ಹೆತ್ತವರ ಪ್ರೀತಿಯ ಮಗಳಾಗಿ, ಕಾಳಜಿಯುಕ್ತ ಸಹೋದರಿಯಾಗಿ, ಮಮತೆಯ ಮಡದಿಯಾಗಿ, ಜವಾಬ್ದಾರಿಯುತ ಸೊಸೆಯಾಗಿ, ವಾತ್ಸಲ್ಯಭರಿತ ತಾಯಿಯಾಗಿ, ಅತ್ತೆಯಾಗಿ, ಚಿಕ್ಕಮ್ಮ-ದೊಡ್ಡಮ್ಮಳಾಗಿ ಕೊನೆಗೆ ಅಜ್ಜಿಯಾಗಿ ಮಹಿಳೆ ನಿರ್ವಹಿಸುವ ಜವಾಬ್ದಾರಿಗಳು ಹತ್ತು ಹಲವು. ಹೆಣ್ಣು ಕುಟುಂಬದ ಕಣ್ಣು. ಕುಟುಂಬದ ನೆಮ್ಮದಿಗಾಗಿ, ಸುಖ-ಸಂತೋಷಕ್ಕಾಗಿ, ಪತಿ-ಮಕ್ಕಳ ಆರೈಕೆಗಾಗಿ ತನ್ನನ್ನು ತಾನು ಗಂಧದ ಕೊಡಿಯಂತೆ ತೇದು ಮನೆತುಂಬ ಸಂತಸದ ಗಂಧ ಹರಡುವವಳು ಮಹಿಳೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನ್ನ ಆಸೆ, ಆಕಾಂಕ್ಷೆಗಳನ್ನು ಗುಪ್ತಗಾಮಿನಿಯಾಗಿರಿಸಿ ಸಂಸಾರದ ರಥವನ್ನು ಎಳೆಯುವ ಮಹಿಳೆಗೆ ತಾಳ್ಮೆಯ ಖನಿ, ಸೇವೆಯ ಪ್ರತಿರೂಪ - ಅದೆಷ್ಟು ಆಪ್ಯಾಯಮಾನ ಪದಗಳು! ಇಷ್ಟೊಂದು ಜವಾಬ್ದಾರಿಗಳನ್ನು ಹೊತ್ತು ಮಹಿಳೆ ಅಂದು ಗೃಹಬಂಧಿಯಾಗಿರುತ್ತಿದ್ದಳು. ಮನೆಯಲ್ಲಿ ಮಕ್ಕಳಿಗೆ ಹಾಲುಣಿಸಿ, ಅನ್ನನೀಡಿ, ಅಕ್ಷರ ತಿದ್ದಿಸಿ, ತೀಡಿ, ಸಂಸ್ಕಾರ ಕಲಿಸಿ ಮಗುವನ್ನು ವ್ಯಕ್ತಿಯನ್ನಾಗಿಸುವ ಕೈಂಕರ್ಯ ಅನನ್ಯ. ಮುಂದಿನ ಭಾರತದ ಭಾವೀ ಪ್ರಜೆಗಳಾಗುವ ಮಕ್ಕಳನ್ನು ರೂಪಿಸುವ ಗುರುತರ ಹೊಣೆಗಾರಿಕೆಯನ್ನು ಕಿಂಚಿತ್ತೂ ಉಪೇಕ್ಷಿಸದೆ ‘ಹೆಣ್ಣು ಅಬಲೆಯಲ್ಲ, ಜವಾಬ್ದಾರಿಯುವ ಕರುಣಾಮಯಿ ಸಬಲೆ’ ಎನ್ನುವುದನ್ನು ನಿರೂಪಿಸುತ್ತಲೇ ದೂಡುವ ದಿನಗಳು ಸಾರ್ಥಕ ದಿನಗಳು. ಸಮಯ, ಸಂದರ್ಭಕ್ಕೆ ತಕ್ಕಂತೆ ತನ್ನಲ್ಲಿರುವ ದೌರ್ಬಲ್ಯಗಳನ್ನು ಮೆಟ್ಟಿನಿಂತು ಕುಟುಂಬ ನಿರ್ವಹಣೆಗಾಗಿ, ಎಲ್ಲರ ಏಳಿಗೆಗಾಗಿ ನಿಸ್ವಾರ್ಥತೆಯಿಂದ ಮೋಡದಂತೆ ತಾನು ಕರಗಿ ಮಳೆ ಹನಿಯಂತೆ ತಂಪೆರೆವ ಮಹಿಳೆಗೆ ಅವಳೇ ಸಾಟಿ, ಅದೇ ಸಾರ್ಥಕತೆ!! ಪ್ರತಿ ಹೆಜ್ಜೆಯಲ್ಲೂ ಕಾಲಕಾಲಕ್ಕೆ ಅನುಗುಣವಾಗಿ ಪ್ರಬುದ್ಧತೆ ಮೆರೆಯುತ್ತಾ ಕುಟುಂಬದ ಒಳಗೂ-ಹೊರಗೂ ಪ್ರಾಮಾಣಿಕವಾಗಿ ದುಡಿಯುತ್ತಾ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುತ್ತಿರುವ ಮಹಿಳೆಗಾಗಿಯೇ ಇರಬೇಕು ಈ ಕವಿವಾಣಿ-
‘ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ?’
