದಿನ ‘ಮೂಡಾ’ ಅಧ್ಯಕ್ಷರಾಗಿದ್ದ ಶಜಿಲ್ ಕೃಷ್ಣನ್ ಅವಧಿಯಲ್ಲಿ ಸುಮಾರು ರೂ. 67 ಲಕ್ಷ ವೆಚ್ಚದಲ್ಲಿ 4 ಎಕರೆಯಷ್ಟು ಗದ್ದುಗೆ ಜಾಗಕ್ಕೆ ಬೇಲಿಯೊಂದಿಗೆ ಅತಿಕ್ರಮಣಕ್ಕೆ ತಡೆಯೊಡ್ಡಲಾಯಿತು.

ಅದಾಗಲೇ ಈ ಪ್ರದೇಶದ ಸುಮಾರು 15 ಎಕರೆ ಜಾಗ ಅತಿಕ್ರಮಣಗೊಂಡು; ಕಾನೂನು ಬಾಹಿರವಾಗಿ ಮನೆ ಇತ್ಯಾದಿ ತಲೆಯೆತ್ತುವಂತಾಯಿತು. ಈ ಸಂದರ್ಭ ಗದ್ದುಗೆ ಅತಿಕ್ರಮಣ ಜಾಗ ವಿರೋಧಿ ಹೋರಾಟ ಸಮಿತಿ ರಚನೆಗೊಂಡು; ಅಂದಿನ ಹಿರಿಯ ರಾಜಕೀಯ ಮುತ್ಸದ್ಧಿ ದಿ.ಬಿ.ಬಿ. ಶಿವಪ್ಪ ನೇತೃತ್ವದಲ್ಲಿ ಜಿಲ್ಲೆಯ ಸಂತರು ಸೇರಿದಂತೆ ಪ್ರತಿಭಟನೆಯೂ ನಡೆದಿತ್ತು.

ಈ ಸಂಬಂಧ ವೀರಶೈವ ಸಮಾಜದ ಮುಖಂಡರಾಗಿದ್ದ ದಿ.ಎಸ್. ಪಿ. ಮಹದೇವಪ್ಪ ಹಾಗೂ ಇತರರು ನ್ಯಾಯಾಲಯದ ಮೆಟ್ಟಿಲೇರುವದರೊಂದಿಗೆ; ನ್ಯಾಯಾಲಯವು ಕೂಡ ಅತಿಕ್ರಮಣ ತೆರವಿಗೆ ಆದೇಶ ನೀಡಿರುವದು ಗೋಚರಿಸಿದೆ. ಬಳಿಕ ಇಚ್ಚಾಶಕ್ತಿಯ ಕೊರತೆಯಿಂದ ಯಾವದೇ ಕಾನೂನು ಕ್ರಮ ಇದುವರೆಗೆ ಜರುಗಿಲ್ಲ ಎನ್ನುವದು ಜನವಲಯದ ಮಾತು.

ಇದೇ ಕಾಲಘಟ್ಟದಲ್ಲಿ ‘ಮೂಡಾ’ದಿಂದ ಇರುವ ಜಾಗಕ್ಕೆ ಮರು ಅತಿಕ್ರಮಣಗೊಳ್ಳದಂತೆ ಸುತ್ತು ಬೇಲಿ ನಿರ್ಮಿಸಿ; ಪ್ರವಾಸಿಗರಿಗೆ ಆಕರ್ಷಣೆಗಾಗಿ ಹೂದೋಟ, ಮಕ್ಕಳ ಉದ್ಯಾನ, ಪಾದಚಾರಿ ಮಾರ್ಗ, ನೀರಿನ ಕಾರಂಜಿ ಇತ್ಯಾದಿ ರೂಪುಗೊಳ್ಳುವಂತಾಯಿತು. ಆ ಬಳಿಕ ನಿರ್ವಹಣೆಯ ಕೊರತೆಯಿಂದ ಎಲ್ಲವೂ ಮಣ್ಣುಪಾಲಾಗು ವಂತಾಯಿತು. ಕೇವಲ ಗದ್ದುಗೆಯನ್ನಷ್ಟೇ ಕರ್ನಾಟಕ ಪ್ರಾಚ್ಯವಸ್ತು ಇಲಾಖೆ ನಿರ್ವಹಣೆ ಮಾಡತೊಡಗಿತ್ತು.

