‘ಗೃಹಿಣೀ ಗೃಹ ಮುಚ್ಯತೇ’ ಎಂಬ ಕಾಲವೊಂದಿತ್ತು.’ ಒಬ್ಬ ಗೃಹಿಣಿ ಮನೆಯೊಳಗಿನ ಜವಾಬ್ದಾರಿಯನ್ನು ಹೊತ್ತು ಮನೆಯೊಳಗಿನ ವ್ಯವಹಾರಗಳಿಗಷ್ಟೇ ಸೀಮಿತವಾಗಿದ್ದಳು. ಆದರೆ ಈಗ ಕಾಲ ಬದಲಾಗಿದೆ. ಇಂದು ಮಹಿಳೆ ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಹೆಜ್ಜೆಯ ಛಾಪನ್ನು ಮೂಡಿಸುತ್ತಿದ್ದಾಳೆ. ಕೇವಲ ಸಂಸಾರದ ಅನಿವಾರ್ಯತೆಯನ್ನು ಮತ್ತು ಕೊರತೆಯನ್ನು ನೀಗಲು ಹೆಣ್ಣಿನ ಅವಶ್ಯಕತೆಯಿದ್ದ ಕಾಲ ಈಗ ಬದಲಾಗಿದೆ. ಗೃಹದೊಳಗಿನ ಎಲ್ಲಾ ಕೃತ್ಯಗಳನ್ನು ನಿಭಾಯಿಸುವ ಸಾಮಥ್ರ್ಯ ಗೃಹಿಣಿಗೆ ಮಾತ್ರ ಸಾಧ್ಯ. ಆದರೆ ಈಗ ಕಾಲ ಬದಲಾಗಿದೆ. ಗಂಡಿಗೆ ಸರಿ ಸಮಾನವಾಗಿ ಯಾವುದರಲ್ಲೂ ತಾನು ಕಡಿಮೆಯಿಲ್ಲ ಎನಿಸುವಷ್ಟು, ಹೊರಗಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ, ಸಮಾಜದ ಆಗುಹೋಗುಗಳಿಗೆ ದಿಟ್ಟವಾಗಿ ಸ್ಪಂದಿಸುತ್ತಿರುವ ಮಹಿಳೆ, ಎಲ್ಲಾ ಚಟುವಟಿಕೆಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾಳೆ.

ಹೆಣ್ಣನ್ನು ಪ್ರಕೃತಿ, ಇಳೆ, ಧರಿತ್ರಿ, ವಸುಂಧರೆ, ಭಾರತಾಂಬೆ, ಜನನಿ ಎಂದೆಲ್ಲಾ ಬಣ್ಣಿಸುತ್ತಾರೆ. ಆಕೆ ಮಮಕಾರ, ತಾಳ್ಮೆ, ತ್ಯಾಗ, ನೋವು, ಮನೆಯೊಳಗಿನ ಜವಾಬ್ದಾರಿ ಎಲ್ಲರಲ್ಲೂ ತನ್ನನ್ನು ಸಮರ್ಪಿಸಿಕೊಂಡಿರುತ್ತಾಳೆ. ಎಂತಹ ಕ್ಲಿಸ್ಟಕರ ಪರಿಸ್ಥಿತಿಯನ್ನೂ ನಿಭಾಯಿಸುವ ಶಕ್ತಿಯನ್ನೂ ಪಡೆದಿರುತ್ತಾಳೆ. ಸಂಸಾರವನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕೆಂಬ ಸ್ಪಷ್ಟ ಪರಿಕಲ್ಪನೆ ಆಕೆಗಿರುತ್ತದೆ. ಆದರೆ ಪರಾವಲಂಭಿಯಾಗಿ ಹೊರ ಜಗತ್ತಿನ ಅರಿವು ವಿದ್ಯೆ ಇಲ್ಲದೆ ಇಂದಿನ ಕಾಲದಲ್ಲಿ ಏನನ್ನು ತಾನೇ ಆಕೆ ಸಾಧಿಸಲು ಸಾದ್ಯ? ತನ್ನ ಕುಟುಂಬವನ್ನು ಹೇಗೆ ಪ್ರಗತಿಯೆಡೆಗೆ ಕೊಂಡೊಯ್ದು ಯಶಸ್ವಿಗೊಳಿಸಬಲ್ಲಳು?

ಇವೆಲ್ಲಕ್ಕಿಂತ ನೋವಿನ ಸಂಗತಿಯೆಂದರೆ ಸೃಷ್ಠಿ ಮಾತೆಯನ್ನೇ ಅಳಿಸಿ ಹಾಕುವಂತೆ, ಹೆಣ್ಣು ಭ್ರೂಣ ಹತ್ಯೆಯಂಥಾ ಘೋರ ಚಟುವಟಿಕೆಯಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ವರದಕ್ಷಿಣೆಯಂಥಾ ಕಿರುಕುಳಕ್ಕೆ ಅದೆಷ್ಟೋ ಅವಿದ್ಯಾವಂತೆ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ.

ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸುಲಭ ಮಾರ್ಗೋಪಾಯದಂತೆ ಮಹಿಳೆಯನ್ನು ಸುಶಿಕ್ಷಿತಳನ್ನಾಗಿ ಮಾಡುವುದು. ಶಿಕ್ಷಣವು ಪ್ರಗತಿಯತ್ತ, ತಿಳುವಳಿಕೆಯತ್ತ ಕೊಂಡೊಯುತ್ತದೆ. ಹೆಣ್ಣನ್ನು ಸಮಾಜ ಗುರುತಿಸುವಂತಾಗಬೇಕು. ಹೊರ ಪ್ರಪಂಚದ ಅರಿವು ತಿಳಿದಿರಬೇಕು. ಸಮಸ್ಯೆಗಳನ್ನು ಎದುರಿಸುವ ಸಾಮಥ್ರ್ಯ-ಧೈರ್ಯ ಬರಬೇಕು. ಇಂದಿನ ಕಾಲದಲ್ಲಿ ಹೆಣ್ಣು ಸಂಸಾರದ ಕಣ್ಣು ಹೌದು. ಸಮಾಜದ ಕಣ್ಣು ಹೌದು. ಸುಶಿಕ್ಷಿತ ಮಹಿಳೆ ಪ್ರಕೃತಿಯ ಕೊಡುಗೆ. ಬಾಳನ್ನು ಬೆಳಗುವವಳು. ಇಂದು ಹೆಣ್ಣು ವಿದ್ಯಾವಂತಳಾಗಿದ್ದಾಳೆ, ಪ್ರತಿಭಾವಂತಳಾಗಿದ್ದಾಳೆ. ಶಿಕ್ಷಣದಿಂದಾಗಿ ಆಕೆ ಕರ್ತವ್ಯ, ಸಂಸ್ಕøತಿ, ಸಂಪ್ರದಾಯ, ಆಚಾರ, ವಿಚಾರಗಳ ಬಗ್ಗೆ ಪಕ್ವವಾದ ತಿಳುವಳಿಕೆಯುಳ್ಳವಳಾಗಿದ್ದಾಳೆ. ಅವಳಲ್ಲಿ ಸಹನೆ, ಸಹೃದಯತೆಯ ಮೌಲ್ಯಗಳು ಹೆಚ್ಚಿವೆ. ಈಗಾಗಲೇ ವಿದ್ಯಾವಂತ ಮಹಿಳೆಯರು ಕ್ರಿಯಾತ್ಮಕವಾಗಿ ನಿರಂತರ ಕಾರ್ಯವೈಖರಿಯಿಂದ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಗಳಾಗಿದ್ದಾರೆ. ಅಡುಗೆ ಮನೆಯಿಂದ ಪ್ರಾರಂಭಗೊಂಡು ಇಡೀ ದೇಶವನ್ನೇ ಆಳುವಷ್ಟು ದಿಟ್ಟೆಯಾಗಿದ್ದಾಳೆ! ಕಲೆ, ಸಾಹಿತ್ಯ, ಕ್ರೀಡೆ, ವಿದ್ಯೆ ಎಲ್ಲದರಲ್ಲೂ ಮುಂದಿದ್ದಾಳೆ. ಸಕಲ ಸಮಸ್ಯೆಗಳಿಗೂ ಶಿಕ್ಷಣವೇ ಸಂಜೀವಿನಿ! ಮಹಿಳೆಯು ವಿದ್ಯಾವಂತಳಾದರೆ ಮನೆಯಲ್ಲೊಬ್ಬ ಶಿಕ್ಷಕಿ, ಗುರು ಇದ್ದಂತೆ. ಆರ್ಥಿಕವಾಗಿ, ಸ್ವಾವಲಂಬನೆಯನ್ನು ಹೊಂದಬಹುದು.

ಇಂದಿನ ದಿನಗಳಲ್ಲಿ ಹೆಣ್ಣು, ಗುರುವಾಗಿ, ವೈದ್ಯೆಯಾಗಿ, ವಿಜ್ಞಾನಿಯಾಗಿ, ನ್ಯಾಯಾಧೀಶಳಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಒಟ್ಟಿನಲ್ಲಿ ಹೇಳುವುದಾದರೆ ಆಕೆ ಒಂದು ಶಕ್ತಿಯಾಗಿ ತನ್ನ ಸಾಮಥ್ರ್ಯವನ್ನು ಹೊರ ಜಗತ್ತಿಗೆ ತೋರಿ ಜಗತ್ ವಿಖ್ಯಾತಿಯಾಗಿದ್ದಾಳೆ.

ಹೀಗಾಗಿ ಮಹಿಳೆ ಕೇವಲ ಸಂಸಾರದ ಕಣ್ಣಾಗಿರದೆ, ವಿದ್ಯಾವಂತಳಾಗಿ ಸಮಾಜದ ಕಣ್ಣು ಆಗಿದ್ದಾಳೆ. ವಿಶ್ವದ ಕಣ್ಣು ಆಗಿದ್ದಾಳೆ. ಸಂಸಾರದ ಅನುಭವದ ಜೊತೆಗೆ ಶಿಕ್ಷಣದ ಬೆಳಕು, ವಿದ್ಯೆಯ ಬೆಳಕು ಸೇರಿ ವಿಶ್ವವನ್ನೇ ತಾಳ್ಮೆ, ಅರಿವು, ಪ್ರೀತಿ, ಮಾರ್ಗದರ್ಶನದೊಂದಿಗೆ ಮಮತೆಯಿಂದ ಬೆಳಗುತ್ತಾ ಸಮರ್ಥಳೆನಿಸಿಕೊಳ್ಳುತ್ತಿದ್ದಾಳೆ...!

- ಕಾಡ್ಯಮಾಡ ರೀಟಾ ಬೋಪಯ್ಯ, ಸುಳುಗೋಡು.