ಆಳಿರಲಿ - ಅರಸನಿರಲಿ, ಯೋಧನಿರಲಿ, ರೈತನಿರಲಿ, ಋಷಿಯಿರಲಿ, ತಪಸ್ವಿಯಿರಲಿ, ಅವರೆಲ್ಲ ಒಬ್ಬೊಬ್ಬ ತಾಯಿಯ ಮಕ್ಕಳಾಗಿರುತ್ತಾರೆ. ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಎನ್ನುವ ಮಾತು ಈ ಎಲ್ಲ ಮಹಿಳೆಯರಿಗೆ ಅನ್ವಯಿಸುತ್ತದೆ. ತಾಯಿಯ ಕಾಲ ಬುಡದಲ್ಲಿ ಸ್ವರ್ಗವಿದೆ. ಸತ್ಯ-ಧರ್ಮ, ನ್ಯಾಯ-ನಿಷ್ಠೆ, ಸೇವೆ-ಪ್ರಾಮಾಣಿಕತೆ ಈ ಎಲ್ಲ ಮೌಲ್ಯಗಳು ಒಡಮೂಡುವುದು ಒಬ್ಬ ತ್ಯಾಗಮಯಿ ತಾಯಿಯ ಮಡಿಲಲ್ಲಿ.
ಇಂದು ಬದಲಾದ ಸಾಮಾಜಿಕ ಪರಿಸರದಲ್ಲಿ ಮಹಿಳೆ ಮೊದಲಿನಂತಿಲ್ಲ. ಹೆಚ್ಚು ಹೆಚ್ಚು ವಿದ್ಯಾವಂತಳಾಗುತ್ತಿದ್ದು, ಉನ್ನತವಾದ ಗೌರವದ ಹುದ್ದೆಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ತನ್ನ ಸ್ಥಾನ-ಮಾನಗಳನ್ನು ಭದ್ರಗೊಳಿಸಿಕೊಂಡಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ವಿದ್ಯಾವಂತ ಮಹಿಳೆ ತಾನೂ ಸಾಧಿಸಬಲ್ಲೆ ಎಂಬುದನ್ನು ಸೋದಾಹರಣವಾಗಿ ನಿರೂಪಿಸುತ್ತಿದ್ದಾಳೆ. 2014 ರಲ್ಲಿ (25.9.2014) ಭಾರತ ವಿಶ್ವದ ಪ್ರಥಮ ದೇಶವಾಗಿ ಮಂಗಳ ಗ್ರಹಯಾನ ಕೈಗೊಂಡು, ಮಂಗಳನ ಕಕ್ಷೆಯಲ್ಲಿ ಉಪಗ್ರಹವೊಂದನ್ನು ಯಶಸ್ವಿಯಾಗಿ ನಿಯೋಜನೆಗೊಳಿಸಿ ಅದ್ಭುತ ಸಾಧನೆ ಮಾಡಿರುವುದರಲ್ಲಿ ಮಹಿಳೆಯ ಪಾತ್ರ ಗಮನಾರ್ಹ ಎಂದು ಪ್ರಧಾನ ಮಂತ್ರಿಗಳಿಂದ ಪ್ರಶಂಸೆಗೆ ಪಾತ್ರರಾದ ಮಹಿಳೆಯರು ಸ್ತ್ರೀ ಕುಲಕ್ಕೆ ತಿಲಕಪ್ರಾಯರು. ಅಂದು ದೇಶಕ್ಕೆ ದೇಶವೇ ಹೆಮ್ಮೆಪಟ್ಟು ಶ್ಲಾಘಿಸಿದೆ. ಹೀಗೆ ಭಾರತದ ಮಹಿಳೆಯರ ಬಗ್ಗೆ ಹೇಳಲು ಬಹಳ ಸಾಧನೆಗಳಿವೆ.