ಜಿಲ್ಲಾಧಿಕಾರಿ ಕಾಯಕಲ್ಪ : ಈ ಬಗ್ಗೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ದಿ. ಅನುರಾಗ್ ತಿವಾರಿ ಅವರ ಅವಧಿಯಲ್ಲಿ ಸಾಕಷ್ಟು ಕಾಯಕಲ್ಪ ಗೊಂಡು; ಪ್ರವಾಸಿಗರಿಗೆ ಟಿಕೆಟ್ ಸಹಿತ ವೀಕ್ಷಣಾ ವ್ಯವಸ್ಥೆ, ಮಹಿಳೆಯರು

(ಮೊದಲ ಪುಟದಿಂದ) ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ, ಉಪಹಾರಗೃಹ ಇತ್ಯಾದಿ ಕಟ್ಟಡಗಳು ತಲೆಯೆತ್ತುವಂತಾಯಿತು. ಈ ಅಧಿಕಾರಿಯ ವರ್ಗಾವಣೆ ಬೆನ್ನಲ್ಲೇ ಎಲ್ಲವೂ ಮತ್ತೆ ಕಾಡು ಪಾಲಾಗಿ; ಈ ದುರವಸ್ಥೆಯತ್ತ ‘ಶಕ್ತಿ’ ಬೆಳಕು ಚೆಲ್ಲಿತ್ತು. ಸುಧಾರಣಾ ಕ್ರಮ : ಪ್ರಸ್ತುತ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಮ್ಮ ನೇತೃತ್ವದಲ್ಲಿ ರಾಜಾಸೀಟ್ ನಿರ್ವಹಣಾ ಸಮಿತಿಗೆ ಗದ್ದುಗೆಯ ಮೇಲುಸ್ತುವಾರಿ ನೋಡಿಕೊಳ್ಳುವಂತೆ ನಿರ್ದೇಶಿಸಿದ್ದಾರೆ. ಆ ಮುಖಾಂತರ ನಿತ್ಯ ಗದ್ದುಗೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ; ಸ್ಥಳೀಯರ ಹೊರತು ಪಡಿಸಿ ರೂ. 10 ಪ್ರವೇಶ ದರ ನಿಗಧಿಗೊಳಿಸಿದ್ದಾರೆ. ಕನಿಷ್ಟ ಮೂಲಭೂತ ವ್ಯವಸ್ಥೆಗೆ ಒತ್ತು ನೀಡಿದ್ದಾರೆ.

ನಿತ್ಯವೂ ತೋಟಗಾರಿಕಾ ಇಲಾಖೆ ಮುಖಾಂತರ ಇಲ್ಲಿ ಗಿಡಗಳ ನಿರ್ವಹಣೆಯೊಂದಿಗೆ ನೀರಿನ ವ್ಯವಸ್ಥೆ; ಹಗಲು ಮತ್ತು ರಾತ್ರಿ ವೇಳೆಯಲ್ಲೂ ರಕ್ಷಣಾ ವ್ಯವಸ್ಥೆ, ಇನ್ನಿತರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ಮಾತ್ರವಲ್ಲದೆ; ರಜಾ ದಿನಗಳಲ್ಲಿ ಹಾಗೂ ವಾರದ ಕಡೆಯ ಮೂರು ದಿನಗಳಲ್ಲಿ ಗದ್ದುಗೆ ವೀಕ್ಷಣೆಗೆ ಸರಾಸರಿ 600 ರಿಂದ ಸಾವಿರದಷ್ಟು ಪ್ರವಾಸಿಗರು ಬರುವಂತಾಗಿದೆ. ಹೀಗಾಗಿ ಪ್ರಸ್ತುತ ಗದ್ದುಗೆಯ ನಿರ್ವಹಣೆಗೆ ತನ್ನದೇ ವ್ಯವಸ್ಥೆಯಲ್ಲಿ ಆದಾಯ ಕ್ರೋಢೀಕರಿಸುವಂತಾಗಿದೆ. ಈ ಗದ್ದುಗೆಯ ಪ್ರವೇಶ ದ್ವಾರದ ಬಳಿ ಒಂದೊಮ್ಮೆ ದುರ್ನಾತ ಬೀರುತ್ತಿದ್ದ ನಗರಸಭೆಯ ದನದ ದೊಡ್ಡಿಯ ಕಟ್ಟಡ ಮಾಯವಾಗಿದೆ.

ಬದಲಾಗಿ ಗದ್ದುಗೆಯ ಪರಿಸರ ಪ್ರವಾಸಿಗರ ಆಕರ್ಷಿಸುವ ತಾಣದೊಂದಿಗೆ; ವಾಯುವಿಹಾರಿಗಳಿಗೂ ಸೆಳೆಯುವಂತಾಗಿದೆ. ತೋಟಗಾರಿಕಾ ಇಲಾಖೆಯ ಮೇಲುಸ್ತುವಾರಿ ಅಧಿಕಾರಿ ಪ್ರಮೋದ್ ಪ್ರಕಾರ; ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಸ್ಥಳವನ್ನು ಹಂತ ಹಂತವಾಗಿ ಉನ್ನತೀಕರಣದೊಂದಿಗೆ ಮತ್ತಷ್ಟು ಸುಧಾರಣೆಗೊಳಿಸಲು ನಿಗಾವಹಿಸಲಾಗುತ್ತದೆ.