ಇಂದು ಮಹಿಳೆಯರ ಕಾರ್ಯಕ್ಷೇತ್ರದ ವಿಸ್ತಾರ ಅಗಾಧವಾಗಿ ಬೆಳೆದು ನಿಂತಿದೆ. ಸಮಾಜದ ಮುಖ್ಯ ವಾಹಿನಿಯಲ್ಲಿಯೂ ಮಹಿಳೆಯ ನಾಗಾಲೋಟ ಭರದಿಂದಲೇ ಸಾಗುತ್ತಿದೆ. ಪುರುಷನ ಜೀವನದ ಪ್ರತಿ ಹಂತದಲ್ಲಿಯೂ ಹೆಣ್ಣಿನ ಪಾತ್ರ ಮಹತ್ವವಾದದ್ದು. ಜನ್ಮಕೊಟ್ಟು ಸಲಹುವ ತಾಯಿಯಾಗಿ, ಅಕ್ಕರೆಯ ಸೋದರಿಯಾಗಿ, ಸಾಂತ್ವನ ನೀಡುವ ಸ್ನೇಹಿತೆಯಾಗಿ, ಭಾವನೆಗಳ ಬೆಸುಗೆಯ ಮಡದಿಯಾಗಿ, ಪ್ರೀತಿ ಚಿಲುಮೆಯ ಮಗಳಾಗಿ. ಇಂದು ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಮುನ್ನಡೆಯುತ್ತ ಜಗತ್ತಿನ ದೃಷ್ಟಿಯನ್ನು ತನ್ನೆಡೆಗೆ ಸೆಳೆದಿದ್ದಾಳೆ.

ಸುಸ್ಥಿರ ಅಭಿವೃದ್ಧಿ, ಶಾಂತಿ, ಸುರಕ್ಷತೆಯನ್ನು ಸಾಧಿಸಲು ಮಹಿಳೆಯರ ಭಾಗಿತ್ವವನ್ನು ಪುರುಷ ಸಮಾನವಾಗಿ ಉತ್ತೇಜಿಸಲು ಹಲವು ವರ್ಷಗಳಿಂದ ವಿಶ್ವಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಮಹಿಳಾ ದಿನಾಚರಣೆಯನ್ನು ಉತ್ತೇಜಿಸುತ್ತಿವೆ. ಅಷ್ಟೇ ಅಲ್ಲದೇ ಲಿಂಗ ಸಮಾನತೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವುದಕ್ಕೂ ಸಹ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ. ಅಂತರರಾಷ್ಟ್ರೀಯ ಮಹಿಳೆಯರ ದಿನ ಮೊದಲ ಬಾರಿಗೆ ಹೊರ ಹೊಮ್ಮಿದ್ದು ಕೂಲಿ ಚಳುವಳಿ (ಲೇಬರ್ ಮೂವ್ಮೆಂಟ್ಸ್) ಚಟುವಟಿಕೆಯು ಉತ್ತರ ಅಮೇರಿಕಾ ಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ. 1909 ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ “ಅಂತರರಾಷ್ಟ್ರೀಯ ಮಹಿಳೆಯರ ದಿನ” ಫೆಬ್ರವರಿ 28 ರಂದು ಕಂಡು ಬಂತು. ಅಮೇರಿಕಾದ ಸಾಮಾಜವಾದಿ ಪಕ್ಷ ಈ ದಿನವನ್ನು ಕೆಲಸದ ಪರಿಸ್ಥಿತಿಯನ್ನ ವಿರೋಧಿಸಿ ನ್ಯೂಯಾರ್ಕ್ ನಗರದಲ್ಲಿ ನಡೆದ “ಸರ್ಕಾರಿ ಕಾರ್ಮಿಕರ ಚಳುವಳಿ”ಯಲ್ಲಿ ಪ್ರತಿಭಟಿಸಿದ ಮಹಿಳೆಯರಿಗಾಗಿ ಅರ್ಪಿಸಲಾಯಿತು.

ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರರಾಷ್ಟ್ರೀಯ ಮಹಿಳೆಯರ ದಿನವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ, ಅದು ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕøತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲದರಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. 1975ರ “ಅಂತರರಾಷ್ಟ್ರೀಯ ಮಹಿಳೆಯರ ದಿನ”ದ ಸಮಯದಲ್ಲಿ, ಮಾರ್ಚ್ 8 ರಂದು ವಿಶ್ವ ಸಂಸ್ಥೆಯ ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದವು.

ವಿದ್ಯೆ, ಕ್ರೀಡೆ, ರಾಜಕೀಯ, ಕಲೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮನಾಗಿ ನಿಂತು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ಬದುಕುತ್ತಿರುವ ಮಹಿಳೆಯರು, ಅಂಥವರು ಬೆರಳೆಣಿಕೆಯಷ್ಟು ಮಾತ್ರ. ಆದರೆ ನಿತ್ಯ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ, ಭ್ರೂಣ ಹತ್ಯೆ, ವೇಶ್ಯಾವಾಟಿಕೆ, ಆಸಿಡ್ ದಾಳಿ, ವರದಕ್ಷಿಣೆ ಹಿಂಸೆ, ಬಲಿ ಇವೂ ಕಣ್ಮುಂದೆ ಹಾಯ್ದು ‘ಮಹಿಳಾ ದಿನಾಚರಣೆ’ಗೆ ಅರ್ಥವಿದೆಯೇ ಎಂದು ಪ್ರಶ್ನಿಸುವಂತಾಗಿದೆ.

ಹೆಣ್ಣು ಪ್ರಕೃತಿಯ ಅದ್ಭುತ ಕೊಡುಗೆ. ಹೆಣ್ಣಿಲ್ಲದ ಮನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರ ಸಹಕಾರ, ಪ್ರೀತಿ ಇದ್ದರೆ ಹೆಣ್ಣು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಯಶಸ್ವಿಯಾಗುತ್ತಾಳೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಸ್ತ್ರೀತ್ವವನ್ನು, ಸ್ತ್ರೀಯರ ಸಾಮಾಜಿಕ, ಸಾಂಸ್ಕøತಿಕ, ಆರ್ಥಿಕ ಸಾಧನೆಗಳನ್ನು, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ. ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ವೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಗಬೇಕು. ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳೆಯರ ಸಾಧನೆಗೆ ಪೆÇ್ರೀತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕು. ಭಾರತೀಯ ಸಂಸ್ಕøತಿ ಮಹಿಳೆಗೆ ಕೊಟ್ಟ ಪೂಜ್ಯ ಸ್ಥಾನವನ್ನು ಜಗತ್ತಿನ ಇನ್ಯಾವ ಸಂಸ್ಕøತಿಯಲ್ಲೂ ನೀಡಿಲ್ಲ. ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’ (ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳಿರುತ್ತಾರೆ, ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆ) ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು, ಅದನ್ನು ಆಚರಣೆಗೆ ತರಬೇಕು. ಆಗ ಮಾತ್ರ ಈ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ.

- ಕಾನತ್ತಿಲ್ ರಾಣಿ ಅರುಣ್, ಮಡಿಕೇರಿ.