ಏರ್ ಇಂಡಿಯಾ ಇರಬಹುದು, ಇಂಡಿಯನ್ ಏರ್‍ಲೈನ್ಸ್ ಇರಬಹುದು, ಭಾರತ ವಿಶ್ವದಲ್ಲಿಯೇ ಅತೀ ಹೆಚ್ಚು ಮಹಿಳಾ ಪೈಲೆಟ್‍ಗಳನ್ನು ಹೊಂದಿದೆ ಎಂದು ಅಂದಿನ ಏವಿಯೇಷನ್ ಮುಖ್ಯಸ್ಥ ಜಯಂತು ಸಿನ್ಹಾ ಅವರು ಹೇಳಿರುವುದು ಮಹಿಳಾ ಮಣಿಗಳ ಸಾಮಥ್ರ್ಯಕ್ಕೊಂದು ಗರಿ! ಏರ್‍ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಅವರಿಂದ ಸಮಾರಂಭವೊಂದರಲ್ಲಿ ‘ಈ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಅಪಾರ’ ಎಂಬ ಮೆಚ್ಚುಗೆಯ ಮಾತನ್ನಾಡಿದ್ದು, ಮಹಿಳೆಯ ಕಾರ್ಯಕ್ಷೇತ್ರದ ವ್ಯಾಪ್ತಿ, ವಿಸ್ತಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಹಿಳಾ ಲೋಕಕ್ಕೇ ಕಚಗುಳಿಯಿಡುವಂತೆ ಲೆಫ್ಟಿನೆಂಟ್ ಹೀನಾ ಜೈಸ್ವಾಲ್ 2015 ರ ಜನವರಿ 5 ರಂದು ಪ್ರಥಮಾ ಮಹಿಳಾ ಪೈಲಟ್ ಇಂಜಿನಿಯರ್ ಆಗಿ ಶೋಭಿಸಿದ್ದಾರೆ.
ಮಹಿಳೆ ಕಾಲಿಡದ ಕ್ಷೇತ್ರವೇ ಇಲ್ಲವೆನ್ನುವಂತೆ ಮಹಿಳಾ ಸಾರಧ್ಯದಲ್ಲಿಯೇ ನಡೆದ ಜಿಸ್ಯಾಟ್ ಉಡಾವಣೆ ಇಸ್ರೋ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ‘ಮಹಿಳೆಯರು ಎಂಬ ಕಾರಣಕ್ಕೆ ಅವರಿಗೆ ಇಲ್ಲಿ ವಿಶೇಷ ಪ್ರಾಧ್ಯಾನ್ಯತೆ ನೀಡಲಿಲ್ಲ. ಸಮರ್ಥರೆಂಬ ಕಾರಣಕ್ಕೆ ಅವರಿಗೆ ಈ ಯೋಜನೆಯ ನೇತೃತ್ವ ವಹಿಸಲಾಗಿದೆ’ ಎಂದು ಇಸ್ರೋದ ಉಪಗ್ರಹ ನಿಯಂತ್ರಣ ಕೇಂದ್ರದ ನಿರ್ದೇಶಕರಾಗಿದ್ದ ಟಿ.ಕೆ. ಅಲೆಕ್ಸ್ ಅವರು ಪತ್ರಿಕಾಗೋಷ್ಠಿಯಲ್ಲಿ ನುಡಿದಿದ್ದು ಮಹಿಳೆ ಸಮಾಜದಲ್ಲಿ ದ್ವಿತೀಯ ದರ್ಜೆ ಪ್ರಜೆ ಅಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಮಹಿಳೆಯರು ಮಂತ್ರಿಗಳಾಗಿ ಅತ್ಯಂತ ಮಹತ್ತರವಾದ ರಕ್ಷಣಾ ಖಾತೆ, ದೇಶದ ಜೀವನಾಡಿಯಾದ ಹಣಕಾಸು ಖಾತೆ, ದೇಶದ ಛಾಪನ್ನು ವಿಶ್ವದಲ್ಲಿ ಮೂಡಿಸುವ ವಿದೇಶಾಂಗ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ಸೈ ಎನ್ನಿಸಿಕೊಂಡ ಮಹಿಳೆಗೆ ವರ್ಷದ 365 ದಿನಗಳೂ ಮಹಿಳಾ ದಿನವೇ!! ಹೀಗಿರುವಾಗ ಮಾರ್ಚ್ 8 ಮಹಿಳಾ ದಿನ ಎನ್ನುವ ಒಂದು ದಿನ ಬೇಕೇ? ಎನ್ನುವುದು ಪ್ರಶ್ನಾರ್ಹ ಸಂಗತಿ.
ಆದರೆ ಇಂದು ಕೌಟುಂಬಿಕ ನೆಲೆಯಿಂದ ಅವಲೋಕಿಸಿದಾಗ ಸ್ತ್ರೀ ಶೋಷಣೆಯ ಪಟ್ಟಿಯಲ್ಲಿ ಭಾರತ ಜಗತ್ತಿನ ಅಗ್ರ ಪಂಕ್ತಿಯಲ್ಲಿದೆ ಎನ್ನುವುದು ಖೇದಕರ. ವರದಕ್ಷಿಣೆ, ಸತಿ ಸಹಗಮನದಂತೆ ಕ್ರೂರ ಪದ್ಧತಿಗಳನ್ನು ತೊಡೆದುಹಾಕಲು ಜೀವನ ಪರ್ಯಂತ ಶ್ರಮಿಸಿದ ಮಹಾನ್ ವ್ಯಕ್ತಿಗಳ ನಾಡಿನಲ್ಲೆ ಹೆಣ್ಣು ಭ್ರೂಣ ಹತ್ಯೆಯಂತಹ ಪಾಪ ಕಾರ್ಯಗಳು ನಡೆಯುತ್ತಿವೆ. ಪತ್ನಿ ಜನ್ಮ ನೀಡಿದ್ದು ಹೆಣ್ಣು ಮಗುವಿಗೆ ಎಂದು ತಿಳಿದರೆ ಗಂಡನಾದವನು ಹಲವೆಡೆ ಅದನ್ನು ನೋಡಲಿಕ್ಕೂ ಇಷ್ಟಪಡುವುದಿಲ್ಲ. ಹಾಗಾಗಿ ಬಾಲ್ಯ ವಿವಾಹ, ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ ಇನ್ನೂ ಹತ್ತು ಹಲವು ಪಿಡಿಗುಗಳ ಬಗ್ಗೆ ಜಾಗೃತಿ ಮೂಡಿಸುವ ವರ್ಷಕ್ಕೊಂದು ಮಹಿಳಾ ದಿನ ಬೇಕೇ ಬೇಕು.
ವಿದ್ಯಾವಂತ ಮಹಿಳೆಯಿಂದ ಕುಟುಂಬ ಛಿದ್ರವಾಗುತ್ತಿದೆ. ಕುಟುಂಬ ಭಾಗವಾಗಲು ಮಹಿಳೆಯೇ ಕಾರಣ ಎನ್ನುವ ಕೂಗೂ ಇದೆ. ಆದುದರಿಂದ ನಿತ್ಯ ಬದಲಾಗುತ್ತಿರುವ ಸಾಮಾಜಿಕ ಹಾಗೂ ಕೌಟುಂಬಿಕ ಪರಿಸರದಲ್ಲಿ ಮಹಿಳೆ ಅತ್ಯಂತ ಜಾಗರೂಕಳಾಗಿ ಹೆಜ್ಜೆಯಿಡಬೇಕು. ಸಾಂವಿಧಾನಿಕವಾಗಿ, ಸಾಮಾಜಿಕವಾಗಿ ಮಹಿಳೆಗೆ ಸಮಾನ ಹಕ್ಕಿದೆ, ಧೈರ್ಯಯಿದೆ, ಮನೋಸ್ಥೈರ್ಯಯಿದೆ. ಈ ಸಮಾನತೆ ಅಪಾರ್ಥವಾಗದಂತೆ ಮಹಿಳೆ ತನಗೆ ತಾನೇ ಕೆಲವು ನೈತಿಕ ಕಟ್ಟಳೆಗಳನ್ನು ವಿಧಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ವಿದ್ಯಾವಂತರಾದಂತೆ ಉದ್ಯೋಗ ಪಡೆದು ಆರ್ಥಿಕ ದೃಢತೆ ಪಡೆದಂತೆಲ್ಲ ಫ್ಯಾಶನ್ ಎನ್ನುವ ಮಾಯಾಲೋಕದಲ್ಲಿ ಸಿಲುಕಿ ಪಾಶ್ಚಿಮಾತ್ಯ ಸಂಸ್ಕøತಿಯನ್ನು ಅನುಕರಣೆ ಮಾಡುತ್ತಾ ತುಂಡು ಬಟ್ಟೆ ಧರಿಸಿ ಪಬ್‍ಗಳಲ್ಲಿ, ಕ್ಲಬ್‍ಗಳಲ್ಲಿ ಪಾನಮತ್ತರಾಗಿ ಕುಣಿದು ಕುಪ್ಪಳಿಸುವುದು ಸಮಾನತೆಯಲ್ಲ, ಅನಾಗರಿಕತೆಯ ಸಂಕೇತ ಎಂಬ ಪ್ರಬುದ್ಧತೆಯನ್ನು ಮಹಿಳೆ ಪಡೆಯಬೇಕಾಗಿದೆ. ಮಹಿಳೆಗೆ ಪ್ರಕೃತಿ ದತ್ತವಾದ ಕೆಲವು ವರಗಳಿರುವಂತೆ, ಕೆಲವು ನಿಬಂಧನೆಗಳೂ ಇವೆ. ಅತಿಯಾದ ಸ್ತ್ರ ಸ್ವಾತಂತ್ರವು ಬದುಕಿಗೆ ಕಪ್ಪು ಚುಕ್ಕೆಯಾಗದಂತೆ ಆಕೆಗೆ ಸದಾ ಜಾಗೃತಿಯಿರಬೇಕು.
ಬದುಕಿನ ಮುನ್ನಡೆಯಲ್ಲಿ ಎಡವದೆ, ದೃತಿಗೆಡದೆ ಬದುಕಿನ ಸವಾಲುಗಳನ್ನು ಧೈರ್ಯದಿಂದ, ಸ್ವಾಭಿಮಾನದಿಂದ ಎದುರಿಸುವ ಛಲಗಾತಿಯರಾಗಿ ಮುನ್ನಡೆದರೆ ಸಮಾನತೆ ಗೌರವ ಪೂರ್ವಕವಾಗಿ ತಾನಾಗಿಯೇ ಲಭಿಸುತ್ತದೆ. ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ಅದರ ಸಾಧಕ-ಬಾಧಕಗಳ ಬಗ್ಗೆ, ಸ್ವರಕ್ಷಣೆಯ ಬಗ್ಗೆ, ಸಮಸ್ಯೆಗಳ ನಿವಾರಣೆಯ ಮಾರ್ಗಗಳ ಬಗ್ಗೆ ಆಳವಾದ ಚಿಂತನೆ ಅಗತ್ಯ. ಆಧುನೀಕರಣ, ಜಾಗತೀಕರಣ ಎಂಬೆಲ್ಲ ಮಾತುಗಳು ಜಾಗೃತೀಕರಣ ಎನ್ನುವ ಪದದ ಮುಂದೆ ಸವಕಲಾಗುತ್ತವೆ. ಮಹಿಳೆ ಹೆಚ್ಚು ಹೆಚ್ಚು ಜಾಗೃತಳಾಗಬೇಕು, ಜಾಗೃತ ಮಹಿಳೆ ಯಶಸ್ವೀ ಮಹಿಳೆ!!
- ಕಟ್ಟೇರ ಪಿ. ಸುಶೀಲ ಅಚ್ಚಪ್ಪ, ಶ್ರೀಮಂಗಲ.